ನವದೆಹಲಿ: 2019ರಲ್ಲಿ ಭಾರತವು ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿತ್ತು. ಈ ವೇಳೆ, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈಗ ಮತ್ತೊಂದು ಭಯಾನಕ ಸತ್ಯ ಹೊರ ಬಿದ್ದಿದೆ. ಪಾಕಿಸ್ತಾನ ಮತ್ತು ಭಾರತಗಳೆರಡೂ ಅಣ್ವಸ್ತ್ರ ಯುದ್ಧಕ್ಕೆ (Nuclear War) ಆಲ್ಮೋಸ್ಟ್ ಸಿದ್ಧವಾಗಿದ್ದವು! ಹೌದು, ಅಮೆರಿಕದ ಮಾಜಿ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ (Mike Pompeo) ಅವರು ತಮ್ಮ ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
Never Give an Inch: Fighting for the America I Love ಎಂಬ ಹೆಸರಿನ ಪುಸ್ತಕ ಬರೆದಿರುವ ಮೈಕ್ ಪೊಂಪಿಯೊ ಅನೇಕ ರಹಸ್ಯ ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ. ಈ ಪುಸ್ತಕ ಜಾಗತಿಕವಾಗಿ ಬಿಡುಗಡೆಯಾಗಿದೆ. 2019ರ ಫೆಬ್ರವರಿ 27-28 ರಂದು ಅಮೆರಿಕ-ಉತ್ತರ ಕೊರಿಯಾ ಶೃಂಗಸಭೆಗಾಗಿ ಹನೋಯಿಯಲ್ಲಿದ್ದೆ. ಆ ಸಂದರ್ಭದಲ್ಲಿ ಈ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ‘ಅಣ್ವಸ್ತ್ರ’ ಬಿಕ್ಕಟ್ಟನ್ನು ತಪ್ಪಿಸಲು ತಮ್ಮ ತಂಡವು ಎರಡೂ ದೇಶಗಳೊಂದಿಗೆ ರಾತ್ರಿಯಿಡೀ ಕೆಲಸ ಮಾಡಿತು ಎಂದು ಹೇಳಿಕೊಂಡಿದ್ದಾರೆ.
2019ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಪೈಪೋಟಿಗೆ ಬಿದ್ದು, ಅಣ್ವಸ್ತ್ರ ಬಳಸಲು ಎಷ್ಟು ಹತ್ತಿರವಾಗಿದ್ದವು ಎಂಬುದು ಜಗತ್ತಿಗೆ ಸರಿಯಾಗಿ ತಿಳಿದಿದೆ ಎಂದು ನಾನು ಭಾವಿಸುವುದಿಲ್ಲ. ಸತ್ಯವೆಂದರೆ, ಉತ್ತರವೂ ನನಗೆ ನಿಖರವಾಗಿ ತಿಳಿದಿಲ್ಲ. ಆದರೆ, ಅವರೆಡೂ ರಾಷ್ಟ್ರಗಳು ತುಂಬಾ ಹತ್ತಿರದಲ್ಲಿದೆ ಎಂದು ನನಗೆ ಗೊತ್ತಿತ್ತು ಎಂದು ಪೊಂಪಿಯೊ ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: PM Modi | ಯುದ್ಧಕ್ಕೆ ಇದು ಸಮಯವಲ್ಲ ಎಂಬ ಮೋದಿ ಮಾತು ರಷ್ಯನ್ನರ ಮೇಲೆ ಪ್ರಭಾವ ಬೀರಿದೆ: ಅಮೆರಿಕ
40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ಭಯೋತ್ಪಾದನಾ ಕೃತ್ಯಕ್ಕೆ ಪ್ರತಿಯಾಗಿ ಭಾರತವು 2019ರ ಫೆಬ್ರವರಿಯಲ್ಲಿ ಪಾಕಿಸ್ತಾನ ಆಕ್ರಮಿತ ಪ್ರದೇಶದ ಬಾಲಾಕೋಟ್ ಸ್ಥಳದ ಮೇಲೆ ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಆ ಮೂಲಕ ಭಯೋತ್ಪಾದನಾ ತರಬೇತಿ ನೆಲೆಗಳನ್ನು ಧ್ವಂಸ ಮಾಡಿತ್ತು. ಬಳಿಕ ಉಭಯ ರಾಷ್ಟ್ರಗಳ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.