ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಬಾಹ್ಯಾಕಾಶದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ, ಜನಮನ್ನಣೆ ಗಳಿಸಿದೆ. ಇದೀಗ ಮತ್ತೊಂದು ಸಾಹಸಕ್ಕೆ ಅಣಿಯಾಗುತ್ತಿದೆ. 2030ರ ಹೊತ್ತಿಗೆ ಇಸ್ರೋ ಬಾಹ್ಯಾಕಾಶ ಪ್ರವಾಸೋದ್ಯಮ (Space Tourism) ವ್ಯವಹಾರಕ್ಕೂ ಅಡಿ ಇಡಲು ಮುಂದಾಗಿದೆ. ಸರ್ಕಾರದ ಉತ್ತೇಜನಕ್ಕೆ ಅನುಗುಣವಾಗಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಬೇಕಾದ ಕಾರ್ಯಗಳನ್ನು ಮಾಡಲಾಗುತ್ತಿದೆ. ಬಾಹ್ಯಾಕಾಶ ಪ್ರವಾಸೋದ್ಯಮ ವಲಯಕ್ಕೂ ಭಾರತವು ಕಾಲಿಡಲಿದ್ದು, ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಸ್ಪರ್ಧಾತ್ಮಕ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ ಎಂದು ಇಸ್ರೋ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ಪ್ರಕಾರ, ಬಾಹ್ಯಾಕಾಶ ಪ್ರವಾಸಕ್ಕೆ ಪ್ರತಿ ಟಿಕೆಟ್ ವೆಚ್ಚವು ಸುಮಾರು 6 ಕೋಟಿ ರೂಪಾಯಿ ಇರಲಿದೆ. ಸದ್ಯ ಅಸ್ತಿತ್ವದಲ್ಲಿ ಜಾಗತಿಕ ಕಂಪನಿಗಳು ಕೈಗೊಳ್ಳುವ ಶುಲ್ಕಕ್ಕೆ ಅನುಗುಣವಾಗಿಯೇ ಈ ದರ ಇರಲಿದೆ. ಭಾರತವು ತನ್ನದೇ ಬಾಹ್ಯಾಕಾಶ ಪ್ರವಾಸೋದ್ಯಮ ಮಾದರಿಯನ್ನು ಶೀಘ್ರವೇ ಹೊಂದಲಿದ್ದು, ಇದಕ್ಕಾಗಿ ಕೆಲಸ ನಡೆದಿದೆ. ಈ ಪ್ರವಾಸವು ಸುರಕ್ಷಿತ ಮತ್ತು ಮರುಬಳಕೆಯಾಗಿರಲಿದೆ. ಟಿಕೆಟ್ ಶುಲ್ಕವು ಅಂದಾಜು 6 ಕೋಟಿ ರೂಪಾಯಿ ಇರಲಿದೆ. ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವ ಜನರು ತಮ್ಮನ್ನು ತಾವು ಗಗನಯಾತ್ರಿಗಳು ಎಂದು ಹೇಳಿಕೊಳ್ಳಬಹುದು ಎಂದು ಇಸ್ರೋ ಚೇರ್ಮನ್ ಎಸ್ ಸೋಮನಾಥ್ ಅವರು ತಿಳಿಸಿದ್ದಾರೆ.
ಆದರೆ, ಇಸ್ರೋ ಯಾವ ಮಾದರಿಯ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಿದೆ ಎಂಬುದನ್ನು ತಿಳಿಸಿಲ್ಲ. ಇಸ್ರೋ ಕೈಗೊಳ್ಳುವ ಬಾಹ್ಯಾಕಾಶ ಪ್ರವಾಸವು ಸಬ್ ಆರ್ಬಿಟಲ್ ಅಂದರೆ ಸುಮಾರು 100 ಕಿ.ಮೀ ಎತ್ತರವರೆಗೆ. ಆಲ್ಮೋಸ್ಟ್ ಬಾಹ್ಯಾಕಾಶದ ಅಂಚಿನವರೆಗೂ ಹೋಗಬಹುದು. ಇನ್ನು ಆರ್ಬಿಟಲ್ (400 ಕಿ.ಮೀ ಎತ್ತರ) ಆಗಿರುತ್ತದೆಯೇ ಎಂಬುದನ್ನು ಸೋಮನಾಥ ಅವರು ಸ್ಪಷ್ಟಪಡಿಸಿಲ್ಲ. ಭೂಮಿಯಿಂದ ಬಾಹ್ಯಾಕಾಶದ ಅಂಚಿಗೆ ಪ್ರವಾಸ ಕೈಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಗೆ 6 ಕೋಟಿ ರೂ. ವೆಚ್ಚವಾಗಲಿದೆ.
ಈ ರೀತಿಯ ಬಾಹ್ಯಾಕಾಶ ಪ್ರವಾಸದಲ್ಲಿ ಯಾತ್ರಿಗಳು ಬಾಹ್ಯಾಕಾಶದ ಅಂಚಿನಲ್ಲಿ ಸುಮಾರು 15 ನಿಮಿಷಗಳನ್ನು ಕಳೆಯುತ್ತಾರೆ. ಅತಿ ಕಡಿಮೆ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತಾರೆ. ಈ ಪ್ರವಾಸಕ್ಕೆ ಬಳಸಲಾಗುವು ಫ್ಲೈಟ್‌ಗಳನ್ನು ಮರುಬಳಕೆಯ ರಾಕೆಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: BTS 2022 | ಬಾಹ್ಯಾಕಾಶ, ರಾಕೆಟ್ ಸೈನ್ಸ್‌ನಲ್ಲಿ ತೊಡಗಿಸಿಕೊಂಡ 100 ನವೋದ್ಯಮಗಳಿಗೆ ಇಸ್ರೊ ನೆರವು
ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಇಸ್ರೋ ಈಗಾಗಲೇ ಭಾರತದ ಉಪ-ಕಕ್ಷೆಯ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಕಾರ್ಯಸಾಧ್ಯತೆಯ ಅಧ್ಯಯನವನ್ನು ಪ್ರಾರಂಭಿಸಿದೆ ಎಂದು ಹೇಳಿದ್ದರು.