Site icon Vistara News

Jammu-Kashmir Election: ರಂಗೇರಿದ ಚುನಾವಣೆ- ಫಾರೂಖ್‌ ಭೇಟಿಯಾದ ರಾಹುಲ್‌, ಖರ್ಗೆ; ಕಾಂಗ್ರೆಸ್‌-NC ಮೈತ್ರಿ ಕನ್ಫರ್ಮ್‌

Jammu-Kashmir Election

ಶ್ರೀನಗರ: ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ಘೋಷಣೆಯಾಗಿರುವ ಜಮ್ಮು ಮತ್ತು ಕಾಶ್ಮೀರ(Jammu-Kashmir Election)ದಲ್ಲಿ ಚುನಾವಣೆ ಕಾವು ಶುರುವಾಗಿದೆ. ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಶ್ರೀನಗರಕ್ಕೆ ಬಂದಿಳಿದ ಉಭಯ ನಾಯಕರು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ(NC) ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಗುಪ್ಕಾರ್‌ ರಸ್ತೆಯಲ್ಲಿರುವ ಫಾರೂಖ್‌ ಅಬ್ದುಲ್ಲಾ ಅವರ ನಿವಾಸದಲ್ಲಿ ಈ ಸಭೆ ನಡೆದಿದ್ದು, ಎನ್‌ಸಿ ಪಕ್ಷದ ಉಪಾಧ್ಯಕ್ಷ ಓಮರ್‌ ಅಬ್ದುಲ್ಲಾ ಮತ್ತು ಸಿಪಿಐ(ಎಂ) (ಎಂವೈ) ತಾರಿಗಾಮಿ ಕೂಡ ಭಾಗಿಯಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಫಾರೂಖ್‌ ಅಬ್ದುಲ್ಲಾ, ಸಭೆ ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಮೈತ್ರಿಯು ಹಾದಿಯಲ್ಲಿದ್ದೇವೆ. ಮತ್ತು ಅದು ದೇವರ ದಯೆಯಿಂದ ಉತ್ತಮವಾಗಿ ಮುಂದುವರಿಯುತ್ತದೆ. ಇಂದು ಸಂಜೆಯೊಳಗೆ ಎಲ್ಲಾ ಅಂತಿಮಗೊಳ್ಳಲಿದ್ದು, ಎಲ್ಲಾ 90 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ರಾಜ್ಯದ ಜನ ನಮ್ಮ ಜೊತೆ ಇರುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.

ಖರ್ಗೆ ಅವರು ಎಕ್ಸ್‌ನಲ್ಲಿ ಸಭೆಯ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ನಾವು ರಾಹುಲ್ ಗಾಂಧಿಯವರೊಂದಿಗೆ ಇಂದು ಶ್ರೀನಗರದಲ್ಲಿ ಶ್ರೀ ಫಾರೂಕ್ ಅಬ್ದುಲ್ಲಾ ಮತ್ತು ಜೆಕೆಎನ್‌ಸಿ ಉಪಾಧ್ಯಕ್ಷ ಶ್ರೀ ಒಮರ್ ಅಬ್ದುಲ್ಲಾ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಆರ್ಟಿಕಲ್‌ 370 ರದ್ದುಗೊಳಿಸಿದ ಬಳಿಕ ಅಂದರೆ ಬರೋಬ್ಬರಿ ಹತ್ತು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಜಮ್ಮು-ಕಾಶ್ಮೀರ ಮೂರು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಸೆ. 18, ಸೆ.15 ಮತ್ತು ಅಕ್ಟೋಬರ್‌ 1 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 4 ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: Assembly Election Date: ಆರ್ಟಿಕಲ್‌ 370 ರದ್ಧತಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮೊದಲ ಚುನಾವಣೆಗೆ ಮುಹೂರ್ತ ಫಿಕ್ಸ್‌; ದಿನಾಂಕ ಘೋಷಿಸಿದ EC

Exit mobile version