Site icon Vistara News

Jehanabad Stampede: ಬಿಹಾರ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಭೀಕರ ಕಾಲ್ತುಳಿತ; 7 ಮಂದಿ ಸಾವು

Jehanabad Stampede

ಪಾಟ್ನಾ: ಬಿಹಾರದ ಜೆಹಾನಾಬಾದ್ ಜಿಲ್ಲೆಯ ದೇವಾಲಯವೊಂದರಲ್ಲಿ ಸೋಮವಾರ (ಆಗಸ್ಟ್‌ 12) ನಸುಕಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಬಾರಾವರ್ ಬೆಟ್ಟಗಳಲ್ಲಿರುವ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದಾರೆ (Jehanabad Stampede).

ʼʼಘಟನೆಯಲ್ಲಿ 7 ಮಂದಿ ಭಕ್ತರು ಮೃತಪಟ್ಟಿರುವುದು ದೃಡವಾಗಿದೆ. 7 ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜೆಹಾನಾಬಾದ್‌ಗೆ ಕರೆ ತರಲಾಗಿದೆʼʼ ಎಂದು ಜೆಹಾನಾಬಾದ್ ಟೌನ್ ಇನ್ಸ್‌ಪೆಕ್ಟರ್‌ ದಿವಾಕರ್ ಕುಮಾರ್ ವಿಶ್ವಕರ್ಮ ಖಚಿತಪಡಿಸಿದ್ದಾರೆ. ಶ್ರಾವಣ ಮಾಸದಲ್ಲಿ ನಡೆಸಲಾಗುವ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಭಕ್ತರು ಹೆಚ್ಚಿನ ದೇವಾಲಯದಲ್ಲಿ ಜಮಾಯಿಸಿದ್ದರು. ಗಾಯಾಳುಗಳಿಗೆ ಸ್ಥಳೀಯ ಮಖ್ದುಮ್ಪುರ್ ಮತ್ತು ಸದರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

“ಜನಸಂದಣಿಯನ್ನು ನಿರ್ವಹಿಸಲು ದೇವಾಲಯದ ಆಡಳಿತ ಮಂಡಳಿ ವಿಫಲವಾಗಿದ್ದೇ ಈ ಅನಾಹುತಕ್ಕೆ ಕಾರಣ. ಜನಸಂದಣಿ ನಿರ್ವಹಣೆಯಲ್ಲಿ ತೊಡಗಿದ್ದ ಕೆಲವು ಸ್ವಯಂಸೇವಕರು ಭಕ್ತರ ಮೇಲೆ ಲಾಠಿ ಪ್ರಯೋಗಿಸಿದ್ದರಿಂದಲೇ ಕಾಲ್ತುಳಿತಕ್ಕೆ ಸಂಭವಿಸಿತು” ಎಂದು ಸಂತ್ರಸ್ತೆಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ತಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲಿದೆ ಈ ದೇವಸ್ಥಾನ?

ಶಿವಾಲಯವಾದ ಬಾಬಾ ಸಿದ್ಧನಾಥ ದೇವಾಲಯವು ಮೂಲತಃ ಸಿದ್ಧೇಶ್ವರನಾಥ ದೇವಸ್ಥಾನ ಎಂದು ಗುರುತಿಸಲ್ಪಡುತ್ತದೆ. ಇದು ಬರಾವರ್ ಬೆಟ್ಟಗಳ ಶ್ರೇಣಿಯ ಅತ್ಯುನ್ನತ ಶಿಖರದಲ್ಲಿದೆ. ಈ ದೇವಾಲಯವನ್ನು ಕ್ರಿ.ಶ. 7ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ನಿರ್ಮಿಸಲಾಯಿತು. ಸ್ಥಳೀಯರು ಈ ದೇವಾಲಯವನ್ನು ಜರಾಸಂಧನ ಮಾವ ಬನ ರಾಜ ನಿರ್ಮಿಸಿದ್ದಾನೆಂದು ಹೇಳುತ್ತಾರೆ. ಈ ಜಿಲ್ಲೆಯನ್ನು ಬರಾವರ್ ಗುಹೆ ಎಂದೂ ಕರೆಯುತ್ತಾರೆ. ಬರಾವರ್ ಗುಹೆ ಜೆಹಾನಾಬಾದ್‌ನಿಂದ 25 ಕಿ.ಮೀ. ದೂರದಲ್ಲಿರುವ ಮಖ್ದುಮ್ಪುರ್ ಬಳಿಯ ಗುಡ್ಡಗಾಡು ಪ್ರದೇಶದಲ್ಲಿದೆ.

ಹತ್ರಾಸ್‌ ದುರಂತ

ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 121 ಮಂದಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಜುಲೈ 2ರಂದು ಉತ್ತರ ಪ್ರದೇಶದ ಹತ್ರಾಸ್‌ದಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು. ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ (Bhole Baba) ಆಯೋಜಿಸಿದ್ದ ಸತ್ಸಂಗದ ವೇಳೆ ಈ ಕಾಲ್ತುಳಿತ ನಡೆದಿತ್ತು.

ದುರಂತದ ಹಿನ್ನೆಲೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ಸ್ವಯಂ ಘೋಷಿತ ʼದೇವ ಮಾನವʼ ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕ್ಕಟ್ಟಾದ ಸ್ಥಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.

ಪೊಲೀಸ್‌ ತನಿಖೆಯ ಪ್ರಾಥಮಿಕ ವರದಿಯು, ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು. ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ತಿಳಿಸಿದೆ.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

Exit mobile version