Site icon Vistara News

kargil vijay diwas: ಭಾರತದ ಬೆನ್ನಿಗೆ ಇರಿದ ಪಾಕಿಗಳನ್ನು ನಮ್ಮ ಯೋಧರು ಮಟ್ಟ ಹಾಕಿದ್ದು ಹೇಗೆ?

kargil

ವಾಜಪೇಯಿ ಸ್ನೇಹಹಸ್ತ, ಮೋಸ ಮಾಡಿದ ಪಾಕ್

1999ರ ಫೆಬ್ರವರಿಯಲ್ಲಿ ಪಾಕ್‌ನೊಂದಿಗೆ ಶಾಂತಿ ಸಾಧಿಸುವ ಸಂದೇಶದೊಂದಿಗೆ ಅಂದಿನ ನಮ್ಮ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲಾಹೋರ್‌ಗೆ ಬಸ್ ಯಾತ್ರೆ ಕೈಗೊಂಡರು. ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್ ಷರೀಫ್ ಸ್ನೇಹಹಸ್ತಕ್ಕೆ ಕೈಚಾಚಿದರು. ಅದೇ ವೇಳೆ, ಕಾರ್ಗಿಲ್‌ನಲ್ಲಿ ಒಳನುಸುಳುವ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡಿತ್ತು ಪಾಕಿಸ್ತಾನ ಸೇನೆ. ಜನವರಿ- ಫೆಬ್ರವರಿಯಲ್ಲಿ ಇಲ್ಲಿ ಭಯಂಕರ ಚಳಿ ಇರುವುದರಿಂದ ಭಾರತದ ಯೋಧರು ಪ್ಯಾಟ್ರೋಲಿಂಗ್ ಮಾಡುವುದಿಲ್ಲ. ಇದೇ ಸನ್ನಿವೇಶದಲ್ಲಿ ಪಾಕಿಸ್ತಾನ ಸೇನೆಯ ಕೆಲವು ತುಕಡಿಗಳು ಕಳ್ಳರಂತೆ ಗಡಿ ನಿಯಂತ್ರಣ ರೇಖೆಯ ಒಳನುಸುಳಿ ಕಾರ್ಗಿಲ್‌ನ ಬೆಟ್ಟಗಳಲ್ಲಿ ಡೇರೆ ಹೂಡಿ ಕುಳಿತರು.

ಆಪರೇಷನ್ ಬದ್ರ್ ಎಂಬ ಗುಪ್ತನಾಮದಲ್ಲಿ ನಡೆದ ಆ ಕಾರ್ಯಾಚರಣೆಯ ಮುಖ್ಯ ಗುರಿ ಕಾಶ್ಮೀರ ಮತ್ತು ಲಡಾಕ್ ನಡುವಿನ ಕೊಂಡಿಯನ್ನು ಒಡೆದು, ಭಾರತ ಪಡೆಗಳು ಸಿಯಾಚಿನ್ ಗ್ಲೇಸಿಯರ್‌ನಿಂದ ಹಿಂದೆ ಸರಿಯುವಂತೆ ಮಾಡುವುದಾಗಿತ್ತು. ಇದರ ಯಾವ ಪರಿವೆಯೂ ನವಾಜ್ ಷರೀಫ್ ಅವರಿಗಿರಲಿಲ್ಲ. ಈ ವಿಷಯವನ್ನು 2007ರಲ್ಲಿ ಅವರೇ ಸ್ವತಃ ಬಹಿರಂಗ ಮಾಡಿದ್ದರು. ಪಾಕ್ ಯೋಧರ ಜತೆಗೆ ಉಗ್ರರೂ ಇದ್ದರು. ಪಾಕಿಸ್ತಾನ ಸೇನೆಯು ಮೊದಲಿಗೆ ಇದು ಬಂಡುಕೋರರ ಕೃತ್ಯ ಎಂದು ಹೇಳಿ ತಿಪ್ಪೆ ಸಾರಿಸಲು ಯತ್ನಿಸಿತು. ಆದರೆ, ಕದನ ಬಿಗಡಾಯಿಸಿದಾಗ ನಿಜ ಒಪ್ಪಿಕೊಂಡಿತು. ಅಂದಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುರ‍್ರಫ್ ಹಾಗೂ ಮತ್ತೊಬ್ಬ ಸೇನಾಧಿಕಾರಿ ಅಜೀಜ್ ಜತೆ ಕಾರ್ಗಿಲ್ ವಿಷಯಕ್ಕೆ ಸಂಬಂಧಿಸಿ ನಡೆಸಿದ ಸಂವಹನ ಸಂದೇಶಗಳನ್ನು ಭಾರತ ಸಂಗ್ರಹಿಸಿ, ಹೊರ ಜಗತ್ತಿಗೆ ಇದು ಗೊತ್ತಾಗುವಂತೆ ಮಾಡಿತು.

ಕುರಿ‌ ಮೇಯಿಸುವವರಿಂದ ಮಾಹಿತಿ

1999ರ ಮೇ ತಿಂಗಳಲ್ಲೇ ಭಾರತೀಯ ಸೈನ್ಯಕ್ಕೆ ನುಸುಳುಕೋರರ ಪತ್ತೆ ಹತ್ತಿತು. ಆರಂಭದಲ್ಲಿ, ಇದು ಉಗ್ರಗಾಮಿಗಳ ಕೃತ್ಯ ಇರಬೇಕು ಅಂದುಕೊಂಡರು. ಮೇ ೩ರಂದು ಬೆಟ್ಟಗುಡ್ಡಗಳಲ್ಲಿ ತಿರುಗಾಡುವ ಕುರಿಗಾಹಿಗಳು ಈ ನುಸುಳುಕೋರರ ಮಾಹಿತಿಯನ್ನು ಭಾರತೀಯ ಸೇನೆಗೆ ನೀಡಿದರು. ಮೇ ೫ರಂದು ಇವರನ್ನು ವಿಚಾರಿಸಲು ಹೋದ ಭಾರತೀಯ ಗಡಿಭದ್ರತಾ ಪಡೆಯ ಐವರು ಯೋಧರನ್ನು ಪಾಕಿಗಳು ಕೊಂದುಹಾಕಿದರು. ಪಾಕ್ ಸೈನ್ಯದ ಚಲನೆ ಖಚಿತವಾಯಿತು. ಪ್ರಧಾನಿ ವಾಜಪೇಯಿ ಹಾಗೂ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ ಅವರಿಗೆ ಮಾಹಿತಿ ಹೋಯಿತು. ಅವರು ಪಾಕ್ ಸೈನ್ಯವನ್ನು ಹೊರದೂಡಲು ಸೈನ್ಯಕ್ಕೆ ಮುಕ್ತಹಸ್ತ ನೀಡಿದರು. ಭೂಸೇನಾ ಮುಖ್ಯಸ್ಥ ಜ.ವೇದಪ್ರಕಾಶ್ ಮಲಿಕ್ ಹಾಗೂ ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅನಿಲ್ ಯಶವಂತ ಟಿಪ್ನಿಸ್ ಮುಂದಿನ ಕಾರ್ಯಾಚರಣೆಯ ಆಗುಹೋಗುಗಳನ್ನು ರೂಪಿಸಿದರು. ಕಾರ್ಯಾಚರಣೆಗೆ `ಆಪರೇಷನ್ ವಿಜಯ್’ ಎಂದು ಹೆಸರಿಡಲಾಯಿತು. ಕಾರ್ಗಿಲ್ ಪ್ರದೇಶದ ಪ್ರಮುಖ ಬೆಟ್ಟವಾದ ಟೈಗರ್ ಹಿಲ್ ಜೊತೆಗೆ ದ್ರಾಸ್, ಕಸ್ಕರ್, ಮುಷ್ಕೋಹ್ ಬೆಟ್ಟಗಳನ್ನೂ ಪಾಕಿಗಳು ಹಿಡಿದಿಟ್ಟುಕೊಂಡಿದ್ದರು.

ಟೈಗರ್ ಹಿಲ್‌ನ ಅಂತಿಮ ಕದನ

ಕಾರ್ಗಿಲ್- ದ್ರಾಸ್ ಪ್ರಾಂತ್ಯದಲ್ಲಿ ಟೈಗರ್ ಹಿಲ್ ಪ್ರಮುಖವಾಗಿತ್ತು. ಇದನ್ನು ಏರಿ ಕುಳಿತಿದ್ದ ಪಾಕಿಗಳನ್ನು ಹಿಮ್ಮೆಟ್ಟಿಸದೆ ವಿಜಯ ಪೂರ್ಣವಾಗಲು ಸಾಧ್ಯವಿರಲಿಲ್ಲ. ಇದು ಭಾರತದ ಕಡೆಯಿಂದ ಏರಲು ತುಂಬಾ ಕಠಿಣವಾದ ಮೈ ಹೊಂದಿದೆ. ಎತ್ತರದಲ್ಲಿ ಪಾಕ್ ಸೈನಿಕರು ಕುಳಿತಿದ್ದುö, ಕೆಳಗಿನಿಂದ ಬರುತ್ತಿದ್ದ ಭಾರತೀಯ ಸೈನಿಕರನ್ನು ಸುಲಭವಾಗಿ ಸಾಯಿಸುತ್ತಿದ್ದರು. ಇಲ್ಲಿಂದ ಅವರಿಗೆ ಭಾರತದ ಹೆದ್ದಾರಿ ಎನ್‌ಎಚ್1ಎ ಕಾಣಿಸುತ್ತಿತ್ತು. ಅಲ್ಲಿಂದಲೇ ಹೆದ್ದಾರಿಯ ಮೇಲೆ ಬಾಂಬ್ ಸುರಿಮಳೆಯನ್ನೂ ಸುರಿಸಿ, ಭಾರತೀಯ ಸೇನೆಯ ವಾಹನಗಳು ಓಡಾಡಲಾಗದಂತೆ ಮಾಡಿಬಿಟ್ಟಿದ್ದರು. ಇದನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತುö. ಜುಲೈ ೧ರ ಹೊತ್ತಿಗೆ ಟೈಗರ್ ಹಿಲ್‌ನ ಅಕ್ಕಪಕ್ಕದ ಬೆಟ್ಟಗಳನ್ನು 8 ಸಿಖ್ ರೆಜಿಮೆಂಟ್ ವಶಪಡಿಸಿಕೊಂಡಿತ್ತು. ಟೈಗರ್ ಹಿಲ್ ಅನ್ನು ಕೆಳಗಿನಿಂದ ಏರಲು 18 ಗ್ರೆನೆಡಿಯರ‍್ಸ್ ಪಡೆ ಸಜ್ಜಾಯಿತು. ಡಿ ಕಂಪನಿ ಮತ್ತು ಘಾತಕ್ ಪ್ಲಟೂನ್‌ಗಳ ಕ್ಯಾಪ್ಟನ್ ಸಚಿನ್ ನಿಂಬಾಳ್ಕರ್ ಮತ್ತು ಲೆ.ಬಲವಾನ್ ಸಿಂಗ್ ಅವರು ವೈರಿಗಳಿಗೆ ಆಶ್ಚರ್ಯವಾಗುವಂತೆ, ಕಡಿದಾದ ಶಿಖರದ ಕಡೆಯಿಂದ ಏರಿ, ಗುಂಡಿನ ದಾಳಿ ಆರಂಭಿಸಿದರು.

ಇನ್ನೊಂದು ಕಡೆಯಿಂದ 8 ಸಿಖ್ ರೆಜಿಮೆಂಟ್ ಗುಂಡಿನ ದಾಳಿ ನಡೆಸಿತು. ಬೆಟ್ಟದ ಕಡಿದಾದ ಮೈಯಿಂದ ಹವಿಲ್ದಾರ್ ಮದನ್‌ಲಾಲ್ ಎಂಬ ಧೀರಯೋಧ ತನ್ನ ಪರ್ವತಾರೋಹಿ ಕೌಶಲ್ಯವನ್ನೆಲ್ಲ ಬಳಸಿ ಕಣ್ಣುಕುಕ್ಕುವ ಕಗ್ಗತ್ತಲಿನಲ್ಲಿ ರಾತ್ರಿಯಿಡೀ ಬೆಟ್ಟವೇರಿದ. ಮುಂಜಾನೆ ಶತ್ರುಗಳ ಮೇಲೆ ಇದಕ್ಕಿದ್ದಂತೆ ಎರಗಿದ. ದಿಕ್ಕು ತೋಚದಂತಾದ ವೈರಿಗಳು ಭಯಭೀತರಾಗಿ ಕಾಲಿಗೆ ಬುದ್ಧಿ ಹೇಳಿದರು; ಇಲ್ಲವೇ ಭಾರತೀಯ ಸೈನಿಕರ ಕೈಯಲ್ಲಿ ಹತರಾದರು. ಈ ಯುದ್ಧದಲ್ಲಿ ಗಾಯಗೊಂಡ ಮದನ್‌ಲಾಲ್ ಹುತಾತ್ಮನಾದ. ಯೋಗೇಂದ್ರ ಯಾದವ್ ಎಂಬ ಯೋಧ ಏಕಾಂಗಿಯಾಗಿ ಹೋರಾಡುತ್ತಾ ಹತ್ತಾರು ಯೋಧರನ್ನು ಕೊಂದ. 18 ಗ್ರೆನೆಡಿಯರ‍್ಸ್ ನಿರಂತರವಾಗಿ ಶೆಲ್ ದಾಳಿಗಳನ್ನು ನಡೆಸುತ್ತ ವೈರಿಗಳ ದಿಕ್ಕೆಡಿಸಿದರು. ಟೈಗರ್ ಹಿಲ್ ವಿಜಯ ನಿರ್ಣಾಯಕವಾಗಿತ್ತು. ಈ ಎತ್ತರದ ಬೆಟ್ಟವನ್ನು ಗೆದ್ದ ಬಳಿಕ ಉಳಿದ ಬೆಟ್ಟಗಳನ್ನು ಗೆಲ್ಲಲು ಸುಲಭವಾಯಿತು.

ಕದನದ ಕಲಿಗಳು

ವಿಕ್ರಮ್‌ ಬಾತ್ರಾ
ಯೋ‌ಗೇಂದ್ರ ಯಾದವ್

ವಿಕ್ರಮ ಬಾತ್ರಾ: ಕಡಿದಾದ ಶಿಖರಗಳಾದ 5140 ಹಾಗೂ ಶಿಖರ-4575 ಅನ್ನು ವಶಪಡಿಸಿಕೊಳ್ಳುವಂತೆ ವಿಕ್ರಮ ಬಾತ್ರಾ ಮತ್ತು ತಂಡಕ್ಕೆ ಆದೇಶಿಸಲಾಗಿತ್ತು. ಶಿಖರದ ತುದಿಯಲ್ಲಿದ್ದ ಪಾಕ್ ಸೈನಿಕರಿಗೆ ಪರಿಸ್ಥಿತಿ ಅನುಕೂಲಕರವಾಗಿತ್ತು. ಪ್ರತಿಕೂಲಕರ ಸನ್ನಿವೇಶದಲ್ಲಿ ಹೋರಾಡಿದ ಬಾತ್ರಾ, ಎರಡೂ ಶಿಖರಗಳನ್ನೂ ವಶಪಡಿಸಿಕೊಂಡು, ಗಾಯಗಳಿಂದ ಜರ್ಜರಿತರಾಗಿ ವೀರಮರಣ ಅಪ್ಪಿದರು.

ಯೋಗೇಂದ್ರ ಯಾದವ್: ದೇಹದಲ್ಲಿ 15ಕ್ಕೂ ಹೆಚ್ಚು ಗುಂಡು ಹೊಕ್ಕಿದ್ದರೂ ಪಾಕಿ ಸೈನಿಕರನ್ನು ಎದುರಿಸಿದ ಮಹಾಯೋಧ. ಪರಮವೀರ ಚಕ್ರ ಗೌರವ ಪಡೆದ ಅತ್ಯಂತ ಕಿರಿಯ ಯೋಧ ಎಂಬ ಹೆಗ್ಗಳಿಕೆ. `ಘಾತಕ್’ ತುಕಡಿಯ ಭಾಗವಾಗಿದ್ದ ಯಾದವ್ ಮತ್ತು ಅವರ ತಂಡ ಟೈಗರ್ ಹಿಲ್ ಮೇಲಿದ್ದ ಮೂರು ಬಂಕರ್‌ಗಳನ್ನು ವಶಡಿಸಿಕೊಂಡಿತು. ಯಾದವ್‌ಗೆ ಗುಂಡು ತಾಗಿದರೂ, 60 ಅಡಿ ಕಡಿದಾದ ಭಾಗವನ್ನು ಹತ್ತಿ ಮೇಲಕ್ಕೆ ಹೋಗಿ, ಬಂಕರ್ ಮೇಲೆ ದಾಳಿ ಮಾಡಿ, ನಾಲ್ಕು ಶತ್ರು ಸೈನಿಕರನ್ನು ಕೊಂದು ಬಂಕರ್ ವಶಪಡಿಸಿಕೊಂಡಿದ್ದರು.

ಮನೋಜ್‌ಕುಮಾರ್‌ ಪಾಂಡೆ
ಸಂಜಯ್‌ ಕುಮಾರ್

ಸಂಜಯ್ ಕುಮಾರ್: 13 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಯೋಧ ಸಂಜಯ ಕುಮಾರ್ ಅವರ ತಂಡಕ್ಕೆ ಮುಷ್ಕೋಹ ಕಣಿವೆಯ 4874 ಶಿಖರ ಕ್ಲಿಯರ್‌ಗೊಳಿಸುವ ಕೆಲಸ ನೀಡಲಾಗಿತ್ತುö. ಜು.5 ಬೆಳಗಿನ ಜಾವ, ಪರ್ವತದ ಮೇಲೆ ಅನುಕೂಲಕರ ಸ್ಥಿತಿಯಲ್ಲಿದ್ದ ಶತ್ರುಗಳ ಮೇಲೆ ದಾಳಿ ನಡೆಸಿದರು. ಬಂದೂಕಿನ ಗುಂಡುಗಳು ಖಾಲಿಯಾದರೂ, ದಾಳಿಕೋರರತ್ತ ನುಗ್ಗಿ ಅವರಿಂದಲೇ ಮಷಿನ್‌ಗನ್ ಕಿತ್ತುಕೊಂಡು ಕಾದಾಡಿದರು. ಅಂತಿಮವಾಗಿ ಪಾಯಿಂಟ್ 4874 ಅನ್ನು ಭಾರತೀಯ ಸೇನೆ ತನ್ನದಾಗಿಸಿಕೊಂಡಿತು.

ಮನೋಜ್‌ಕುಮಾರ್ ಪಾಂಡೆ: ಇವರು ಗೂರ್ಖಾ ರೈಫಲ್ಸ್‌ನ ಕಿರಿಯ ಅಧಿಕಾರಿ. ಬಟಾಲಿಕ್ ಸೆಕ್ಟರ್‌ನಿಂದ ಎದುರಾಳಿ ಸೈನಿಕರನ್ನು ಹೊರಹಾಕುವ ಜವಾಬ್ದಾರಿ. ಜು.3ರಂದು ಖಲುಬಾರ್ ಪರ್ವತ ತುದಿಯಲ್ಲಿದ್ದ ಶತ್ರು ಸೈನಿಕರನ್ನು ಹೊರದಬ್ಬುತ್ತ ಮಧ್ಯರಾತ್ರಿಯ ವೇಳೆಗೆ ಪಾಂಡೆ ನೇತೃತ್ವದ ತಂಡ ಅಂತಿಮ ಗುರಿಯತ್ತ ಸಾಗಿತ್ತು. ಶತ್ರುಗಳ ಬಂಕರ್‌ಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾದರೂ, ಗುಂಡಿನ ದಾಳಿಯಿಂದ ಗಾಯಗೊಂಡು ಮರಣಿಸಿದರು.

ಇದನ್ನೂ ಓದಿ: Kargil Vijay Diwas | ಕಾರ್ಗಿಲ್ ವಿಜಯ ದಿವಸದಂದು ಮೈಸೂರಿಗೆ ಯುದ್ಧ ಸ್ಮಾರಕದ ಸಿಹಿ ಸುದ್ದಿ

Exit mobile version