Site icon Vistara News

Detailed Story | ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ ಎಂದ ಸುಪ್ರೀಂ ತೀರ್ಪಿನಿಂದ ಗೊಂದಲದಲ್ಲಿ ಸರಕಾರ

ಬೆಂಗಳೂರು: ಕರ್ನಾಟಕ ರಾಜ್ಯ ಚುನಾವಣಾ ವರ್ಷದಲ್ಲಿದೆ ಎಂದು ಇಲ್ಲಿವರೆಗೆ ಹೇಳಲಾಗುತ್ತಿತ್ತು. ಸಾಮಾನ್ಯವಾಗಿ ಎಲ್ಲರೂ ಅದನ್ನು, 2023ರಲ್ಲಿ ನಡೆಯಬೇಕಿರುವ ವಿಧಾನ ಸಭಾ ಚುನಾವಣೆ ಎಂದು ಭಾವಿಸಿದ್ದರು. ರಾಜ್ಯ ಸರಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹಾಗೂ ಪ್ರತಿಪಕ್ಷಗಳು ಅದಕ್ಕೇ ತಯಾರಿ ಆರಂಭಿಸಿದ್ದವು. ಇನ್ನೇನು ಒಂದು ತಿಂಗಳಲ್ಲಿ ಎದುರಾಗುವ ವಿಧಾನ ಪರಿಷತ್‌ ಚುನಾವಣೆ ಚರ್ಚೆ ಗರಿಗೆದರುತ್ತಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್‌ ಮಂಗಳವಾರ ನೀಡಿದ ತೀರ್ಪು, ಈ ಎಲ್ಲ ಆಲೋಚನೆಗಳಿಗೆ ಮಂಗಳ ಹಾಡಿದೆ. ವಿಧಾನಸಭೆ ಚುನಾವಣೆ ಆಮೇಲೆ, ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಿ ಎಂಬ ಸವಾಲನ್ನು ಎದುರಿಗೆ ಇಟ್ಟಿದೆ. ಇದು ಎಲ್ಲ ಪಕ್ಷಗಳಿಗೂ ಕುತೂಹಲ, ಗೊಂದಲ ಮೂಡಿಸಿದೆ.

ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅಲ್ಲಿನ ಸರಕಾರ ಚುನಾವಣೆ ನಡೆಸಿಲ್ಲ. ಅವಧಿ ಮುಕ್ತಾಯಗೊಂಡಿದ್ದರೂ ಚುನಾವಣೆ ನಡೆಸದ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎ.ವಿ. ಖಾನ್ವಿಲ್ಕರ್‌ ಅವರಿದ್ದ ತ್ರಿಸದಸ್ಯ ಪೀಠ ನಡೆಸಿತ್ತು. ಈ ಕುರಿತ ತೀರ್ಪನ್ನು ಮಂಗಳವಾರ ಪ್ರಕಟಿಸಿದೆ. ಒಬಿಸಿ ಮೀಸಲಾತಿ ನಿಗದಿ ಆಗಿಲ್ಲ, ಕ್ಷೇತ್ರ ಮರುವಿಂಗಡಣೆ ಆಗಿಲ್ಲ ಎನ್ನುವ ಸಬೂಬು ನೀಡುವಂತಿಲ್ಲ. ಅವಧಿ ಮುಕ್ತಾಯವಾಗುವ ಮೊದಲೇ ಇದೆಲ್ಲವನ್ನೂ ರಾಜ್ಯ ಚುನಾವಣಾ ಆಯೋಗ ಪೂರ್ಣಗೊಳಿಸಬೇಕಿತ್ತು. ರಾಜ್ಯ ಸರಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕಿತ್ತು. ಮಧ್ಯಪ್ರದೇಶದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆಯನ್ನು ಎರಡು ವಾರದಲ್ಲಿ ಹೊರಡಿಸಬೇಕು, ಚುನಾವಣೆ ನಡೆಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ. ಮುಂದುವರಿದ ಸುಪ್ರೀಂಕೋರ್ಟ್‌, ಈ ತೀರ್ಪು ಮಧ್ಯಪ್ರದೇಶಕ್ಕಷ್ಟೆ ಅಲ್ಲ, ದೇಶದಲ್ಲಿ ಎಲ್ಲೆಲ್ಲಿ ಅವಧಿ ಪೂರ್ಣಗೊಂಡಿದ್ದರೂ ಚುನಾವಣೆ ನಡೆಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅನ್ವಯ ಎಂದಿದೆ. ಇದು ಈಗ ಕರ್ನಾಟಕ ಸರ್ಕಾರಕ್ಕೆ ಸಂಕಷ್ಟ ತಂದಿಟ್ಟಿದೆ.

ಇದನ್ನೂ ಓದಿ | ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ 705 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ

ರಾಜ್ಯದಲ್ಲಿ ಈಗಾಗಲೆ ಅನೇ ನಗರ ಸಭೆಗಳ ಚುನಾವಣೆ ನಡೆಯಬೇಕಿತ್ತು. ಆದರೆ ರಾಜ್ಯ ಸರಕಾರ ವಿಳಂಬ ಮಾಡುತ್ತಲೇ ಬಂದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೂ (BBMP) ಚುನಾವಣೆ ನಡೆಯಬೇಕಿತ್ತು. 2020ರ ಸೆಪ್ಟೆಂಬರ್‌ 30ಕ್ಕೇ ಬಿಬಿಎಂಪಿ ಅವಧಿ ಪೂರ್ಣಗೊಂಡಿದೆ. ಅವಧಿ ಮುಕ್ತಾಯಕ್ಕೂ ಮುನ್ನವೇ ರಾಜ್ಯ ಚುನಾವಣಾ ಆಯೋಗ ರಾಜ್ಯ ಸರಕಾರಕ್ಕೆ ಅನೇಕ ಪತ್ರ ಬರೆದಿತ್ತು. ಆದರೆ ಮೀಸಲು ನಿಗದಿ, ಕ್ಷೇತ್ರ ಮರುವಿಂಗಡಣೆಗೆ ರಾಜ್ಯ ಸರಕಾರ ತಲೆ ಕೆಡಿಸಿಕೊಳ್ಳದೆ ಈ ಪತ್ರಗಳನ್ನು ಕಡೆಗಣಿಸಿತ್ತು. ಈ ಕುರಿತು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ, ರಾಜ್ಯ ಸರಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿತ್ತು. ಎರಡು ತಿಂಗಳೊಳಗಾಗಿ ಚುನಾವಣೆ ನಡೆಸುವಂತೆ 2021ರಲ್ಲಿ ಆದೇಶಿಸಿತು. ಆದರೆ ಈ ಆದೇಶವನ್ನೂ ಬೈಪಾಸ್‌ ಮಾಡಲು ರಾಜ್ಯ ಸರಕಾರ ಮುಂದಾಯಿತು. ಈಗಿನ ವಾರ್ಡ್‌ ಮರುವಿಂಗಡಣೆ ಹಳೆಯ ಜನಸಂಖ್ಯಾ ಸಮೀಕ್ಷೆಗೆ ಆಧಾರದಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿನ ಪ್ರಸ್ತುತ ಜನಸಂಖ್ಯೆ ಆಧಾರದಲ್ಲಿ ವಾರ್ಡ್‌ ಮರು ವಿಂಗಡಣೆ ಮಾಡಬೇಕೆಂದು ಶಾಸಕ ರಘು ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿಯು ಸಂಖ್ಯಾ ಶಾಸ್ತ್ರದ ಆಧಾರದಲ್ಲಿ ಬೆಂಗಳೂರಿಗೆ 243 ವಾರ್ಡ್‌ ನಿಗದಿಪಡಿಸಿತು. ಇದನ್ನಾಧರಿಸಿ ಹೈಕೋರ್ಟ್‌ನಲ್ಲಿ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತರಲಾಯಿತು.

ಸುಪ್ರೀಂಕೋರ್ಟ್‌ ಇದೀಗ ನೀಡಿರುವ ಆದೇಶವು ಸುಪ್ರೀಂಕೋರ್ಟ್‌ ನೀಡಿದ ತಡೆಯಾಜ್ಞೆಯನ್ನು ತಾನಾಗಿಯೇ ರದ್ದುಗೊಳಿಸಿದೆ ಎನ್ನುವುದು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿರುವ ಮಾಜಿ ಕಾರ್ಪೊರೇಟರ್‌ಗಳಾದ ಶಿವರಾಜ್‌ ಹಾಗೂ ಅಬ್ದುಲ್‌ ವಾಜೀದ್‌ ಅವರ ವಾದ. ಈ ಕುರಿತು ಮಂಗಳವಾರ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಾನೂನು ಇಲಾಖೆಗೆ ಹಾಗೂ ಅಡ್ವೊಕೇಟ್ ಜನರಲ್ ಅವರಿಗೆ ಸಂಪೂರ್ಣ ಅಧ್ಯಯನ ಮಾಡುವಂತೆ ತಿಳಿಸಿದ್ದೇನೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ಪ್ರತಿ ನಮಗೆ ಬಂದಿಲ್ಲ. ಸರ್ವೋಚ್ಚ ನ್ಯಾಯಾಲಯ ಚುನಾವಣಾ ಆಯೋಗ ಏನು ತೀರ್ಮಾನ ಮಾಡುತ್ತಾರೆ ಅದನ್ನು ಪಾಲಿಸಲಾಗುವುದು. ಸರ್ವೋಚ್ಛ ನ್ಯಾಯಾಲಯದ ಆದೇಶ ಎಲ್ಲಾ ರಾಜ್ಯಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಚುನಾವಣಾ ಆಯೋಗದೊಂದಿಗೆ ಚರ್ಚೆ ಮಾಡಲಾಗುವುದು ಎಂದಿದ್ದರು. ಚುನಾವಣೆ ಎದುರಿಸಲು ರಾಜ್ಯ ಸರಕಾರ ಹೆದರುತ್ತಿದೆ ಎಂಬ ಪ್ರತಿಪಕ್ಷಗಳ ಮಾತಿಗೆ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಕಾಂಗ್ರೆಸ್ ಪಕ್ಷ ಅವರದ್ದನ್ನು ಅವರು ನೋಡಿಕೊಳ್ಳಬೇಕು. ಸಭೆಗಳಲ್ಲಿ ಬಡಿದಾಡಿಕೊಂಡು ಬಂದಿದ್ದಾರೆ. ನಾವು ಇಡೀ ರಾಜ್ಯ ಸುತ್ತಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ಮಾಡಿದ್ದೆವು. ಬಿಬಿಎಂಪಿಯಲ್ಲಿಯೂ ಸಭೆಗಳನ್ನು ಮಾಡಿದ್ದೇವೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅಧ್ಯಯನ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದರು.

ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಸಿದ್ದವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ರೂಪಿಸಿ ಅದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿ ಅದರ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Santosh Suicide Case: ರಾಜೀನಾಮೆ ಘೋಷಿಸಿದ ಈಶ್ವರಪ್ಪ

ಯಾವುದೇ ಪಕ್ಷಕ್ಕೂ ಬೇಕಿಲ್ಲ ಚುನಾವಣೆ

ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾದ ಬೆನ್ನಲ್ಲೆ, ರಾಜ್ಯ ಸರಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿವೆ. ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಚುನಾವಣೆ ಮುಂದೂಡಿ ಜನರಿಗೆ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಂಗಳವಾರ ವಿಶೇಷ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು. ಇತ್ತ ಸಿದ್ದರಾಮಯ್ಯ ಸಹ ಸರಕಾರವನ್ನೇ ದೂರುತ್ತಿದ್ದಾರೆ. ಆದರೆ ಬಿಜೆಪಿ ಮೂಲಗಳ ಪ್ರಕಾರ, ಬಿಬಿಎಂಪಿ ಹಾಗೂ ಇನ್ನಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದು ಯಾವುದೇ ಪಕ್ಷಕ್ಕೂ ಬೇಕಿಲ್ಲ. ಬಿಬಿಎಂಪಿ ಅಭಿವೃದ್ಧಿಗೆ ಸಿಎಂ ಸಾವಿರಾರು ಕೋಟಿ ರೂಪಾಯಿಯ ಯೋಜನೆಗಳನ್ನು ಘೋಷಿಸಿದ್ದಾರೆ. ಈಗ ಚುನಾವಣೆ ನಡೆದರೆ ಕಾರ್ಪೊರೇಟರ್‌ಗಳು ಬರುತ್ತಾರೆ. ಇಷ್ಟು ದೊಡ್ಡ ಮೊತ್ತದ ಯೋಜನೆಗಳಿಂದ ಲಭಿಸುವ “ಲಾಭ”ದಲ್ಲಿ ಕಾರ್ಪೊರೇಟರ್‌ಗಳಿಗೂ ಪಾಲು ಹೋಗುತ್ತದೆ ಎನ್ನುವುದು ಶಾಸಕರ ಆತಂಕ. ಜತೆಗೆ, ಕಾರ್ಪೊರೇಟರ್‌ ಬಂದರೆ, ಶಾಸಕರ ಬಳಿಗೆ ಜನರು ಅಹವಾಲು ತೆಗೆದುಕೊಂಡು ಬರುವುದಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕು ಎಂದು ಎಲ್ಲ ಪಕ್ಷಗಳೂ ಸಾಮೂಹಿಕ ಪ್ರಯತ್ನ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಪಕ್ಷಗಳಿಗೆ ಇಕ್ಕಟ್ಟು

ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಈಗ ಪಕ್ಷಗಳಿಗೆ ಇಕ್ಕಟ್ಟಿನ ಕೆಲಸ. ಈಗಲೇ ಚುನಾವಣೆ ಪ್ರಕ್ರಿಯೆ ಆರಂಭವಾದರೆ ಟಿಕೆಟ್‌ ಹಂಚಿಕೆ ಗೊಂದಲ ಶುರುವಾಗುತ್ತದೆ. ಒಂದು ಕ್ಷೇತ್ರಕ್ಕೆ ಟಿಕೆಟ್‌ ಕೇಳಿಕೊಂಡು ನಾಲ್ಕೈದು ಜನ ಮುಂದೆ ಬರುತ್ತಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್‌ ನೀಡಲು ಸಾಧ್ಯ. ಆಗ ಉಳಿದವರೆಲ್ಲರೂ ಮುನಿಸಿಕೊಳ್ಳುತ್ತಾರೆ ಅಥವಾ ಬೇರೆ ಪಕ್ಷಕ್ಕೂ ಜಿಗಿಯಬಹುದು. 2023ರ ಚುನಾವಣೆಗೆ ಮುನ್ನ ಈ ರೀತಿ ಕಾಲಾಳುಗಳಲ್ಲಿ ಮುನಿಸು ಕಾಣಿಸಿಕೊಂಡರೆ ತಮ್ಮ ಗೆಲುವು ಹೇಗೆ ಸಾಧ್ಯ ಎಂಬ ಆತಂಕ ಶಾಸಕರದ್ದು ಹಾಗೂ ಶಾಸಕರಾಗಬಯಸುವವರದ್ದು. ಇನ್ನು, ಕ್ಷೇತ್ರದಲ್ಲಿ ಬೇರೆ ಪಕ್ಷದವರು ಗೆದ್ದರೂ ತಮಗೆ ಕಷ್ಟ. ಇದೆಲ್ಲ ಲೆಕ್ಕಾಚಾರದಲ್ಲಿದ್ದ ಶಾಸಕರಿಗೆ ಸುಪ್ರೀಂಕೋರ್ಟ್‌ ತೀರ್ಪು ಸಂಕಷ್ಟ ತಂದೊಡ್ಡಿದೆ. ಚುನಾವಣೆ ಅನಿವಾರ್ಯವಾದರೆ, ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಶೋಧಿಸುತ್ತಿದ್ದಾರೆ.

ಬಿಬಿಎಂಪಿಗೆ ಅನಿವಾರ್ಯವಲ್ಲ

ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ದೇಶಾದ್ಯಂತ ಅನ್ವಯವಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಮತ್ತೊಂದು ವಾದವೂ ಇದೆ. ಈಗಾಗಲೆ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ನಲ್ಲೆ ತಡೆಯಾಜ್ಞೆ ಇದೆ. ಒಂದು ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಕ್ಕೆ ಮತ್ತೊಂದು ನ್ಯಾಯಾಲಯ ಅಥವಾ ನ್ಯಾಯಪೀಠ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಅಡ್ವೋಕೇಟ್‌ ಜನರಲ್‌ ಜತೆಗೆ ಚರ್ಚೆ ನಡೆಸುತ್ತಿದೆ. ಈ ಕುರಿತು ಒಂದೆರಡು ದಿನದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ | ದೇಶದ್ರೋಹ ಕಾಯ್ದೆ ಮರುಪರಿಶೀಲನೆ: ಉತ್ತರಿಸಲು ಕೇಂದ್ರ ಸರ್ಕಾರಕ್ಕೆ 24 ಗಂಟೆ ಗಡುವು ನೀಡಿದ ಸುಪ್ರೀಂ ಕೋರ್ಟ್‌

Exit mobile version