Site icon Vistara News

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ | ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Supreme Court

ನವ ದೆಹಲಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದಲ್ಲಿ ವಿಚಾರಣೆಯ ದಿನಾಂಕವನ್ನು ಸುಪ್ರೀಂ ಕೋರ್ಟ್ ನಿಗದಿ ಮಾಡಿದೆ. ಇಂದು (ನ.30) ವಿಚಾರಣೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯಲಿದ್ದು, ಪೀಠದಲ್ಲಿ ನ್ಯಾಯಮೂರ್ತಿ ಕೆ.ಎಂ ಜೋಸೆಫ್, ವಿ. ರಾಮ ಸುಬ್ರಹ್ಮಣಿಯನ್, ಬಿ.ವಿ. ನಾಗರತ್ನ ಇರಲಿದ್ದಾರೆ.

ಏನಿದು ಅರ್ಜಿ?

1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯನ್ನೇ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಈ ಗಡಿ ವಿವಾದದ ಅರ್ಜಿ ವಿಚಾರಣೆ(Maintainability)ಯನ್ನು ಸುಪ್ರೀಂ ಕೋರ್ಟ್ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತೇ ಇತ್ಯರ್ಥವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಕಾನೂನು ತಂಡಗಳನ್ನು ಸಿದ್ಧಪಡಿಸಲಾಗಿತ್ತು. ಈ ಹಿಂದೆ ಅರ್ಜಿ ವಿಚಾರಣೆಯನ್ನು ನ.23 ನಿಗದಿಪಡಿಸಲಾಗಿದ್ದು, ಅದನ್ನು ಮತ್ತೆ ಮುಂದೂಡಲಾಗಿತ್ತು.

ಕರ್ನಾಟಕದ ಪರ ಸಮರ್ಥ ವಾದ: ಸಿಎಂ

ಕೋರ್ಟ್‌ನಲ್ಲಿ ಮಹಾರಾಷ್ಟ್ರದ ಈ ತಕರಾರು ಸಂಬಂಧಿಸಿ ಕರ್ನಾಟಕದ ಪರ ಸಮರ್ಥ ವಾದ ಮಂಡನೆ ಮಾಡಲಿದ್ದೇವೆ ಎಂದು ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿ ಮಾಡಿದ ಬಳಿಕ ಸಿಎಂ ಪ್ರತಿಕ್ರಿಯೆ ನೀಡಿದರು. ಮುಕುಲ್ ರೋಹಟಗಿ ನಾವು ನೇಮಕ ಮಾಡಿಕೊಂಡ ಪ್ಯಾನೆಲ್‌ನಲ್ಲಿ ತುಂಬಾ ಸೀನಿಯರ್ ಅಡ್ವೋಕೇಟ್. ಗಡಿ ಸಂಬಂಧಪಟ್ಟ ಹಾಗೆ ಈಗಾಗಲೇ ಎಲ್ಲವನ್ನು ಸಹ ನಮ್ಮ ಅಡ್ವೋಕೇಟ್ ಜನರಲ್ ವಿವರಿಸಿದ್ದಾರೆ. ನಾನು ಗಡಿ ವಿವಾದದ ಕಾನೂನಾತ್ಮಕ ಹಿನ್ನೆಲೆ ಬಗ್ಗೆ ರೋಹಟಗಿ ಅವರಿಗೆ ವಿವರಣೆ ನೀಡಿದ್ದೇನೆ. ಕೋರ್ಟ್‌ನಲ್ಲಿ ವಾದ ಮಂಡನೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದಿದ್ದಾರೆ.

ಹಿಂದಿನ ಸಿಜೆಐ ದೀಪಕ್ ಮಿಶ್ರ ಅವರು ಇದರ ಮೇಂಟೇನಬಲಿಟಿ ವಿಚಾರವನ್ನು ಸಿದ್ದಪಡಿಸಿದ್ದರು. ಅದಕ್ಕೆ ನಮ್ಮ ಪ್ರತಿರೋಧ ಹೇಗಿರಬೇಕು ಎಂಬುದರ ಬಗ್ಗೆ ನಾವು ಸಿದ್ಧರಾಗಿದ್ದೇವೆ. ನಮಗೆ ಭರವಸೆ ಇದೆ. ಮಹಾರಾಷ್ಟ್ರದ ನಾಯಕರುಗಳು, ಈ ವಿಚಾರದಲ್ಲಿ ನಾವು ಗಂಭೀರವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಆ ರೀತಿ ಮಾಡ್ತಿದ್ದಾರೆ ಅಷ್ಟೇ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ | Border Dispute | ಸುಪ್ರೀಂನಲ್ಲಿ ಏನೇ ತೀರ್ಪು ಬರಲಿ, ಸುರಕ್ಷತೆ ಆದ್ಯತೆಯಾಗಲಿ; ಕರ್ನಾಟಕ- ಮಹಾರಾಷ್ಟ್ರ ಪೊಲೀಸರ ತೀರ್ಮಾನ

Exit mobile version