ಲಖನೌ: ಕರ್ನಾಟಕದ (Karnataka) ವ್ಯಕ್ತಿಯೊಬ್ಬ ಉತ್ತರ ಪ್ರದೇಶದ (Uttar Pradesh) ಮಹಿಳೆ ಮೇಲೆ ಬಹ್ರೇನ್‌ನಲ್ಲಿ ಅತ್ಯಾಚಾರ ಎಸಗಿ, ಆಕೆಯನ್ನು ಇಸ್ಲಾಂಗೆ ಮತಾಂತರಗೊಳಿಸಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಬಹ್ರೇನ್‌ನಿಂದ (Bahrain) ಉತ್ತರ ಪ್ರದೇಶದ ಲಖನೌಗೆ ಆಗಮಿಸಿದ ಮಹಿಳೆಯು ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
“ಬಹ್ರೇನ್‌ನಲ್ಲಿ ಸೈಫುದ್ದೀನ್ ಎಂಬಾತ ನನ್ನ ಮೇಲೆ ಅತ್ಯಾಚಾರ ಎಸಗಿದ. ಅತ್ಯಾಚಾರದ ಬಳಿಕ ನಾನು ಗರ್ಭಿಣಿಯಾದೆ. ಗರ್ಭಪಾತ ಮಾಡಿಸಿಕೊ ಎಂದು ಪೀಡಿಸುವ ಜತೆಗೆ ಇಸ್ಲಾಂಗೆ ಮತಾಂತರವಾಗು ಎಂಬುದಾಗಿಯೂ ಒತ್ತಾಯ ಮಾಡಿದ. ಕೊನೆಗೆ ಆತನ ಕಿರುಕುಳ ತಾಳದೆ ಉತ್ತರ ಪ್ರದೇಶಕ್ಕೆ ಆಗಮಿಸಿದೆ” ಎಂಬುದಾಗಿ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೈಫುದ್ದೀನ್, ಕರ್ನಾಟಕದ ಬೀದರ್ ಜಿಲ್ಲೆಯವನಾಗಿದ್ದು, ಬಹ್ರೇನ್‌ನಲ್ಲಿ ವಾಸಿಸುತ್ತಿದ್ದಾನೆ. ಈತನಿಗೆ ಈಗಾಗಲೇ ಹುಡುಗಿ ನಿಶ್ಚಯವಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಬಹ್ರೇನ್‌ನಲ್ಲಿ ಮಹಿಳೆಯು ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಬಹ್ರೇನ್‌ನಲ್ಲಿದ್ದಾಗ ಕರ್ನಾಟಕ ಮೂಲದ ಸೈಫುದ್ದೀನ್‌ನನ್ನು ಮಹಿಳೆ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯದ ಸಲುಗೆಯನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಯು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಮಹಿಳೆಯು ಐದು ತಿಂಗಳ ಗರ್ಭಿಣಿ ಎಂಬುದನ್ನು ತಿಳಿದು, ಗರ್ಭಪಾತ ಮಾಡಿಸಿಕೊ ಎಂಬುದಾಗಿ ಕಿರುಕುಳ ನೀಡಿದ್ದಾನೆ. ಇಸ್ಲಾಂ ಧರ್ಮಕ್ಕೂ ಮತಾಂತರವಾಗು ಎಂದು ಪೀಡಿಸಿದ್ದಾನೆ ಎಂಬುದಾಗಿ ಮಹಿಳೆ ಆರೋಪಿಸಿದ್ದಾರೆ.
“ನನ್ನ ಮೇಲೆ ಅತ್ಯಾಚಾರ ಎಸಗಿದ ಸೈಫುದ್ದೀನ್ ವಿರುದ್ಧ ಬಹ್ರೇನ್‌ನಲ್ಲಿಯೇ ಕೇಸ್ ದಾಖಲಿಸಿದ್ದೇನೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾನು ನೀಡಿದ ದೂರು ಹಿಂಪಡೆಯುವಂತೆ ಸೈಫುದ್ದೀನ್ ಕುಟುಂಬಸ್ಥರು ಕಿರುಕುಳ ನೀಡಿದರು. ನಾನು ಐದು ತಿಂಗಳ ಗರ್ಭಿಣಿಯಾಗಿದ್ದಾಗ ಮೋಸ ಮಾಡಿದರು. ನಾನು 2024ರ ಫೆಬ್ರವರಿ 13ರಂದು ಮದುವೆಯಾದ. ಇಸ್ಲಾಂ ಕಾನೂನಿನಂತೆ ಮದುವೆ ಮಾಡಲಾಯಿತು. ಇದಾದ ಬಳಿಕ ನನ್ನನ್ನು ಮತಾಂತರ ಮಾಡಲು ಯತ್ನಿಸಿದರು. ಅಲ್ಲದೆ, ವೈದ್ಯರ ಬಳಿ ತಪಾಸಣೆ ಮಾಡಿಸಿಕೊ ಎಂಬುದಾಗಿ ಮುಂಬೈಗೆ ಕಳುಹಿಸಿದರು. ಆದರೆ, ವೈದ್ಯರು ನನಗೆ ಗೊತ್ತಿಲ್ಲದೆ ಗರ್ಭಪಾತ ಮಾಡಿದರು” ಎಂಬುದಾಗಿ ಮಹಿಳೆ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.