Site icon Vistara News

Kempegowda statue | ಸಂಸತ್‌ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ: ಪ್ರಧಾನಿಗೆ ದೇವೇಗೌಡರ ಪತ್ರ

Threatening people with false cases, HD Deve Gowda files complaint against transfer of 3 inspectors

ಬೆಂಗಳೂರು: ಸಂಸತ್‌ ಭವನದ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ ದೇವೇಗೌಡರು ಪತ್ರ ಬರೆದಿದ್ದಾರೆ.

ರಾಜಧಾನಿ ನಗರ ಸಂಸ್ಥಾಪಕ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಲಿದ್ದು, ಅದಕ್ಕೂ ಮುನ್ನ ಜೆಡಿಎಸ್‌ ಅಧ್ಯಕ್ಷ ದೇವೇಗೌಡರು ಈ ಬೇಡಿಕೆ ಮುಂದಿಟ್ಟಿದ್ದಾರೆ.

ಭಾನುವಾರ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಗೌಡರು, ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಸಂಸತ್ತಿನ ಮುಂದೆ ಸ್ಥಾಪಿಸುವಂತೆ ಕೋರಿದ್ದಾರೆ. ಕೆಂಪೇಗೌಡ ಕೇಂದ್ರ ಸಮಿತಿ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದೆ. ಸಮಿತಿಯ ಮನವಿಯನ್ನು ನನ್ನ ವೈಯಕ್ತಿಕ ಶಿಫಾರಸ್ಸಿನೊಂದಿಗೆ ಪ್ರಧಾನಿಗೆ ರವಾನಿಸಿದ್ದೇನೆ ಎಂದು ಗೌಡರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ | Modi Visit | ಸಿದ್ಧವಾಯ್ತು ಕೆಂಪೇಗೌಡ ಪೇಟ; ಮೋದಿಗೆ ತೊಡಿಸಲಿರುವ ಇದರ ವಿಶೇಷತೆ ಏನಿದೆ?

ʼʼಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರು ನಗರವನ್ನು ಸ್ಥಾಪಿಸಿದರು. ಇಂದು ಬೆಂಗಳೂರು ಜಾಗತಿಕ ಮೆಟ್ರೊಪೊಲಿಟನ್‌ ನಗರವಾಗಿ ಬೆಳೆದು ದೇಶಕ್ಕೆ ಕೀರ್ತಿ ತಂದಿದೆ ಎಂಬುದು ನಮ್ಮ ಹೆಮ್ಮೆಯಾಗಿದೆ. ದೇಶ ಸಾಧಿಸಿರುವ ತಂತ್ರಜ್ಞಾನದ ಮುನ್ನಡೆಗೆ ಕೆಂಪೇಗೌಡರನ್ನು ಪ್ರೇರಣೆಯಾಗಿ ಭಾವಿಸಬಹುದಾಗಿದೆ. ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಶ್ರೇಷ್ಠತೆಯುಳ್ಳ ಗಣನೀಯ ಸಂಖ್ಯೆಯ ಸಂಸ್ಥೆಗಳನ್ನು ಹೊಂದಿರುವ ಇಂಥ ಇನ್ನೊಂದು ನಗರ ದೇಶದಲ್ಲಿ ಇಲ್ಲʼʼ ಎಂದು ದೇವೇಗೌಡರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ನ.11ರಂದು 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಅನಾವರಣಗೊಳ್ಳಲಿದ್ದು, ಇದಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ದೇವೇಗೌಡರನ್ನೂ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಂಚಿನ ಪ್ರತಿಮೆ ಇದಾಗಿದೆ. ಈ ಪ್ರತಿಮೆ ಸ್ಥಾಪನೆಗೆ ಮೊದಲ ಹೆಜ್ಜೆಯನ್ನು ಬಿಎಸ್‌ವೈ ಸರ್ಕಾರ ಇಟ್ಟಿತ್ತು.

ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿರುವ ಒಕ್ಕಲಿಗ ಸಮುದಾಯದ ಒಲವು ಗಳಿಸಲು ಬಿಜೆಪಿ ಈ ಉಪಕ್ರಮಕ್ಕೆ ಮುಂದಾಗಿದೆ. ಮುಂಬರಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರತಿಮೆ ಸ್ಥಾಪನೆಯ ಹಿನ್ನೆಲೆ ಮುನ್ನೆಲೆಗಳು ಕುತೂಹಲ ಕೆರಳಿಸಿವೆ.

ಇದನ್ನೂ ಓದಿ | ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ; ಆದಿಚುಂಚನಗಿರಿ ಶ್ರೀ ನೇತೃತ್ವದಲ್ಲಿ ಒಕ್ಕಲಿಗ ಪ್ರಮುಖರ ಸಭೆ

Exit mobile version