ಹೊಸದಿಲ್ಲಿ: ಡಿಸೆಂಬರ್ 13ರಂದು ಭಾರತ ಹೊಸ ಸಂಸತ್ ಕಟ್ಟಡದ ಮೇಲೆ ಉಗ್ರ ದಾಳಿ (Parliament Attack) ಮಾಡುವುದಾಗಿ ಖಲಿಸ್ತಾನಿ ಭಯೋತ್ಪಾದಕ (Khalistan Terrorist) ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆ ಹಾಕುವ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾನೆ. ತನ್ನನ್ನು ಕೊಲ್ಲಲು ʼಭಾರತ ನಡೆಸಿರುವ ಸಂಚಿಗೆ ಪ್ರತಿಯಾಗಿʼ ತಾನು ದಾಳಿ ನಡೆಸುವುದಾಗಿ ಈ ಬೆದರಿಕೆ ಹಾಕಿದ್ದಾನೆ. ಇದೇ ಡಿಸೆಂಬರ್ 13ಕ್ಕೆ ಭಾರತದ ಸಂಸತ್ ಭವನದ ಮೇಲೆ ಭಯೋತ್ಪಾದಕ ನಡೆದು 22 ವರ್ಷಗಳಾಗುತ್ತವೆ.
ʼದೆಹಲಿ ಬನೇಗಾ ಖಲಿಸ್ತಾನ್’ ಎಂಬ ಶೀರ್ಷಿಕೆಯೊಂದಿಗೆ, 2001ರ ಸಂಸತ್ತಿನ ದಾಳಿಯ ರೂವಾರಿ ಭಯೋತ್ಪಾದಕ ಅಫ್ಜಲ್ ಗುರುವಿನ ಪೋಸ್ಟರ್ ಅನ್ನು ಒಳಗೊಂಡಿರುವ ವಿಡಿಯೊವನ್ನು ಪನ್ನುನ್ ಹರಿಬಿಟ್ಟಿದ್ದಾನೆ. ಡಿಸೆಂಬರ್ 13 ಅಥವಾ ಅದಕ್ಕಿಂತ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಮೂಲಕ ʼಭಾರತೀಯ ಏಜೆನ್ಸಿಗಳ ವಿಫಲ ಕೊಲೆ ಸಂಚಿಗೆʼ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾನೆ.
“ಡಿಸೆಂಬರ್ 13ರಂದು ನನ್ನ ಪ್ರತಿಕ್ರಿಯೆ ತೋರಿಸಲಿದ್ದೇನೆ. ಕಾಶ್ಮೀರಿಗಳ ಕಾನೂನುಬಾಹಿರ ಹತ್ಯೆಗಳ ವಿರುದ್ಧ 2001ರಲ್ಲಿ ಅಫ್ಜಲ್ ಗುರು ನಡೆಸಿದ ದಾಳಿಗೆ ಪೂರಕವಾಗಿ ನಾನು ನೀಡಲಿರುವ ಪ್ರತಿಕ್ರಿಯೆಯು ಭಾರತದ ಸಂಸತ್ತಿನ ಅಡಿಪಾಯವನ್ನು ಅಲುಗಾಡಿಸಲಿದೆ. ದೆಹಲಿ ಬನೇಗಾ ಖಲಿಸ್ತಾನ್” ಎಂದು ಪನ್ನುನ್ ಹೇಳಿದ್ದಾನೆ.
ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಪನ್ನುನ್ ಬೆದರಿಕೆ ಹಾಕುತ್ತಿರುವುದು ಮಾತ್ರವಲ್ಲದೆ, ಭಾರತದ ಮೇಲಿನ ದಾಳಿಗಾಗಿ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ ಪನ್ನುನ್ ಬೆದರಿಕೆ ಬಂದಿದೆ. ಅಧಿವೇಶನವು ಡಿಸೆಂಬರ್ 22ರವರೆಗೆ ನಡೆಯಲಿದೆ. ಪನ್ನುನ್‌ನ ವೀಡಿಯೊ ಕಾಣಿಸಿಕೊಂಡ ನಂತರ ಭದ್ರತಾ ಏಜೆನ್ಸಿಗಳ ಮೂಲಕ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತೀಯ ಮೂಲದ ನಿಖಿಲ್ ಗುಪ್ತಾ ಎಂಬಾತ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಮೆರಿಕದ ಬೇಹುಗಾರಿಕೆ ಇಲಾಖೆ ಕೋರಿಕೆಯ ಮೇರೆಗೆ ಆತನನ್ನು ಜೆಕ್ ರಿಪಬ್ಲಿಕ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಗುಪ್ತಾ ಭಾರತದಿಂದ ಅಮೆರಿಕಕ್ಕೆ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಯಿತು.
“ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಯುಎಸ್ ಪ್ರಜೆಯನ್ನು ಹತ್ಯೆ ಮಾಡಲು ವಿಫಲವಾದ ಸಂಚಿನಲ್ಲಿ ಭಾಗವಹಿಸಿದ್ದಾಗಿ” ಆತನ ಮೇಲೆ ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಆರೋಪ ಮಾಡಿದೆ. ಆದರೆ ಭಾರತದ ನಾಯಕರ ಮೇಲೆ ಉಗ್ರ ದಾಳಿ ಬೆದರಿಕೆ ಹಾಕುತ್ತಿರುವ ಆತನ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ.
ಇದನ್ನೂ ಓದಿ: ಪನ್ನುನ್ ಹತ್ಯೆಗೆ ಸ್ಕೆಚ್; ಅಮೆರಿಕ ಆರೋಪಕ್ಕೆ ಭಾರತ ಪ್ರತಿಕ್ರಿಯೆ, ಉನ್ನತ ಸಮಿತಿ ರಚನೆ