ಕೋಲ್ಕತ್ತಾ: ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder Case)ಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ(West Bengal CM) ಮಮತಾ ಬ್ಯಾನರ್ಜಿ(Mamata Banerjee) ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಪತ್ರ ಬರೆದಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಬ್ಯಾನರ್ಜಿ, ಈ ದಿನ ನಾನು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ದಿನೇ ದಿನೇ ದೇಶಾದ್ಯಂತ ಹೆಚ್ಚಾಗುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದರೆ ಕಟ್ಟುನಿಟ್ಟಿನ ಕಾನೂನು ಜಾರಿಯಾದರೆ ಮಾತ್ರ ಸಾಧ್ಯ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
I have written this letter today to the Hon'ble Prime Minister of India: pic.twitter.com/pyVIiiV1mn
— Mamata Banerjee (@MamataOfficial) August 22, 2024
ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ, “ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ದೇಶಾದ್ಯಂತ ನಿಯಮಿತವಾಗಿ ಮತ್ತು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ ಮತ್ತು ಲಭ್ಯವಿರುವ ದತ್ತಾಂಶಗಳ ಪ್ರಕಾರ ಅನೇಕ ಪ್ರಕರಣಗಳಲ್ಲಿ ಕೊಲೆಯೊಂದಿಗೆ ಅತ್ಯಾಚಾರಗಳು ನಡೆಯುತ್ತಿವೆ. ಪ್ರತಿನಿತ್ಯ ಸುಮಾರು 90 ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯುತ್ತಿವೆ. ಇದರಿಂದ ಕಾನೂನಿನ ಮೇಲೆ ಸಮಾಜ ಮತ್ತು ದೇಶದ ಜನರಿಗಿರುವ ನಂಬಿಕೆ ದಿನೇ ಕುಸಿಯುತ್ತಿದೆ. ಮಹಿಳೆಯರು ಸಮಾಜದಲ್ಲಿ ತಾವು ಸುರಕ್ಷಿತರು ಎಂಬುದನ್ನು ಭಾವಿಸಬೇಕೆಂದರೆ ಇಂತಹ ಹೇಯ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕಿದೆ ಎಂದು ಬರೆದಿರುವ ಬಗ್ಗೆ ತಿಳಿಸಿದ್ದಾರೆ.
ಏನಿದು ಘಟನೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇನ್ನು ವೈದ್ಯೆ ಕೊಲೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ರಾಷ್ಟ್ರೀಯ ಕಾರ್ಯಪಡೆಯನ್ನು ನೇಮಕ ಮಾಡಿದೆ. ಈ ಕಾರ್ಯಪಡೆಯಲ್ಲಿ ಸರ್ಜನ್ ವೈಸ್ ಅಡ್ಮಿರಲ್ ಆರ್.ಕೆ. ಸರಿನ್, ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಶ್ವರ ರೆಡ್ಡಿ ಇದ್ದಾರೆ.
ಇದನ್ನೂ ಓದಿ: Kolkata Doctor murder case: 36 ಗಂಟೆಗಳ ಶಿಫ್ಟ್‌ನಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುವುದು ಅಮಾನವೀಯ- ಸುಪ್ರೀಂ ಅಭಿಪ್ರಾಯ