Site icon Vistara News

Lanka on fire: ಗೊಟಬಯ ರಾಜಪಕ್ಸ ಮಾಲ್ಡೀವ್ಸ್‌ಗೆ ಪರಾರಿ ಆಗಲು ಸಹಾಯ ಮಾಡಿಲ್ಲ ಎಂದ ಭಾರತ

Gotabaya with wife Ayoma

ನವ ದೆಹಲಿ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಂಗಳವಾರ ರಾತ್ರಿ ಮಿಲಿಟರಿ ವಿಮಾನ ಬಳಸಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಅವರು ಈ ರೀತಿ ತಪ್ಪಿಸಿಕೊಳ್ಳಲು ಭಾರತ ಸಹಾಯ ಮಾಡಿದೆ ಎಂಬ ಆರೋಪವನ್ನು ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಶ್ರೀಲಂಕಾದಲ್ಲಿ ಎದ್ದಿರುವ ನಾಗರಿಕ ದಂಗೆಯಿಂದಾಗಿ ಬಂಧನದ ಆತಂಕ ಎದುರಿಸುತ್ತಿರುವ ಗೊಟಬಯ ರಾಜಪಕ್ಸ ಹೇಗಾದರೂ ಮಾಡಿ ದೇಶ ಬಿಟ್ಟು ಓಡಿ ಹೋಗಲು ಸತತ ಪ್ರಯತ್ನ ನಡೆಸಿದ್ದರು. ವಿಮಾನದ ಮೂಲಕ ತೆರಳಲು ಯತ್ನಿಸುವ ವೇಳೆ ವಲಸೆ ಅಧಿಕಾರಿಗಳೇ ತಡೆದಿದ್ದರು. ನೌಕಾಪಡೆ ವಿಮಾನದಲ್ಲಿ ತಪ್ಪಿಸಿಕೊಳ್ಳುವ ಅವರ ಪ್ರಯತ್ನವೂ ವಿಫಲವಾಗಿತ್ತು. ಮಂಗಳವಾರ ರಾತ್ರಿ ಮಿಲಿಟರಿ ವಿಮಾನ ಬಳಸಿ ಅವರು ಮಾಲ್ಡೀವ್ಸ್‌ಗೆ ಪರಾರಿ ಆಗಿದ್ದಾರೆ.

ಈ ರೀತಿ ತಪ್ಪಿಸಿಕೊಳ್ಳುವುದಕ್ಕೆ ಭಾರತ ಸಹಕರಿಸಿದೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಸ್ಪಷ್ಟನೆ ನೀಡಿರುವ ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್‌, ʻʻರಾಜಪಕ್ಸ ಪರಾರಿಯಾಗಲು ಭಾರತ ಸಹಕಾರ ನೀಡಿದೆ ಎಂಬ ಆಧಾರರಹಿತ ಮತ್ತು ಊಹಾತ್ಮಕ ವರದಿಯನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆʼʼ ಎಂದು ಟ್ವೀಟ್‌ ಮಾಡಿದೆ.

ʻʻಭಾರತ ಶ್ರೀಲಂಕಾದ ಜನರಿಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸಲಿದೆ. ಪ್ರಜಾಸತ್ತಾತ್ಮಕ ದಾರಿ ಮತ್ತು ಮೌಲ್ಯಗಳ ಮೂಲಕ ಅವರು ಪ್ರಗತಿ ಮತ್ತು ಸಮೃದ್ಧಿಯೆಡೆಗೆ ಸಾಗಿ ಆಶೋತ್ತರಗಳನ್ನು ಈಡೇರಿಸಿಕೊಳ್ಳುವುದಕ್ಕೆ ಭಾರತ ಬೆಂಬಲ ನೀಡಲಿದೆ. ಪ್ರಜಾಸತ್ತಾತ್ಮಕ ಸಂಸ್ಥೆ ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಎಲ್ಲವೂ ನಡೆಯಲಿ ಎಂದು ಆಶಿಸುತ್ತದೆʼʼ ಎಂದು ಹೇಳಿದೆ.

ರಾಜಪಕ್ಸ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರ ಜತೆ ಮಂಗಳವಾರ ರಾತ್ರಿ ಶ್ರೀಲಂಕಾದ ವಾಯುಪಡೆಗೆ ಸೇರಿದ ರಷ್ಯಾ ನಿರ್ಮಿತ ಎಎನ್‌-೩೨ ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ಹಾರಿದ್ದರು.

ಭಾರತಕ್ಕೆ ಬರುತ್ತಾರೆ ಎಂದೂ ಸುದ್ದಿಯಾಗಿತ್ತು!
ಈ ನಡುವೆ, ವಿಮಾನ ನಿಲ್ದಾಣ ಮತ್ತು ಬಂದರಿನ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲರಾಗುವ ವೇಳೆ ರಾಜಪಕ್ಸ ಅವರು ಭಾರತಕ್ಕೆ ಹಾರಬಹುದು ಎಂಬ ಸುದ್ದಿಯೂ ಹರಡಿತ್ತು. ಈಗ ಮಾಲ್ಡೀವ್ಸ್‌ ಗೆ ಹೋಗಿದ್ದರೂ ಅಲ್ಲೇ ಉಳಿಯದೆ ಬೇರೆ ರಾಷ್ಟ್ರಕ್ಕೆ ಜಿಗಿಯುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ರಾಜಪಕ್ಸ ಅವರು ಭಾರತಕ್ಕೆ ಬರುವ ಸಾಧ್ಯತೆಯಂತೂ ಇಲ್ಲವೇ ಇಲ್ಲ ಎನ್ನುವುದು ಸ್ಪಷ್ಟ. ಯಾಕೆಂದರೆ, ರಾಜಪಕ್ಸ ಕುಟುಂಬದ ಮೇಲೆ ಶ್ರೀಲಂಕಾದ ತಮಿಳರ ಮೇಲೆ ದೌರ್ಜನ್ಯ ನಡೆಸಿದ ದೊಡ್ಡ ಆರೋಪವಿದೆ. ಹೀಗಿರುವಾಗ ಭಾರತ ತಮಿಳು ವಿರೋಧಿಗಳಿಗೆ ಆಶ್ರಯ ನೀಡುವ ಅವಕಾಶ ತೀರಾ ಕಡಿಮೆ. ಅದರಲ್ಲೂ ರಾಜಪಕ್ಸ ಕುಟುಂಬ ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ಹೆಚ್ಚು ಆತ್ಮೀಯತೆಯನ್ನು ಹೊಂದಿದೆ.

ಇದನ್ನೂ ಓದಿ| ರಾಜೀನಾಮೆಗೆ ಮುನ್ನ ಶ್ರೀಲಂಕಾದಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡಿವ್ಸ್‌ಗೆ ಪಲಾಯನ

Exit mobile version