Site icon Vistara News

Nishant Agarwal: ಬ್ರಹ್ಮೋಸ್‌ ಕ್ಷಿಪಣಿ ಕುರಿತು ಪಾಕ್‌ಗೆ ಮಾಹಿತಿ; ಮಾಜಿ ಎಂಜಿನಿಯರ್‌ ನಿಶಾಂತ್‌ ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ!

Nishant Agarwal

Life imprisonment to ex-Brahmos engineer Nishant Agarwal for spying for Pakistan ISI

ನವದೆಹಲಿ: ಭಾರತದ ಬ್ರಹ್ಮೋಸ್‌ ಕ್ಷಿಪಣಿಯ ಕುರಿತು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ರಹ್ಮೋಸ್‌ ಏರೋಸ್ಪೇಸ್‌ನ (Brahmos Aerospace) ಮಾಜಿ ಎಂಜಿನಿಯರ್‌ ನಿಶಾಂತ್‌ ಅಗರ್ವಾಲ್‌ಗೆ (Nishant Agarwal) ನಾಗ್ಪುರ ನ್ಯಾಯಾಲಯವು (Nagpur Court) ಜೀವಾವಧಿ ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ನಿಶಾಂತ್‌ ಅಗರ್ವಾಲ್‌ ಅವರು ರಹಸ್ಯ ಮಾಹಿತಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಭೂಮಿ, ಸಮುದ್ರ ಹಾಗೂ ಆಗಸದಿಂದಲೇ ವೈರಿಗಳನ್ನು ಹೊಡೆದುರುಳಿಸುವ ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ಬ್ರಹ್ಮೋಸ್‌ ಏರೋಸ್ಪೇಸ್‌ ಅಭಿವೃದ್ಧಿಪಡಿಸಿದ್ದು, ಇದರ ಕುರಿತು ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿದ ಆರೋಪದಲ್ಲಿ ನಿಶಾಂತ್‌ ಅಗರ್ವಾಲ್‌ನನ್ನು 2018ರಲ್ಲಿಯೇ ಬಂಧಿಸಲಾಗಿತ್ತು. ಬ್ರಹ್ಮೋಸ್‌ ಏರೋಸ್ಪೇಸ್‌ನಲ್ಲಿ ನಿಶಾಂತ್‌ ಅಗರ್ವಾಲ್‌ ಸೀನಿಯರ್‌ ಸಿಸ್ಟಮ್‌ ಎಂಜಿನಿಯರ್‌ ಆಗಿದ್ದರು. ಆಫೀಶಿಯಲ್‌ ಸೀಕ್ರೆಟ್ಸ್‌ ಆ್ಯಕ್ಟ್‌ ಅಡಿಯಲ್ಲಿ ನಿಶಾಂತ್‌ ಅಗರ್ವಾಲ್‌ಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ?

ಬ್ರಹ್ಮೋಸ್‌ ಏರೋಸ್ಪೇಸ್‌ನ ರಹಸ್ಯ ಮಾಹಿತಿ ಸೋರಿಕೆ ಪ್ರಕರಣವು 2018ರಲ್ಲಿ ಬಹಿರಂಗವಾಗಿತ್ತು. ಪಾಕಿಸ್ತಾನದ ಐಎಸ್‌ಐಗಾಗಿ ಕೆಲಸ ಮಾಡುವ ನೇಹಾ ಶರ್ಮಾ ಹಾಗೂ ಪೂಜಾ ರಂಜನ್‌ ಅವರ ಫೇಸ್‌ಬುಕ್‌ ಖಾತೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಇಸ್ಲಾಮಾಬಾದ್‌ ಮೂಲಕ ಫೇಸ್‌ಬುಕ್‌ ಖಾತೆಗಳನ್ನು ನಿರ್ವಹಿಲಾಗುತ್ತಿತ್ತು. ಇವರಿಬ್ಬರ ಜತೆಗೆ ನಿಶಾಂತ್‌ ಅಗರ್ವಾಲ್‌ ನಿರಂತರವಾಗಿ ಸಂಪರ್ಕ ಇರುವ ಕುರಿತು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿತ್ತು. ಇದರ ಕುರಿತು ತನಿಖೆ ನಡೆಸಿದಾಗ ನಿಶಾಂತ್‌ ಅಗರ್ವಾಲ್‌ ಕೃತ್ಯವು ಬಯಲಾಗಿತ್ತು.

ಡಿಆರ್‌ಡಿಒ ನೀಡುವ ಯಂಗ್‌ ಸೈಂಟಿಸ್ಟ್‌ ಅವಾರ್ಡ್‌ಗೆ ನಿಶಾಂತ್‌ ಅಗರ್ವಾಲ್‌ ಪಾತ್ರನಾಗಿದ್ದ. ಕುರುಕ್ಷೇತ್ರದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಓದಿದ್ದ ಈತ ವೃತ್ತಿಯಲ್ಲೂ ನೈಪುಣ್ಯತೆ ಹೊಂದಿದ್ದ. ಇದೇ ಕಾರಣಕ್ಕಾಗಿ ಬ್ರಹ್ಮೋಸ್‌ ಏರೋಸ್ಪೇಸ್‌ನಲ್ಲಿ ಸೀನಿಯರ್‌ ಸಿಸ್ಟಮ್‌ ಎಂಜಿನಿಯರ್‌ ಆಗಿ ಭಡ್ತಿ ಹೊಂದಿದ್ದ. ಆದರೆ, 2018ರಲ್ಲಿ ಈತನ ದೇಶದ್ರೋಹದ ಕೃತ್ಯವು ಬಯಲಾಗುತ್ತಲೇ ಸಹೋದ್ಯೋಗಿಗಳು ಸೇರಿ ಎಲ್ಲರೂ ಶಾಕ್‌ಗೀಡಾಗಿದ್ದರು. ಕಳೆದ ಏಪ್ರಿಲ್‌ನಲ್ಲಷ್ಟೇ ಈತ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ.

ಇದನ್ನೂ ಓದಿ: Chhota Rajan: ಹೊಟೇಲ್‌ ಉದ್ಯಮಿ ಹತ್ಯೆ ಕೇಸ್‌; ಗ್ಯಾಂಗ್‌ಸ್ಟರ್‌ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

Exit mobile version