Site icon Vistara News

Made in India: ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ!

drugs

drugs

ನವದೆಹಲಿ: ಭಾರತೀಯ ಔಷಧೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧಗಳನ್ನು (Made in India) ಭಾರತ ಆವಿಷ್ಕರಿಸಿದೆ. ಇವುಗಳಿಂದಾಗಿ ಮುಂದಿನ ದಿನಗಳಲ್ಲಿ ಈ ಕಾಯಿಲೆಗಳ ಚಿಕಿತ್ಸೆಯ ವೆಚ್ಚ 100 ಪಟ್ಟು ಇಳಿಯಲಿದೆ.

ಟೈರೋಸಿನೇಮಿಯಾ ಟೈಪ್, ಗೌಚರ್ಸ್ ಕಾಯಿಲೆ, ವಿಲ್ಸನ್ ಕಾಯಿಲೆ ಮತ್ತು ಡ್ರಾವೆಟ್ ಅಥವಾ ಲೆನಾಕ್ಸ್ ಗ್ಯಾಸ್ಟಾಟ್ ಸಿಂಡ್ರೋಮ್ ಸೆಳೆತಗಳು ಸದ್ಯ ಸ್ವದೇಶಿ ಔಷಧ ಕಂಡುಹಿಡಿಯಲಾಗಿರುವ ಕಾಯಿಲೆಗಳು. ಕೇಂದ್ರ ಸರ್ಕಾರವು 13 ಅಪರೂಪದ ರೋಗಗಳು ಮತ್ತು ಜೀವ ಕೋಶ ರೋಗಗಳ ಔಷಧ ತಯಾರಿಕೆಗೆ ಆದ್ಯತೆ ನೀಡಿದೆ. ಶೈಕ್ಷಣಿಕ, ಫಾರ್ಮಾ ಕೈಗಾರಿಕೆಗಳು, ವಿವಿಧ ಸಂಸ್ಥೆಗಳು ಮತ್ತು ಸೆಂಟ್ರಲ್‌ ಡ್ರಗ್‌ ಸ್ಟಾಂಡರ್ಡ್‌ ಕಂಟ್ರೋಲ್‌ ಆರ್ಗನೈಸೇಷನ್‌ (Central Drugs Standard Control Organization-CDSCO) ಔಷಧೀಯ ಇಲಾಖೆಯೊಂದಿಗೆ ನಡೆಸಿದ ಚರ್ಚೆಗಳ ನಂತರ 2022ರ ಜುಲೈಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಯಿತು.

ಕೇಂದ್ರ ಸರ್ಕಾರ ಹೇಳಿದ್ದೇನು?

“ಫಾರ್ಮಾ ಕಂಪನಿಗಳು, ವಿಜ್ಞಾನಿಗಳು, ಔಷಧ ನಿಯಂತ್ರಕರು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿದ ನಂತರ ನಾವು ಔಷಧಗಳ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. 13 ಅಪರೂಪದ ಕಾಯಿಲೆ ಮತ್ತು ಜೀವ ಕೋಶ ಕಾಯಿಲೆಗಳಿಗೆ ಅಗತ್ಯವಾದ ಔಷಧಗಳ ತಯಾರಿಕೆಗೆ ಆದ್ಯತೆ ನೀಡಿದ್ದೇವೆʼʼ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.

ಬೆಲೆಯಲ್ಲಿ ಭಾರಿ ವ್ಯತ್ಯಾಸ

“ಇದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಸ್ವದೇಶಿ ನಿರ್ಮಿತ ಔಷಧಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬರಲಿದೆ. ಸಾಮಾನ್ಯವಾಗಿ ಹೊರಗೆ ಒಂದು ಔಷಧದ ಬೆಲೆ 2.5 ಕೋಟಿ ರೂ. ಇದ್ದರೆ ಭಾರತದಲ್ಲಿ ಅದರ ಬೆಲೆ 2.5 ಲಕ್ಷ ರೂ.ʼʼ ಎಂದು ಮೂಲಗಳು ಹೇಳಿವೆ. ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಎಲ್ಲ ಔಷಧಗಳನ್ನು ಇಲ್ಲಿಯವರೆಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ದರಿಂದಲೇ ಇವು ದುಬಾರಿಯಾಗಿದ್ದವು. ಇದೀಗ ಇಲ್ಲೇ ತಯಾರಿಸಲಾಗುವುದರಿಂದ ವೆಚ್ಚ 100 ಪಟ್ಟು ಕಡಿಮೆ ಆಗುತ್ತದೆ. ಉದಾಹರಣೆಗೆ ಸ್ವೀಡನ್‌ನ 5 ಲಕ್ಷ ರೂ. ಬೆಲೆಯ 2 ಎಂ.ಜಿ. ಮಾತ್ರೆ ಭಾರತದಲ್ಲಿ 6,500 ರೂ.ಗೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಅಪರೂಪದ ಕಾಯಿಲೆಯು ಕಡಿಮೆ ಸಂಖ್ಯೆಯ ಜನರಲ್ಲಿ ಕಂಡುಬರುತ್ತದೆ. ಹೀಗಾಗಿ ಅವುಗಳ ಚಿಕಿತ್ಸೆಗೂ ಒತ್ತು ಕಡಿಮೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ ಭಾರತದಲ್ಲಿ ಇಂತಹ 8.4-10 ಕೋಟಿ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಶೇ. 80ರಷ್ಟು ಆನುವಂಶಿಕವಾಗಿ ಕಾಣಿಸಿಕೊಂಡಿವೆ.

ಯಾವೆಲ್ಲ ಔಷಧಗಳು?

ಅಪರೂಪದ ಕಾಯಿಗೆಗಳಿಗೆ ಪ್ರಸ್ತುತ ಎಂಟು ರೀತಿಯ ಜೆನರಿಕ್ ಔಷಧಗಳಿವೆ ಮತ್ತು ನಾಲ್ಕು ರೀತಿಯ ಔಷಧಗಳು ಭಾರತದಲ್ಲಿ ಲಭ್ಯ. ಮುಂದಿನ ವರ್ಷ ಇನ್ನೂ ನಾಲ್ಕು ರೀತಿಯ ಔಷಧಗಳು ಲಭ್ಯವಾಗಲಿದೆ. ಸದ್ಯ ಟೈರೋಸಿನೇಮಿಯಾ ಟೈಪ್, ಗೌಚರ್ಸ್ ಕಾಯಿಲೆ, ವಿಲ್ಸನ್ ಕಾಯಿಲೆ ಮತ್ತು ಡ್ರಾವೆಟ್ ಅಥವಾ ಲೆನಾಕ್ಸ್ ಗ್ಯಾಸ್ಟಾಟ್ ಸಿಂಡ್ರೋಮ್ ಸೆಳೆತಗಳಿಗೆ ಔಷಧ ದೊರೆಯುತ್ತಿದೆ.

ನಿಟಿಸಿನೋನ್ (ಕ್ಯಾಪ್ಸೂಲ್‌) ಅನ್ನು ಟೈರೋಸಿನೇಮಿಯಾ ಟೈಪ್ 1 ಚಿಕಿತ್ಸೆಗೆ ಬಳಸಲಾಗುತ್ತದೆ ಮತ್ತು ಇತರ ದೇಶಗಳಿಂದ ಖರೀದಿಸಿದರೆ ಈ ಔಷಧಿಯ ಬೆಲೆ ವರ್ಷಕ್ಕೆ 2.2 ಕೋಟಿ ರೂ. ಇದನ್ನೇ ಭಾರತೀಯ ಕಂಪೆನಿಯು ವರ್ಷಕ್ಕೆ 2.5 ಲಕ್ಷ ರೂ. ವೆಚ್ಚದಲ್ಲಿ ತಯಾರಿಸುತ್ತಿದೆ. ಗೌಚರ್ ಕಾಯಿಲೆಯ ಚಿಕಿತ್ಸೆಗಾಗಿ ಶಿಫಾರಸು ಮಾಡಲಾದ ಎಲಿಗ್ಲುಸ್ಟಾಟ್ ಔಷಧವು ಭಾರತದಲ್ಲಿ ವರ್ಷಕ್ಕೆ 3-6 ಲಕ್ಷ ರೂ.ಗೆ ಲಭ್ಯ. ಸಿಕ್ಕಲ್‌ ಸೆಲ್‌ ಅನೀಮಿಯಾ (Sickle Cell Anemia) ಕಾಯಿಲೆಯ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಯೂರಿಯಾ ಔಷಧವೂ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ.

ಇದನ್ನೂ ಓದಿ: ಸಂಗಾತಿಗಾಗಿ 2000 ಕಿ.ಮೀ ಸಂಚರಿಸಿದ ರಾಯಲ್ ಬೆಂಗಾಲ್ ಟೈಗರ್! ಈ ಹುಲಿ ಹೋಗಿದ್ದೆಲ್ಲಿಗೆ?

ಭಾರತದಲ್ಲಿ ಸರಿಸುಮಾರು 65 ಟೈರೋಸಿನೇಮಿಯಾ ಟೈಪ್ 1 ಕಾಯಿಲೆ, 235 ಗೌಚರ್ ಕಾಯಿಲೆ ಮತ್ತು ಗರಿಷ್ಠ ಸಂಖ್ಯೆಯ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯ ಪ್ರಕರಣಗಳು ವರದಿಯಾಗಿವೆ. ಇತರ ದೇಶಗಳ ಯಶಸ್ವಿ ಮಾದರಿಗಳನ್ನು ಅಧ್ಯಯನ ಮಾಡಿದ ನಂತರ ಭಾರತವು ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಕಡಿಮೆ ವೆಚ್ಚದ ಔಷಧಗಳ ಉತ್ಪಾದನೆ ಆರಂಭಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version