Site icon Vistara News

Madras High Court: ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೋರಿ ವಕೀಲನಿಂದ ಅರ್ಜಿ; ಹೈಕೋರ್ಟ್‌ ಫುಲ್‌ ಗರಂ

ಚೆನ್ನೈ: ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೋರಿ ವ್ಯಕ್ತಿಯೊಬ್ಬ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಕನ್ಯಾಕುಮಾರಿ(Kanyakumari)ಯಲ್ಲಿ ಈ ಘಟನೆ ನಡೆದಿದ್ದು, ತನ್ನನ್ನು ತಾನು ವಕೀಲನೆಂದು ಹೇಳಿಕೊಂಡು ವೇಶ್ಯಾವಾಟಿಕೆ ಅಡ್ಡಕ್ಕೆ ರಕ್ಷಣೆ ಕೊಡಿ ಎಂದು ಮದ್ರಾಸ್‌ ಹೈಕೋರ್ಟ್‌ಗೆ(Madras high court) ಅರ್ಜಿ ಸಲ್ಲಿಸಿದ್ದಾನೆ. ಇನ್ನು ಅರ್ಜಿ ಬಗ್ಗೆ ಕೋರ್ಟ್‌ ತೀರ ಅಸಮಾಧಾನ ವ್ಯಕ್ತಪಡಿಸಿದೆ.

ರಾಜಾ ಮುರುಗನ್‌ ಎಂಬಾತ ಸಲ್ಲಿಸಿದ್ದ ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌ ಆತನಿಗೆ ₹ 10,000 ದಂಡ ವಿಧಿಸಿದೆ. ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಬಿ ಪುಗಳೇಂದಿ ಅವರು ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೇರಿ ವಕೀಲರ ಪರಿಷತ್ತಿಗೆ ಇತ್ತೀಚೆಗೆ ಆದೇಶಿಸಿದೆ.

ಸಮಾಜದಲ್ಲಿ ವಕೀಲರ ಹೆಸರಿಗೆ ಮಸಿ ಬಳಿಯುತ್ತಿರುವುದರ ಬಗ್ಗೆ ವಕೀಲರ ಪರಿಷತ್ತು ಚಿತ್ತ ಹರಿಸಲು ಇದು ಸಕಾಲ ಎಂದ ನ್ಯಾಯಾಲಯ, ವಕೀಲರ ಪರಿಷತ್ತಿನಲ್ಲಿ ಅಧಿಕೃತ ಕಾಲೇಜುಗಳಿಂದ ಪದವಿ ಪಡೆದವರನ್ನು ಮಾತ್ರ ನೋಂದಣಿ ಮಾಡಿಕೊಳ್ಳಬೇಕು. ಸಮವಸ್ತ್ರ ಧರಿಸಿದ್ದ ವಕೀಲರೊಬ್ಬರು ತಾನು ವೇಶ್ಯಾವಾಟಿಕೆ ನಡೆಸುತ್ತಿದ್ದು ಅದಕ್ಕೆ ರಕ್ಷಣೆ ಕೋರುವಂತೆ ಅರ್ಜಿ ಸಲ್ಲಿಸಿರುವುದು ನ್ಯಾಯಾಲಯವನ್ನು ಆಘಾತಕ್ಕೀಡುಮಾಡಿದೆ ಎಂದು ಹೈಕೋರ್ಟ್‌ ಹೇಳಿತು.

ತಾನು ʼಫ್ರೆಂಡ್ಸ್ ಫಾರ್ ಎವರ್ʼ ಎಂಬ ಟ್ರಸ್ಟ್ ಸ್ಥಾಪಿಸಿದ್ದು ಇದರ ಮುಖ್ಯ ಉದ್ದೇಶ ತನ್ನ ಸದಸ್ಯರು ಹಾಗೂ ಗ್ರಾಹಕರಿಗೆ ತೈಲ ಅಭ್ಯಂಜನ ಮತ್ತಿತರ ಲೈಂಗಿಕ ಸೇವೆಯಂತಹ ವಯಸ್ಕರ ಮನರಂಜನೆ ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ. ಸ್ಥಳೀಯ ಪೊಲೀಸರು ತಮ್ಮ ಟ್ರಸ್ಟ್‌ ಮೇಲೆ ದಾಳಿ ನಡೆಸಿ ಅದರ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಲೈಂಗಿಕ ಚಟುವಟಿಕೆಗಳನ್ನು ತಮಿಳುನಾಡು ಅನೈತಿಕ ಮಾನವ ಕಳ್ಳಸಾಗಣೆ (ತಡೆ) ಕಾಯಿದೆ ಕಾನೂನುಬಾಹಿರ ಎಂದು ಘೋಷಿಸಿಲ್ಲ ಎಂದಿದ್ದ ಅರ್ಜಿದಾರ ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಬುದ್ಧದೇವ್‌ ಕರ್ಮಾಸ್ಕರ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದ.

ವಿಚಾರಣೆ ನಡೆಸಿದ ಕೋರ್ಟ್‌ ಅರ್ಜಿದಾರರು ತಮಿಳುನಾಡು ಕಾಯಿದೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಗ್ರಹಿಸಿದ್ದಾರೆ. ಈ ಕಾನೂನುಗಳು ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸುವ ಮತ್ತು ಪುನರ್ಸವಸತಿ ಕಲ್ಪಿಸುವ ಉದ್ದೇಶ ಹೊಂದಿವೆಯೇ ವಿನಾ ವೇಶ್ಯಾಗೃಹ ನಡೆಸುವುದು ಕಾನೂನು ಬದ್ಧ ಎಂದು ಎಂದಿಗೂ ಹೇಳಿಲ್ಲ ಎಂಬುದಾಗಿ ಹೈಕೋರ್ಟ್‌ ಸ್ಪಷ್ಟಪಡಿಸಿತು.

ಹಿಂದಿನ ಆದೇಶವೊಂದರಲ್ಲಿ, ನ್ಯಾಯಾಲಯವ ಅರ್ಜಿದಾರ ನಿಜವಾಗಿಯೂ ವಕೀಲರೇ ಎಂದು ಖಚಿತಪಡಿಸಿಕೊಳ್ಳಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿ ಪ್ರಮಾಣಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿತ್ತು. ಆದರೆ ಅರ್ಜಿದಾರ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದ್ದ. ವ್ಯತಿರಿಕ್ತವಾಗಿ ಮುರುಗನ್ ಅಪ್ರಾಪ್ತ ಬಾಲಕಿಯ ಬಡತನದ ಲಾಭ ಪಡೆದು ಶೋಷಣೆ ಮಾಡಿದ್ದ. ಅರ್ಜಿಯಿಂದ ಕೋಪಗೊಂಡ ನ್ಯಾಯಾಲಯವು ಮುರುಗನ್ ಅವರ ಕಾನೂನು ಶಿಕ್ಷಣ ಮತ್ತು ವಕೀಲರ ಸಂಘದ ಸದಸ್ಯತ್ವವನ್ನು ಪರಿಶೀಲಿಸಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿಯನ್ನು ಹಾಜರುಪಡಿಸುವಂತೆ ಒತ್ತಾಯ ಮಾಡಿದೆ.

ಇದನ್ನೂ ಓದಿ: NEET UG 2024: ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ; ಇಲ್ಲಿದೆ ಡೈರೆಕ್ಟ್‌ ಲಿಂಕ್

Exit mobile version