Site icon Vistara News

Maldives: ಚೀನಾ ಜತೆ ಒಪ್ಪಂದದ ಬೆನ್ನಲ್ಲೇ ಮಾಲ್ಡೀವ್ಸ್‌ ಉದ್ಧಟತನ;‌ ಭಾರತ ಸೇನೆಗೆ ಡೆಡ್‌ಲೈನ್

Mohamed Muizzu And Xi Jinping

Maldives Orders Indian Officials To Leave After Military Pact With China

ನವದೆಹಲಿ: ಚೀನಾ ನೀಡುವ ಹಣಕಾಸು ನೆರವಿನ ಆಸೆಗಾಗಿ ಭಾರತದ ಜತೆ ಉದ್ಧಟತನದ ವರ್ತನೆ ತೋರುತ್ತಿರುವ ಮಾಲ್ಡೀವ್ಸ್‌ (Maldives) ಈಗ ಮತ್ತೊಂದು ಉಪಟಳ ಮಾಡಿದೆ. ಭಾರತೀಯ ಸೇನೆಯು ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ವಾಪಸಾಗುತ್ತಿದೆ ಎಂಬುದಾಗಿ ಭಾರತ ಘೋಷಿಸಿದರೂ, ಮೇ 10ರ ನಂತರ ಮಾಲ್ಡೀವ್ಸ್‌ನಲ್ಲಿ ಭಾರತದ (India Maldives Row) ಒಬ್ಬ ಸೈನಿಕನೂ (Indian Troops) ಇರಬಾರದು. ಸಮವಸ್ತ್ರ ಧರಿಸದೆ, ಸಾಮಾನ್ಯ ಉಡುಪು ಧರಿಸಿಯೂ ಕೂಡ ಭಾರತದ ಸೈನಿಕರು ಮಾಲ್ಡೀವ್ಸ್‌ನಲ್ಲಿ ಇರಬಾರದು ಎಂದು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಘೋಷಣೆ ಮಾಡಿದ್ದಾರೆ.

ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮ್ಮದ್ ಘಸ್ಸಾನ್ ಮೌಮೂನ್ ಅವರು ಚೀನಾದ ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರ ಕಚೇರಿಯ ಉಪ ನಿರ್ದೇಶಕ ಮೇಜರ್ ಜನರಲ್ ಜಾಂಗ್ ಬೌಕುನ್ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು. ಮೌಮೂನ್ ಮತ್ತು ಮೇಜರ್ ಜನರಲ್ ಬಾವೊಕುನ್ “ಮಾಲ್ಡೀವ್ಸ್ ಗಣರಾಜ್ಯಕ್ಕೆ ಉಚಿತವಾಗಿ ಚೀನಾದ ಮಿಲಿಟರಿ ನೆರವು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲಿದೆ” ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ತಿಳಿಸಿದೆ. ಚೀನಾ ಜತೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಮಾಲ್ಡೀವ್ಸ್‌ ಭಾರತಕ್ಕೆ ಗಡುವು ನೀಡಿದೆ.

ಭಾರತದ ಸುಮಾರು 80 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್‌ ಹಾಗೂ ನಿಗಾ ಯುದ್ಧವಿಮಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಚೀನಾ ಕೂಡ ಮಾಲ್ಡೀವ್ಸ್‌ನಲ್ಲಿ ಸೈನಿಕರನ್ನು ನಿಯೋಜಿಸಿದೆ. ಯಾವ ದೇಶದ ಸೇನೆಯೂ ಮಾಲ್ಡೀವ್ಸ್‌ನಲ್ಲಿ ಇರುವುದು ಬೇಕಾಗಿಲ್ಲ ಎಂದು ಮೊಹಮ್ಮದ್‌ ಮುಯಿಜು ಹೇಳಿದ್ದಾರೆ. ಆದರೆ, ಸೈನಿಕರನ್ನು ವಾಪಸ್‌ ಕಳುಹಿಸುವ ಕುರಿತು ಚೀನಾ ಜತೆ ಮಾತನಾಡಿರುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಉಚಿತ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಚೀನಾ ಸಹಿ

ಭಾರತದ ಸೈನಿಕರನ್ನು ಹಿಂತೆಗೆದುಕೊಳ್ಳಬೇಕು ಎಂದು ಇದಕ್ಕೂ ಮೊದಲು ಮಾಲ್ಡೀವ್ಸ್‌ ಮಾರ್ಚ್‌ 15ರ ಗಡುವು ನೀಡಿತ್ತು. ಆದರೆ, ಮಾಲ್ಡೀವ್ಸ್‌ ಹಾಗೂ ಭಾರತದ ಮಧ್ಯೆ ಮಾತುಕತೆ ನಡೆದು, ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾಗಿ, ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ ಎಂದು ಮುಯಿಜು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್‌ ಸಚಿವರು ನೀಡಿದ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು. ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಕೂಡ ಆರಂಭವಾಗಿತ್ತು. ಅಷ್ಟೇ ಅಲ್ಲ, ಮೊಹಮ್ಮದ್‌ ಮುಯಿಜು ಅವರ ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ವಿರೋಧ ವ್ಯಕ್ತವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version