Site icon Vistara News

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಮೂರು ದಿನ ಭಾರೀ ಮಳೆ ಸಾಧ್ಯತೆ

rain news

ನವ ದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಈ ಬಾರಿ ಮುಂಗಾರಿನ ಆರ್ಭಟ ಬಿರುಸಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಉತ್ತರದ ರಾಜ್ಯಗಳಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಪ್ರವಾಹ ಪೀಡಿತ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ಮಾಡಲಾಗುತ್ತಿದೆ.

ಕರ್ನಾಟಕ ಸೇರಿದಂತೆ ತೆಲಂಗಾಣ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್​ನಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭೂ ಕುಸಿತ, ಪ್ರವಾಹ ಪರಿಸ್ಥಿತಿಯಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ.

ಇದನ್ನು ಓದಿ| Weather Report | ರಾಜ್ಯಾದ್ಯಂತ ಮುಂದಿನ 24 ಗಂಟೆ ಭಾರಿ ಮಳೆ ಮುನ್ಸೂಚನೆ

ಮಳೆಗೆ ತತ್ತರಿಸಿದ ಮಹಾ ಮುಂಬೈ

ಮಹಾರಾಷ್ಟ್ರದ ವಾಣಿಜ್ಯ ನಗರಿಯಾಗಿರುವ ಮುಂಬೈನಲ್ಲಿ ಬಿಟ್ಟೂಬಿಡದೇ ಮಳೆಯಾಗುತ್ತಿರುವುದರಿಂದ ನಗರದ ರಸ್ತೆಗಳು, ತಗ್ಗು ಪ್ರದೇಶಗಳಿಗೆಲ್ಲ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಮುಂಬೈನ ಪ್ರಮುಖ ನಗರಗಳಾದ ಪುಣೆ, ಥಾಣೆ, ರಾಯ್​ಗಢ, ಪಾಲ್ಗರ್​ನಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಜನ ಮನೆಗಳಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬೈನಲ್ಲಿ ಇನ್ನು ಎರಡೂ ಮೂರು ದಿನ ಮಳೆ ಇದೇ ರೀತಿ ಮುಂದುವರೆಯಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ (ಜು.13) ಬಾಂದ್ರಾ, ನಾಗಪುರ, ಗೊಂದಿಯಾ ಮತ್ತು ವರ್ಧಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲೂ ವರುಣಾರ್ಭಟ ಜೋರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧಾರಕಾರ ಮಳೆಯಾಗುತ್ತಿದೆ. ಗಾಜಿಯಾಬಾದ್​, ಚಪ್ರುಲ್ಲಾ, ದಾದ್ರಿ, ಗ್ರೇಟರ್ ನೋಯ್ಡಾದಲ್ಲಿ ಮುಂದಿನ ಕೆಲ ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 2 ಮಿ.ಮೀನಷ್ಟು ಮಳೆಯಾಗಿದ್ದು, ನಗರದ ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ.

ಮಳೆಗೆ ಹೈರಾಣಾದ ಗುಜರಾತ್ ಜನ

ಗುಜರಾತ್​ನ ಹಲವು ರಾಜ್ಯಗಳಲ್ಲಿ ಭೀಕರ ಮಳೆಯಾಗುತ್ತಿರುವ ಕಾರಣ ರಾಜ್ಯಾದ್ಯಂತ ಮುಂಜಾಗೃತೆ ಕ್ರಮವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಕಳೆದ 24 ಗಂಟೆಯಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪ್ರವಾಹ, ಭೂಕುಸಿತದಿಂದಾಗಿ 69 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈವರೆಗೆ 27,896 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು, 18,225 ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ತೆಲಂಗಾಣದಲ್ಲೂ ಮಳೆರಾಯನ ಗರ್ಜನೆ

ತೆಲಂಗಾಣದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಅದಿಲಾಬಾದ್​ ಜಿಲ್ಲೆಯಲ್ಲಿ ಮಳೆಯ ರೌದ್ರ ನರ್ತನ ಹೆಚ್ಚಾಗಿದ್ದು, ಜಿಲ್ಲೆಯ 10 ಹಳ್ಳಿಗಳು ಸಂಪೂರ್ಣ ಜಲ ಸಮಾಧಿಯಾಗಿದೆ. ಹೀಗಾಗಿ ಸ್ಥಳದಲ್ಲಿರುವ ಎನ್​ಡಿಆರ್​ಎಫ್​ ತಂಡ ಪ್ರವಾಹ ಪೀಡಿತ ಸ್ಥಳಗಳಲ್ಲಿರುವ ಜನರನ್ನು ಬೇರೆಡೆ ಸ್ಥಳಾಂತರ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ಕರ್ನಾಟಕದಲ್ಲೂ ನಿಲ್ಲದ ಮೇಘ ನರ್ತನ

ಕರ್ನಾಟಕದ ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದಲೂ ನಿರಂತರ ಮಳೆಯಾಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಹಾಸನ, ಹಾವೇರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಮಂಗಳವಾರ (ಜು.12) ಸಿಎಂ ಬಸವರಾಜ ಬೊಮ್ಮಾಯಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕದಲ್ಲೂ ಮುಂದಿನ ಎರಡುಮೂರು ದಿನ ಮಳೆ ಹೀಗೆಯೇ ಮುಂದುವರಿಯಲಿದೆ. ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನು ಓದಿ|Rain News| ಭೀಕರ ಮಳೆಗೆ ಬೀಳುತ್ತಿವೆ ಮನೆಗಳು, ತತ್ತರಿಸುತ್ತಿದೆ ಬದುಕು

Exit mobile version