ನವದೆಹಲಿ: ಖಲಿಸ್ತಾನಿ ಉಗ್ರ, ಕೆನಡಾ, ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು (Gurpatwant Singh Pannun) ಅಮೆರಿಕದಲ್ಲಿಯೇ ಹತ್ಯೆ ಮಾಡಲು ಭಾರತದ ಪ್ರಜೆ ನಿಖಿಲ್ ಗುಪ್ತಾ (Nikhil Gupta) ಎಂಬುವರು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದ ಬೆನ್ನಲ್ಲೇ ಭಾರತ ಪ್ರತಿಕ್ರಿಯೆ ನೀಡಿದೆ. “ಇದೊಂದು ಕಳವಳಕಾರಿ ವಿಷಯವಾಗಿದೆ. ಅಲ್ಲದೆ, ಭಾರತದ ನೀತಿಗೆ ಇದು ವಿರುದ್ಧವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಹೇಳಿದ್ದಾರೆ.
“ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತದ ಪ್ರಜೆ ಸಂಚು ರೂಪಿಸಿದ್ದಾರೆ ಎಂಬ ವಿಷಯವಳು ಆತಂಕ ಹುಟ್ಟಿಸುವಂತಿದೆ. ಇಂತಹ ಪ್ರಕರಣಗಳು ಭಾರತದ ನೀತಿಗೆ ವಿರುದ್ಧವಾಗಿವೆ. ಅಲ್ಲದೆ, ಭದ್ರತೆ ವಿಷಯದಲ್ಲಿ ಭಾರತವು ಅಮೆರಿಕಕ್ಕೆ ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ. ಸಹಕಾರ ತತ್ವದಲ್ಲಿ ಅಮೆರಿಕವು ಭಾರತಕ್ಕೆ ಅಪರಾಧಿಗಳು, ಉಗ್ರರು, ಶಾರ್ಪ್‌ಶೂಟರ್‌ಗಳ ಕುರಿತು ಮಾಹಿತಿ ನೀಡಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಲ್ಲದೆ, ಸಮಗ್ರ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ್ದೇವೆ” ಎಂದು ಸುದ್ದಿಗೋಷ್ಠಿ ಮೂಲಕ ಅರಿಂದಮ್ ಬಾಗ್ಚಿ ಸ್ಪಷ್ಟನೆ ನೀಡಿದ್ದಾರೆ.
#WATCH | MEA Spokesperson Arindam Bagchi says, "As regards the case against an individual that has been filed in a US court, allegedly linking him to an Indian official, this is a matter of concern. We have said that this is also contrary to government policy. The nexus between… pic.twitter.com/k445jwS78Y
— ANI (@ANI) November 30, 2023
“ಭದ್ರತೆ ಹಾಗೂ ಸ್ಥಿರತೆ ವಿಚಾರದಲ್ಲಿ ಅಮೆರಿಕಕ್ಕೆ ಭಾರತವು ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ. ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿಯ ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದು ಭದ್ರತೆಗೆ ಸಂಬಂಧಿಸಿದ ವಿಚಾರವಾದ ಕಾರಣ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಆಗುವುದಿಲ್ಲ” ಎಂದು ತಿಳಿಸಿದ್ದಾರೆ.
ಭಾರತ ವಿರೋಧಿ ಹೇಳಿಕೆ, ಬೆದರಿಕೆಗಳಿಂದ ಸುದ್ದಿಯಾಗುತ್ತಿರುವ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಅಮೆರಿಕದ ನೆಲದಲ್ಲಿಯೇ ಹತ್ಯೆ ಮಾಡಲು ನಿಖಿಲ್ ಗುಪ್ತಾ ಎಂಬ ಭಾರತದ ಪ್ರಜೆಯು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಜೆಕ್ ಅಧಿಕಾರಿಗಳು ಕಳೆದ ಜೂನ್‌ನಲ್ಲಿ ನಿಖಿಲ್ ಗುಪ್ತಾ ಎಂಬಾತನನ್ನು ಬಂಧಿಸಿದ್ದಾರೆ. ಇದರ ಕುರಿತು ಮ್ಯಾನ್‌ಹಟನ್ ಉನ್ನತ ಫೆಡರಲ್ ಪ್ರಾಸಿಕ್ಯೂಟರ್ ಡಾಮಿಯನ್ ವಿಲಿಯಮ್ಸ್ ಅವರು ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಗುರುಪತ್ವಂತ್ ಪನ್ನುನ್ ಕೊಲೆಗೆ ಸ್ಕೆಚ್, ಭಾರತದ ಪ್ರಜೆ ವಿರುದ್ಧ ಅಮೆರಿಕ ಆರೋಪ
ಅಮೆರಿಕ ಹೇಳಿಕೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಅಮೆರಿಕಕ್ಕೆ ಸ್ಪಷ್ಟನೆ ನೀಡಿದೆ. ಇನ್ನು, ನಿಖಿಲ್ ಗುಪ್ತಾ ಕುರಿತು ಅಮೆರಿಕ ಹೇಳಿಕೆ ಬಿಡುಗಡೆ ಮಾಡುತ್ತಲೇ, “ಇದನ್ನು ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು” ಎಂದು ಕೆನಡಾ ಸರ್ಕಾರ ಆಗ್ರಹಿಸಿದೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಇದಕ್ಕೂ ಮೊದಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ