Site icon Vistara News

ಸ್ಮರಣೆ: Sardar Udham Singh: ಮಹಾನ್ ಸಾಹಸಿ ಶಹೀದ್ ಉಧಾಮ್ ಸಿಂಗ್

udham singh

:: ಮಯೂರಲಕ್ಷ್ಮೀ

ಉಧಮ್ ಸಿಂಗ್, ಸರ್ದಾರ್ ತೆಹಲ್ ಸಿಂಗ್ ಜಮ್ಮು ಮತ್ತು ಮಾತಾ ನರೇನ್ ಕೌರ್‌ ಅವರ ಪುತ್ರ. ಡಿಸೆಂಬರ್ 26, 1899ರಂದು ಭಾರತದ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುನಮ್‌ನಲ್ಲಿ ಅವರ ಜನನ. ತಂದೆಯ ಮರಣದ ನಂತರ ಉಧಮ್ ಸಿಂಗ್ ಮತ್ತು ಅವರ ಹಿರಿಯ ಸಹೋದರ ಮುಕ್ತಾ ಸಿಂಗ್ ಅವರನ್ನು ಅಮೃತಸರದ ಸೆಂಟ್ರಲ್ ಖಾಲ್ಸಾ ಅನಾಥಾಶ್ರಮ ಪುಟ್ಲಿಘರ್ ಅವರು ಬೆಳೆಸಿದರು. 1918ರಲ್ಲಿ, ಉಧಮ್ ಸಿಂಗ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1919ರಲ್ಲಿ ಅನಾಥಾಶ್ರಮವನ್ನು ತೊರೆದರು.

13 ಏಪ್ರಿಲ್ 1919ರಂದು ಜಲಿಯಾನ್ ವಾಲಾಬಾಗ್‌ನಲ್ಲಿ ರೌಲೆಟ್ ಪ್ರಸ್ತಾವನೆ ಮತ್ತು ಬ್ರಿಟಿಷ್ ಕಾನೂನುಗಳನ್ನು ಕುರಿತು ಪಂಜಾಬಿನ 25,000 ನಾಗರೀಕರು ಶಾಂತ ರೀತಿಯಲ್ಲಿ ಸಭೆ ಸೇರಿದ್ದರು. ಬ್ರಿಟಿಷ್ ಸರ್ಕಾರ ವಿವಿಧ ಕಾನೂನುಗಳಿಂದ ಕ್ರಾಂತಿಕಾರಿಗಳ ಸಾಹಸಗಳನ್ನು ಹತ್ತಿಕ್ಕಲು ಮುಂದಾಗಿತ್ತು. ಆ ಸಭೆಯಿಂದ ಜನರಲ್ಲಿ ಜಾಗೃತಿ ಮೂಡಬಹುದು. ಅದರಿಂದ ತಮಗೆ ಅಪಾಯ ಎಂದು ಬ್ರಿಟಿಷರು ಮನಗಂಡಿದ್ದರು. ಅಂದಿನ ಗವರ್ನರ್ ಜನರಲ್ ಡ್ವಯರ್ ಅಂದು ತನ್ನ ಕಾರ್ಯಾಚರಣೆ ಮಾಡಲು ಮುಂದಾದ. ಅವನ ಆಜ್ಞೆಯನ್ನು ಪಾಲಿಸಿದವನು ಅತ್ಯಂತ ಕ್ರೂರಿ ಮತ್ತು ಪೈಶಾಚಿಕ ಮನೋಭಾವದ ಪೋಲೀಸ್ ಅಧಿಕಾರಿ ಜನರಲ್ ಡಯರ್. ಪೋಲೀಸರಿಗೆ ಅಲ್ಲಿ ನೆರೆದಿದ್ದ ಜನರ ಮೇಲೆ ಗುಂಡು ಹಾರಿಸಲು ಮತ್ತು ಆಕ್ರಮಣ ಮಾಡಿ ಸದೆಬಡಿಯಲು ಆಜ್ಞೆಯಿತ್ತ.

ಆ ಬೃಹತ್ ಸ್ಥಳದ ಎಲ್ಲಾ ದ್ವಾರಗಳನ್ನೂ ಮುಚ್ಚಲಾಯಿತು. ಕೇವಲ 15 ನಿಮಿಷಗಳಲ್ಲಿ ಸೇನೆಯ ಜನರಲ್ ಡಯರ್‌ನ ಆಜ್ಞೆಯಂತೆ 1650 ಕಾಡತೂಸುಗಳಿಂದ ಕಂಡಲ್ಲಿ ಗುಂಡು ಹಾರಿಸಿದರು. ನೂರಾರು ಜನ ಸ್ಥಳದಲ್ಲೇ ಸತ್ತರು. ಹೆದರುತ್ತಾ ಎಲ್ಲರೂ ಓಡತೊಡಗಿದರು. ಅನೇಕರು ಕಾಲ್ತುಳಿತಕ್ಕೆ ತುತ್ತಾದರು. ಸಾವಿರಾರು ಗಾಯಗೊಂಡರು, ಹಿರಿಯರು, ಹೆಂಗಸರು ಮಕ್ಕಳೆಲ್ಲರ ಆಕ್ರಂದನ ಮುಗಿಲು ಮುಟ್ಟಿತು. ಯಾರೂ ತಪ್ಪಿಸಿಕೊಳ್ಳಲಾಗದಂತೆ ಎಲ್ಲಾ ದ್ವಾರಗಳನ್ನೂ ಮುಚ್ಚಲಾಗಿತ್ತು. ಅನೇಕರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಅಲ್ಲಿದ್ದ ಬಾವಿಗಳಲ್ಲಿ ಹಾರಿದರು.

ಅಂದು ಅಲ್ಲಿದ್ದವರಿಗೆ ನೀರುಣಿಸಲು ತನ್ನ ಅನಾಥಾಶ್ರಮದ ಸ್ನೇಹಿತರೊಂದಿಗೆ ಬಾಲಕ ಉಧಾಮ್ ಸಿಂಗ್ ಆ ಸಭೆಗೆ ಬಂದಿದ್ದ. ಅಮಾನುಷ ರೀತಿಯಲ್ಲಿ ಬಲಿಯಾದ ತನ್ನವರನ್ನು ಕಂಡು ಮರುಗಿದ. ಯಾರಿಗೂ ಕಾಣದಂತೆ ಅಡಗಿಕೊಂಡು ಪ್ರಾಣಾಪಾಯದಿಂದ ತಪ್ಪಿಸಿಕೊಂಡ. ಬ್ರಿಟಿಷರ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಅಂದೇ ಪಣ ತೊಟ್ಟ. ಈ ಕೃತ್ಯಕ್ಕೆ ಕಾರಣನಾದ ಡ್ವಯರ್‌ನ ಮೇಲೆ ಸೇಡನ್ನು ತೀರಿಸಿಕೊಂಡೇ ಸಾಯುವೆ ಎಂದು ತನ್ನ ಮಾತೃಭೂಮಿಯ ಮೇಲೆ ಆಣೆ ಮಾಡಿದ.

ಆದರೆ ಜನರಲ್ ಡ್ವಯರ್ ಮತ್ತು ಪೋಲೀಸ್ ಅಧಿಕರಿ ಡಯರ್ ಮೇಲೆ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಡ್ವಯರ್‌ನನ್ನು ಉನ್ನತ ಹುದ್ದೆಯ ಮೇರೆಗೆ ಲಂಡನ್ನಿಗೆ ಕಳುಹಿಸಲಾಯಿತು. ಆದರೆ ಉಧಾಮ್ ಸಿಂಗ್ ಎನ್ನುವ ಸಾಹಸಿ ಬಾಲಕ ಅವನನ್ನು ಮರೆಯಲಿಲ್ಲ.

ಈ ಘಟನೆಯ ನಂತರ, ಉಧಮ್ ಸಿಂಗ್ ಕ್ರಾಂತಿಕಾರಿ ರಾಜಕೀಯದಲ್ಲಿ ತೊಡಗಿಸಿಕೊಂಡರು ಮತ್ತು ಭಗತ್ ಸಿಂಗ್ ಅವರಿಂದ ಪ್ರಭಾವಿತರಾದರು. 1924ರಲ್ಲಿ, ಉಧಮ್ ಸಿಂಗ್ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಉರುಳಿಸಲು ಗದರ್ ಪಕ್ಷವನ್ನು ಸೇರಿದರು ಮತ್ತು ಅದಕ್ಕಾಗಿ ಸಾಗರೋತ್ತರ ಭಾರತೀಯರನ್ನು ಸಂಘಟಿಸಿದರು. 1927ರಲ್ಲಿ ಭಗತ್ ಸಿಂಗ್ ಅವರಿಂದ ಆದೇಶವನ್ನು ಪಡೆದ ನಂತರ, ಉಧಮ್ ಸಿಂಗ್ ಭಾರತಕ್ಕೆ 25 ಸಹಚರರು ಮತ್ತು ಮದ್ದುಗುಂಡುಗಳನ್ನು ತಂದರು.

ಶೀಘ್ರದಲ್ಲೇ ಅವರನ್ನು 25 ಸಹಚರರ ಜತೆಗೆ ಬಂಧಿಸಲಾಯಿತು. ಬಂಧನದ ಸಮಯದಲ್ಲಿ, “ಘದರ್-ಇ-ಗುಂಜ್” ಎಂಬ ನಿಷೇಧಿತ ಗದರ್ ಪಾರ್ಟಿ ಪತ್ರಿಕೆಯ ಎವೋಲ್ವರ್‌ಗಳು, ಮದ್ದುಗುಂಡುಗಳು ಮತ್ತು ಪತ್ರಿಕೆಗಳನ್ನು ವಶಪಡಿಸಿಕೊಳ್ಳಲಾಯಿತು. ಅದು ಅವರನ್ನು ಐದು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಯಿತು.

1931ರಲ್ಲಿ ಉಧಮ್ ಸಿಂಗ್ ಜೈಲಿನಿಂದ ಬಿಡುಗಡೆಯಾದರು. ಆದರೆ ಪಂಜಾಬ್ ಪೋಲಿಸ್ ಅವರ ಚಲನವಲನಗಳ ಮೇಲೆ ನಿಗಾ ಇರಿಸಿದರು. ಆದರೆ ಅವರು ಪೊಲೀಸರಿಂದ ತಪ್ಪಿಸಿಕೊಂಡರು. ಕಾಶ್ಮೀರದ ಮೂಲಕ ಜರ್ಮನಿಯನ್ನು ತಲುಪಿದರು. 1935ರಲ್ಲಿ ಲಂಡನ್ ತಲುಪಿದರು. ಎಂಜಿನಿಯರ್ ಆಗಿ ಕೆಲಸ ಮಾಡಿದರು. ಜಲಿಯನ್‌ ವಾಲಾಬಾಗ್‌ನಲ್ಲಿ ನೂರಾರು ಶಾಂತಿಯುತ ಪ್ರತಿಭಟನಾಕಾರರನ್ನು ಕೊಲ್ಲಲು ಕಾರಣವಾದ ಡ್ವಯರ್‌ನನ್ನು ಕೊಲ್ಲಲು ಯೋಜನೆ ಹಾಕಿದರು.

1940ರ ಮಾರ್ಚ್ 13, ಕಾಕ್ಸ್‌ಟನ್, ಲಂಡನ್. ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ರಾಯಲ್ ಸೆಂಟ್ರಲ್ ಏಷಿಯಾ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸಭೆ ನಡೆದಿತ್ತು. ಲಾರ್ಡ್ ಜೆಟ್ಲ್ಯಾಂಡ್ ಅಧ್ಯಕ್ಷತೆಯಲ್ಲಿ ಜಗತ್ತಿನ ವಿದ್ಯಮಾನಗಳ ಚರ್ಚೆಯಾಗುತ್ತಿತ್ತು. ಭಾಷಣಗಳ ನಂತರ ವಿಶೇಷವಾಗಿ ಸನ್ಮಾನ ಸಮಾರಂಭವೂ ಇತ್ತು. ಅಂದಿನ ಸನ್ಮಾನಿತ ಸರ್ ಮೈಕಲ್ ಓ’ಡ್ವಯರ್ ಭಾರತದಲ್ಲಿ ಅಧಿಕಾರಿಯಾಗಿದ್ದಾಗ ತಾನು ಮಾಡಿದ ಸಾಧನೆಗಳನ್ನು ಕುರಿತು ಬೀಗುತ್ತಾ ಮಾತನಾಡಿದ. ಮುಖ್ಯ ಭಾಷಣಕಾರರ ಮಾತುಗಳು ಮುಗಿದ ನಂತರ ಅವನಿಗೆ ಸನ್ಮಾನ.

ಸನ್ಮಾನ ಮತ್ತು ವಂದನಾರ್ಪಣೆಯ ಬಳಿಕ ಎಲ್ಲರೂ ಹೊರಡಲನುವಾದರು. ಡ್ವಯರ್‌ನ ಹಿಂದೆ ಸುಮಾರು ಮೂರು ಗಜಗಳಷ್ಟು ಅಂತರದಲ್ಲಿದ್ದ ಉಧಾಮ್ ಮಿಂಚಿನ ವೇಗದಲ್ಲಿ ಅವನೆದುರಾಗಿ ನಿಂತರು. ಕ್ಷಣಮಾತ್ರದಲ್ಲಿ ನಿಶ್ಚಿತ ಗುರಿಯಿಟ್ಟು (ಪಾಯಿಂಟ್ ಬ್ಲ್ಯಾಂಕ್ ರೇಂಜ್) ಪಿಸ್ತೂಲಿನಿಂದ ಅವನ ಮೇಲೆ ಗುಂಡು ಹಾರಿಸಿದರು. ಡ್ವಯರ್ ನೆಲಕ್ಕುರುಳಿದ. ರಕ್ತದ ಮಡುವಲ್ಲಿ ಬಿದ್ದ. ಎದುರು ಬಂದವರತ್ತ ಪಿಸ್ತೂಲು ಚಲಾಯಿಸಿದರು. ಲಾರ್ಡ್ ಜೆಟ್‌ಲ್ಯಾಂಡ್ ಸೇರಿದಂತೆ ಮೂವರು ಗಾಯಗೊಂಡರು. ಉಧಾಮರ ಕೆಲಸ ಮುಗಿದಿತ್ತು. ಅದು ಡ್ವಯರ್‌ನ ಬಲಿ. ಏಕೆಂದರೆ ಅವನು ಸಾವಿರಾರು ಮುಗ್ಧಜನರ ನರಮೇಧ ನಡೆದ ಹತ್ಯಾಕಾಂಡದ ರೂವಾರಿ!

ಅಂದು ಉಧಾಮ ಸಿಂಗ್ ಸ್ವಲ್ಪವೂ ಹೆದರದೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ತಾನಾಗಿಯೇ ಬ್ರಿಟಿಷರಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡು ಕೈಸೆರೆಯಾದರು. ಅವನನ್ನು ಬ್ರಿಕ್ಸ್‌ಟನ್‌ ಜೈಲಿನಲ್ಲಿರಿಸಲಾಯಿತು. ಕಾನೂನು ರೀತ್ಯಾ ಮೊಕದ್ದಮೆ ನಡೆಯಿತು. ಜೂನ್ 5ರಂದು ಅವರ ಅಂತಿಮ ಹೇಳಿಕೆಯನ್ನು ಪಡೆಯಲಾಯಿತು. ಭಾರತವನ್ನು ಗುಲಾಮಗಿರಿಗೆ ತಳ್ಳಿ ದೌರ್ಜನ್ಯವೆಸಗುತ್ತಿದ್ದ ವಸಾಹತುಶಾಹಿ ಬ್ರಿಟಿಷ್ ಆಡಳಿತದ ವಿರುದ್ಧ ಅದು ಭಾರತೀಯರ ಪ್ರತಿಕ್ರಿಯೆ ಎಂದು ಅವರು ಪ್ರತಿಪಾದಿಸಿದರು. ತನ್ನ ಗುರಿ ತಲುಪಲು 21 ವರ್ಷಗಳೇನು, ಇಡೀ ಜನ್ಮವೇ ಕಾದಿದ್ದರೂ ಸೇಡನ್ನು ತೀರಿದ ನಂತರವೇ ಸಾಯುತ್ತಿದ್ದೆ ಎಂದರು.

ವಿಶ್ವದೆಲ್ಲೆಡೆ ಅವರದೇ ಚರ್ಚೆಯಾಯಿತು. ಜರ್ಮನ್ ಪತ್ರಿಕೆಯೊಂದರಲ್ಲಿ ಅವನನ್ನು ಭಾರತದ ಸ್ವಾತಂತ್ರ್ಯದ ಕನಸಿನ ಹೊಸ ಬೆಳಕು ಎಂದು ಹೊಗಳಿ ಬರೆದರು. 1940, ಜುಲೈ 31ರಂದು 30 ವರ್ಷಗಳ ಹಿಂದೆ ಮದನ್ ಲಾಲ್ ಡಿಂಗ್ರಾರನ್ನು ಗಲ್ಲಿಗೇರಿಸಿದ್ದ ʼಪೆಂಟೋವಿಲ್ಲೇʼ ಸೆರಮೆನೆಯಲ್ಲಿ ಸರದಾರ್ ಉಧಾಮ್ ಸಿಂಗ್‍ ಅವರನ್ನು ಗಲ್ಲಿಗೇರಿಸಲಾಯಿತು. ಭಾರತದ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖ ಮತ್ತು ಅಂತಿಮ ಬಲಿದಾನಿಯೂ ಅಸ್ತಂಗತರಾದರು. ಇತಿಹಾಸದ ಪುಟಗಳಲ್ಲಿ ಶಹೀದ್ ಉಧಾಮ್ ಸಿಂಗ್ ಅಮರರಾದರು.

ಇದನ್ನೂ ಓದಿ: ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ

Exit mobile version