Site icon Vistara News

ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಭಾರತ ಕಾರಣ ಎಂದಿದ್ದ ಬೈಡೆನ್! ವೈಟ್ ಹೌಸ್ ಸ್ಪಷ್ಟೀಕರಣ ಏನು?

Narendra Modi And Joe Biden

Misunderstood: White House On Biden Linking Hamas Attack To Corridor

ವಾಷಿಂಗ್ಟನ್‌: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ದಾಳಿ-ಪ್ರತಿದಾಳಿಯು (Israel Palestine War) ದಿನೇದಿನೆ ಭೀಕರವಾಗುತ್ತಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು (Hamas Terrorists), ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಪ್ರತಿದಾಳಿಗೆ ಇದುವರೆಗೆ 7 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಇಷ್ಟಾದರೂ, ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ಮೇಲೆ ದಾಳಿ ನಡೆಸಲು ಇಸ್ರೇಲ್‌ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ, “ಭಾರತದಲ್ಲಿ ನಡೆದ ಜಿ20 ಸಭೆ ವೇಳೆ ಮಾಡಿಕೊಂಡ ಒಪ್ಪಂದದಿಂದಾಗಿ ಇಸ್ರೇಲ್-ಹಮಾಸ್‌ ಉಗ್ರರ ನಡುವೆ ಸಮರ ಏರ್ಪಟ್ಟಿದೆ” ಎಂಬುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ ಎಂಬ ವಿಷಯವು ಸಂಚಲನ ಮೂಡಿಸಿದೆ. ಇದರ ಮಧ್ಯೆಯೇ, ಜೋ ಬೈಡೆನ್‌ ಹೇಳಿಕೆ ಕುರಿತು ವೈಟ್‌ ಹೌಸ್‌ ಸ್ಪಷ್ಟನೆ ನೀಡಿದ್ದು, “ಜೋ ಬೈಡೆನ್‌ (Joe Biden) ಹೇಳಿರುವುದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಮೆರಿಕ ಭದ್ರತಾ ಸಮಿತಿ ವ್ಯೂಹಾತ್ಮಕ ಸಂವಹನಗಳ ಸಹ ಸಂಚಾಲಕ ಜಾನ್‌ ಕಿರ್ಬಿ ಅವರು ಜೋ ಬೈಡೆನ್‌ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. “ಹಮಾಸ್‌ ದಾಳಿಗೆ ಕಾರಣವೇನು ಎಂಬುದರ ಕುರಿತು ನನ್ನದೂ ಅಭಿಪ್ರಾಯವಿದೆ. ಇಸ್ರೇಲ್‌ ಹಾಗೂ ಸೌದಿ ಅರೇಬಿಯಾ ಮಾತುಕತೆ ನಡೆಸಲಿ, ಎಲ್ಲವೂ ಮೊದಲಿನ ಸ್ಥಿತಿಗೆ ಬರಲಿ ಎಂಬುದು ನಮ್ಮ ನಿಲುವಾಗಿದೆ. ಇಸ್ರೇಲ್‌ ಸಮಗ್ರತೆಯೂ ಪ್ರಮುಖ ಅಂಶವಾಗಿದೆ. ಆದರೆ, ಎಲ್ಲೂ ಜೋ ಬೈಡೆನ್‌ ಅವರು ಭಾರತದಲ್ಲಿ ಮಾಡಿಕೊಂಡ ಇಂಡಿಯಾ-ಮಿಡಲ್‌ ಈಸ್ಟ್‌-ಯುರೋಪ್‌ ಎಕನಾಮಿಕ್‌ ಕಾರಿಡಾರ್‌ ನಿರ್ಮಾಣ ಒಪ್ಪಂದದ ಕುರಿತು ಪ್ರಸ್ತಾಪಿಸಿಲ್ಲ. ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ” ಎಂದು ಮಾಧ್ಯಮಗಳಿಗೆ ಕಿರ್ಬಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ವೇಳೆ ಇಂಡಿಯಾ-ಮಿಡಲ್‌ ಈಸ್ಟ್‌-ಯುರೋಪ್‌ ಎಕನಾಮಿಕ್‌ ಕಾರಿಡಾರ್‌ ನಿರ್ಮಾಣ ಒಪ್ಪಂದಕ್ಕೆ ಸದಸ್ಯ ರಾಷ್ಟ್ರಗಳು ಸಹಿ ಹಾಕಿವೆ. ರೈಲು ಸಂಪರ್ಕ ಯೋಜನೆಗಳ ವಿಸ್ತರಣೆ, ಉತ್ಪನ್ನಗಳ ಸಾಗಣೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜಿ20 ಸದಸ್ಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. ಪ್ರಧಾನಿ ನರೇಂದ್ರ ಮೋದಿ ಕೂಡದ ಒಪ್ಪಂದವನ್ನು ಶ್ಲಾಘಿಸಿದ್ದರು. ಆದರೆ, ಇದೇ ಒಪ್ಪಂದದಿಂದಾಗಿ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಮಧ್ಯೆ ಸಂಘರ್ಷ ಏರ್ಪಟ್ಟಿದೆ ಎಂದು ಜೋ ಬೈಡೆನ್‌ ಹೇಳಿದ್ದಾರೆ ಎಂಬ ವಿಷಯವು ಸಂಚಲನ ಮೂಡಿಸಿತ್ತು. ಈಗ ವೈಟ್‌ ಹೌಸ್‌ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: Israel Palestine War: ಗಾಜಾದ ಅಡಿಯಲ್ಲಿದೆ ಭೂಗತ ನಗರ! ಭಯಾನಕ ಸುರಂಗಗಳೇ ಈಗ ಇಸ್ರೇಲ್‌ ಸೈನ್ಯಕ್ಕೆ ತಲೆನೋವು!

7 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 7,100 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್‌ ಮೇಲೆ ಹಮಾಸ್‌ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್‌ ಸತತ ದಾಳಿಗೆ 5,700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.

Exit mobile version