ಕಾರವಾರ: ತನ್ನ ಗುರುವಿಗಾಗಿ ಬಲಗೈ ಹೆಬ್ಬೆರಳನ್ನೇ ಕತ್ತರಿಸಿಕೊಟ್ಟ ಏಕಲವ್ಯನ ಕಥೆಯನ್ನು ನಾವು ಪುರಾಣದಲ್ಲಿ ಕೇಳಿದ್ದೇವೆ. ಜತೆಗೆ ಆತನ ಗುರು ಭಕ್ತಿಗೆ ತಲೆದೂಗಿದ್ದೇವೆ. ಅಂತಹದ್ದೇ ಭಕ್ತಿ ಹೊಂದಿರುವ ವ್ಯಕ್ತಿ ಈ ಆಧುನಿಕ ಯುಗದಲ್ಲಿಯೂ ಇದ್ದಾರೆ ಎಂದರೆ ನಂಬುತ್ತೀರಾ? ಹೌದು, ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಆಗ್ರಹಿಸಿ ಅವರು ಅಪ್ಪಟ ಅಭಿಮಾನಿಯೊಬ್ಬರು ತಮ್ಮ ಬೆರಳನ್ನೇ ಕಾಳಿ ದೇವಿಗೆ ಅರ್ಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು ಎಂದು ಪ್ರಾರ್ಥಿಸಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದ ಅರುಣ್ ವರ್ಣೇಕರ್, ಕಾಳಿ ಮಾತೆಗೆ ಎಡಗೈ ಬೆರಳನ್ನು ಅರ್ಪಿಸಿದ್ದಾರೆ.
ಅವಿವಾಹಿತರಾಗಿರುವ ಅವರು ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಮನೆಯಲ್ಲಿ ಮೋದಿಗಾಗಿ ಗುಡಿಯನ್ನೂ ನಿರ್ಮಿಸಿ ಪ್ರತಿ ದಿನ ಪೂಜೆ ಮಾಡುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಕಾಳಿಮಾತೆ ಬಳಿ ಬೇಡಿಕೊಂಡಿದ್ದಾರೆ. ಜತೆಗೆ ರಕ್ತದಲ್ಲಿ ʼಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋʼ, ʼಮೋದಿ ಬಾಬಾ ಪಿ.ಎಂ.ʼ, ʼ3 ಬಾರ್ 78 ತಕ್ 378, 378+ʼ, ʼಮೇರಾ ಮೋದಿ ಬಾಬಾ ಸಬ್ಸೆ ಮಹಾನ್ ಎಂದು ಗೋಡೆ ಹಾಗೂ ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇದು ಮೊದಲ ಸಲವಲ್ಲ
ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ಅರುಣ್ ಕೆಲವು ದಿನಗಳ ಹಿಂದೆ ಊರಿಗೆ ಮರಳಿದ್ದರು. ವಿಶೇಷ ಎಂದರೆ ಅರುಣ್ ಅವರು ಮೋದಿಗಾಗಿ ಬೆರಳು ಅರ್ಪಿಸುತ್ತಿರುವುದು ಇದು ಮೊದಲ ಸಲವಲ್ಲ. 2019ರ ಚುನಾವಣೆಯಲ್ಲಿಯೂ ಸಹ ಅವರು ಮೋದಿ ಗೆಲುವಿಗಾಗಿ ಬಲಗೈ ಬೆರಳು ಕತ್ತರಿಸಿ ಕಾಳಿಮಾತೆಗೆ ಅರ್ಪಿಸಿದ್ದರು. ಈ ಬಾರಿ ಎಡಗೈ ಬೆರಳನ್ನು ಕಾಳಿ ಮಾತೆಗೆ ನೀಡಿದ್ದಾರೆ.
ಅರುಣ್ ಹೇಳೋದೇನು?
ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ, ನೆರೆಯ ರಾಷ್ಟ್ರಗಳೊಂದಿಗಿನ ಪ್ರಕ್ಷುಬ್ಧತೆ ಕಡಿಮೆಯಾಗಿದೆ ಎಂದು ಅರುಣ್ ವರ್ಣೇಕರ್ ಒತ್ತಿ ಹೇಳುತ್ತಾರೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಕ್ಕಾಗಿ ಅವರು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ರಾಷ್ಟ್ರದ ಪ್ರಗತಿಯು ಮೋದಿ ಅವರ ನಾಯಕತ್ವದ ಮೇಲೆ ಅವಲಂಬಿತವಾಗಿದೆ ಎಂದು ಅವರು ನಂಬಿದ್ದಾರೆ. “ಭಯೋತ್ಪಾದಕ ಚಟುವಟಿಕೆಗಳು ಮತ್ತು ಸೈನಿಕರ ಸಾವಿನ ಸುದ್ದಿ ಈ ಹಿಂದೆ ಕಾಶ್ಮೀರದಿಂದ ಹೊರಬರುತ್ತಿತ್ತು. ಆದರೆ ಈಗ ಈ ಪ್ರದೇಶವು ಶಾಂತಿಯುತವಾಗಿದೆ. ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ತನ್ನ ಎದೆಯ ಮೇಲೆ ‘ಮೋದಿ ಬಾಬಾ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ: Narendra Modi: ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಚಿಂತನೆಯ ಪ್ರತಿಬಿಂಬ; ಮೋದಿ ವಾಗ್ದಾಳಿ
ಪ್ರಧಾನಿ ಮೋದಿ ನನಗೆ ದೇವರಿಗಿಂತ ಮೇಲು ಎನ್ನುತ್ತಾರೆ ಅರುಣ್. ಸದ್ಯ ಅವರು ತಂದೆ-ತಾಯಿಯ ಆರೈಕೆಗಾಗಿ ಮುಂಬೈಯಲ್ಲಿನ ಕೆಲಸ ಬಿಟ್ಟು ಕಾರವಾರದಲ್ಲೇ ನೆಲೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ