Site icon Vistara News

Narendra Modi: ರಷ್ಯಾ ಬಳಿಕ ಮುಂದಿನ ತಿಂಗಳು ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ

Narendra Modi

ನವದೆಹಲಿ: ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ (Russia-Ukraine War) ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್‌ನಲ್ಲಿ ಉಕ್ರೇನ್ ರಾಜಧಾನಿ ಕೀವ್​ಗೆ ಪ್ರಯಾಣಿಸಲಿದ್ದಾರೆ. ಇಟಲಿಯಲ್ಲಿ ಜೂನ್‌ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ (Volodymyr Zelensky) ಭೇಟಿಯಾಗಿದ್ದರು. ಇದೀಗ ಎರಡು ತಿಂಗಳ ಅಂತರದಲ್ಲಿ ಈ ನಾಯಕರು ಮತ್ತೊಮ್ಮೆ ಭೇಟಿಯಾಗಲಿದ್ದಾರೆ.

ಮೋದಿ ಅವರು ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ಅವರು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತಿಕತೆ ನಡೆಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಉಕ್ರೇನ್‌ ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.

ಲೋಕಸಭಾ ಚುನಾವಣೆಯ ನಂತರ ಮೋದಿ ಮೂರನೇ ಅವಧಿಗೆ ಪ್ರದಾನಿಯಾಗಿ ಆಯ್ಕೆಯಾದ ದಿನದಂದು ಝೆಲೆನ್ಸ್ಕಿ ಕರೆ ಮಾಡಿ ಅಭಿನಂದಿಸಿದ್ದರು ಮತ್ತು ಯುದ್ಧ ಪೀಡಿತ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅದಕ್ಕೂ ಮೊದಲು ಮಾರ್ಚ್‌ನಲ್ಲಿ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗಿನ ದೂರವಾಣಿ ಮೂಲಕ ಮಾತನಾಡಿದ್ದ ಮೋದಿ ಅವರು ಭಾರತ-ಉಕ್ರೇನ್ ಸಂಬಂಧಬನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದ್ದರು. ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಹಾರಕ್ಕಾಗಿ ಮಾತುಕತೆ ನಡೆಸುವಂತೆ ಕರೆ ನೀಡಿದ್ದರು.

ಎರಡು ಯುದ್ಧ ನಿಲ್ಲಿಸಲು ಭಾರತವು ತನ್ನ ಶಕ್ತಿಮೀರಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಅದಕ್ಕೆ ಪೂರಕವಾಗಿ ಯುದ್ಧ ಪ್ರಾರಂಭವಾದಾಗಿನಿಂದ ಭಾರತವು ಇದನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ತಿಳಿಸಿದೆ.

ರಷ್ಯಾ ಭೇಟಿ

ಈ ತಿಂಗಳ ಆರಂಭದಲ್ಲಿ ರಷ್ಯಾಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಮೋದಿ ಪರಮಾಣು ಶಕ್ತಿ ಮತ್ತು ಹಡಗು ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ರಷ್ಯಾ ಮತ್ತು ಭಾರತದ ನಡುವಿನ ಸಹಕಾರಕ್ಕಾಗಿ ಸ್ಪಷ್ಟ ಚೌಕಟ್ಟನ್ನು ನಿರ್ಮಿಸುವಲ್ಲಿ ಮೋದಿಯವರ ಕೊಡುಗೆಯನ್ನು ರಷ್ಯಾ ಅಧ್ಯಕ್ಷ ಪುಟಿನ್ ಶ್ಲಾಘಿಸಿದ್ದರು.

ಇದೇ ವೇಳೆ ಮೋದಿ ಅವರಿಗೆ 2019ರಲ್ಲಿ ಘೋಷಿಸಲಾಗಿದ್ದ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರಶಸ್ತಿಯನ್ನು ಮಾಸ್ಕೋ ಕ್ರೆಮ್ಲಿನ್‌ನ ಸೇಂಟ್ ಕ್ಯಾಥರೀನ್ ಹಾಲ್ ನಲ್ಲಿ ಸಾಂಪ್ರದಾಯಿಕವಾಗಿ ಪ್ರದಾನ ಮಾಡಲಾಗಿತ್ತು. ವಿಶೇಷ ಕಾರ್ಯಕ್ರಮದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಅತಿದೊಡ್ಡ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಉಭಯ ದೇಶಗಳ ನಡುವಿನ ಸ್ನೇಹಪರ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ಭಾರತದ ಪ್ರಧಾನಿಗೆ ನೀಡಲಾಯಿತು ಎಂದು ರಷ್ಯಾ ಹೇಳಿತ್ತು.

ಇದನ್ನೂ ಓದಿ: PM Modi Russia Visit : ಭಾರತ-ರಷ್ಯಾ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Exit mobile version