Site icon Vistara News

Nawab Malik:‌ ದಾವೂದ್‌ ಇಬ್ರಾಹಿಂ ಜೊತೆ ನಂಟು ಆರೋಪ ಹೊಂದಿರುವ NCP ನಾಯಕ ನವಾಬ್‌ ಮಲಿಕ್‌ಗೆ ಜಾಮೀನು

Nawab Malik

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್(Nawab Malik) ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್(Supreme Court) ಮಂಗಳವಾರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಇದ್ದ ನ್ಯಾಯಪೀಠ ಮಲಿಕ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ.

ನವಾಬ್‌ ಮಲಿಕ್‌ ಅವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಜಾಮೀನು ಸಿಕ್ಕರೆ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಮಲಿಕ್ ಪರ ವಕೀಲರು ವಾದ ಮಂಡಿಸಿದರು. ಬಾಂಬೆ ಹೈಕೋರ್ಟ್‌ನಲ್ಲಿ ಸಾಮಾನ್ಯ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವವರೆಗೆ ಮಲ್ಲಿಕ್‌ಗೆ ವೈದ್ಯಕೀಯ ಜಾಮೀನು ಮಾನ್ಯವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಜಾಮೀನು ಮಂಜೂರಾತಿಗೆ ವಿರೋಧ ವ್ಯಕ್ತಪಡಿಸಿಲ್ಲ ಮತ್ತು ಮಧ್ಯಂತರ ವೈದ್ಯಕೀಯ ಜಾಮೀನನ್ನು ಕಾಯಂಗೊಳಿಸಬಹುದು ಎಂದರು.

ದಾವೂದ್‌ ಇಬ್ರಾಹಿಂ ಜೊತೆ ಲಿಂಕ್

ಪರಾರಿಯಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಫೆಬ್ರವರಿ 2022 ರಲ್ಲಿ ಇಡಿ ಮಲಿಕ್ ಅವರನ್ನು ಬಂಧಿಸಿತ್ತು.‌ ಮಲಿಕ್ ಅವರು ವಿವಿಧ ಕಾಯಿಲೆಗಳಲ್ಲದೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಪರಿಹಾರ ಕೋರಿದ್ದರು. ಅರ್ಹತೆಯ ಮೇರೆಗೆ ಜಾಮೀನು ಸಹ ಕೋರಿದ್ದರು.

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮತ್ತು ಭೂಗತ ದೊರೆ ಭಯೋತ್ಪಾದಕ ಇಬ್ರಾಹಿಂ ಮತ್ತು ಅವನ ಸಹಚರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿದ ಎಫ್‌ಐಆರ್ ಆಧರಿಸಿ ಮಲಿಕ್ ವಿರುದ್ಧ ಇಡಿ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: Actor Darshan: 80 ವರ್ಷಗಳ ಹಿಂದೆ ನಡೆದಿತ್ತು ದರ್ಶನ್‌ ಮಾದರಿ ಕ್ರೈಂ! ಜೈಲು ಪಾಲಾಗಿದ್ದರು ತಮಿಳು ಸೂಪರ್ ಸ್ಟಾರ್!

Exit mobile version