ಬೆಂಗಳೂರು: ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಅಧಿಕೃತವಾಗಿ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಬಾವುಟವನ್ನು ಖರ್ಗೆ ಅವರಿಗೆ ಹಸ್ತಾಂತರ ಮಾಡುವ ಮೂಲಕ ಜವಾಬ್ದಾರಿ ವರ್ಗಾವಣೆ ಮಾಡಲಿದ್ದಾರೆ. ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರು ಈಗಾಗಲೇ ದೆಹಲಿ ತಲುಪಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಬೈರತಿ ಸುರೇಶ್, ಹಿಟ್ನಾಳ್ ನಿನ್ನೆಯೇ ದೆಹಲಿ ತಲುಪಿದ್ದು ಇಂದು ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿ ಪಯಣ ಬೆಳಸಲಿದ್ದಾರೆ. ಜವಾಬ್ದಾರಿ ಪಡೆದ ಬಳಿಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ರಾಜ್ಯದ ನಾಯಕರ ಜತೆ ಪ್ರತ್ಯೇಕ ಸಭೆ ಮಾಡುವ ಸಾಧ್ಯತೆ ಇದೆ.
ಖರ್ಗೆ ಪದಗ್ರಹಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರ್ಜೇವಾಲಾ, ವೇಣುಗೋಪಾಲ್, ದಿಗ್ವಿಜಯ ಸಿಂಗ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ.