ನವದೆಹಲಿ: ಭಾರತದಲ್ಲಿ ಮತ್ತೆ ಕೋವಿಡ್(Covid-19) ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹಾಗಿದ್ದೂ, ತೀರಾ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಎಕ್ಸ್‌ಬಿಬಿ.1.16(XBB.1.16) ಕೊರೊನಾ ವೈರಸ್‌ನ ಪ್ರಧಾನ ರೂಪಾಂತರವಾಗಿದೆ. ಭಾರತೀಯ ತಜ್ಞರು ಬಿಡುಗಡೆ ಮಾಡಿದ ಜೀನೋಮ್ ಅನುಕ್ರಮ ವಿಶ್ಲೇಷಣೆಯ ಪ್ರಕಾರ, ಸೋಂಕು ಹೆಚ್ಚಳ ಸ್ವಲ್ಪಮಟ್ಟಿಗೆ ಕಂಡುಬಂದರೂ, ತೀವ್ರತೆಯ ಯಾವುದೇ ಆತಂಕಕಾರಿ ಚಿಹ್ನೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ.
ಭಾರತದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವಾರಕ್ಕೆ ಹೋಲಿಸಿದರೆ, ಬುಧವಾರ ಸರಾರಿ 966 ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಇದೇ ದಿನ 520 ಕೇಸ್ ದಾಖಲಾಗಿದ್ದವು. ವೈರಸ್ ಹರಡುವಿಕೆಯ ಸ್ವರೂಪ ಮತ್ತು ಜನರ ನಡವಳಿಕೆಯ ಮಾದರಿಗಳ ಬಗ್ಗೆ ಸಾಕಷ್ಟು ನಿಗಾ ಇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳು ಮತ್ತು ಇತರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ (4.49%), ಗುಜರಾತ್ (2%), ಕೇರಳ (4.17%), ಕರ್ನಾಟಕ (3.08%), ತಮಿಳುನಾಡು (2.26%), ದೆಹಲಿ (3.76%), ಹಿಮಾಚಲ ಪ್ರದೇಶ (7.1% ) ಮತ್ತು ರಾಜಸ್ಥಾನ (1.43%) ಅನುಪಾತದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿವೆ. ಜ್ವರ ಬಾಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಪರೀಕ್ಷೆಗೊಳಪಡುತ್ತಿದ್ದಾರೆ. ಹೀಗೆ ಪರೀಕ್ಷೆಗೊಳಗಾಗುತ್ತಿರುವ ಪೈಕಿ ಹೆಚ್ಚಿನವರಿಗೆ ಕೋವಿಡ್ ಇರುವುದು ಪತ್ತೆಯಾಗಿದೆ. ಹಾಗಾಗಿ, ಪ್ರಕರಣಗಳ ಸಂಖ್ಯೆಯೂ ಹೆಚ್ಚಳವಾಗುತ್ತಿವೆ.
ಪ್ರಾಣಿಗಳಿಂದಲೇ ಮನುಷ್ಯರಿಗೆ ತಗುಲಿದ ಕೋವಿಡ್
ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 ಮೂಲ ಯಾವುದು ಎಂಬ ಚರ್ಚೆ ಇನ್ನೂ ನಿಂತಿಲ್ಲ. ಕೆಲವರು ಇದು ಮಾನವ ನಿರ್ಮಿತ ಎಂದು ವಾದಿಸುತ್ತಾರೆ, ಮತ್ತೆ ಕೆಲವರು ಚೀನಾದಿಂದಲೇ ಈ ವೈರಸ್ ಇಡೀ ಜಗತ್ತಿಗೆ ಅಂಟಿದೆ ಎಂದು ಹೇಳುತ್ತಾರೆ. ಈಗ ಹೊಸ ಅಧ್ಯಯನ ವರದಿಯೊಂದರಲ್ಲಿ ಕೋವಿಡ್-19 ಮೂಲ (Covid Origin) ಯಾವುದು ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ. ಚೀನಾ ವುಹಾನ್ ಮಾರುಕಟ್ಟೆಯಿಂದ ಪಡೆದ ಕೆಲವು ಸ್ಯಾಂಪಲ್‌ಗಳನ್ನು ಅಧ್ಯಯನ ಮಾಡಿರುವ ಸಂಶೋಧಕರು, ಕೋವಿಡ್-19 ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ತಗಲಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ರೋಗಕ್ಕೆ ತುತ್ತಾಗುವ ರಕೂನ್ ನಾಯಿಗಳು ಸೇರಿದಂತೆ ಅನೇಕ ಪ್ರಾಣಿಗಳ ಆನುವಂಶಿಕ ವಸ್ತುಗಳ ಜೊತೆಗೆ ನಾವೆಲ್ ಕೊರೊನಾ ವೈರಸ್ ಇರುವ ಪುರಾವೆಗಳನ್ನು ಮಾದರಿಗಳು ಕಂಡುಕೊಂಡಿವೆ. ಈ ಬಗ್ಗೆ ಓಪನ್ ಸೈನ್ಸ್ ಜಾಲತಾಣವಾಗಿರುವ Zenodo.orgನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ, ಹುವಾನಾನ್ ಸಗಟು ಸಮುದ್ರಾಹಾರ ಮಾರುಕಟ್ಟೆಯು ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು
ಕೆಲವು ಸ್ಯಾಂಪಲ್‌ಗಳಲ್ಲಿ ಪ್ರಾಣಿಗಳಲ್ಲಿ ಸಂಭವನೀಯ SARS-CoV-2 ಸೋಂಕನ್ನು ಸೂಚಿಸುವ ಮಾನವ ಆನುವಂಶಿಕ ವಸ್ತುಗಳಿಗಿಂತ ಹೆಚ್ಚು ಪ್ರಾಣಿಗಳ ಆನುವಂಶಿಕ ವಸ್ತುಗಳು ಕಂಡುಬಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವರದಿಗೆ ಇನ್ನೂ ಯಾವುದೇ ವೈಜ್ಞಾನಿಕ ಸಮುದಾಯವು ತನ್ನ ಒಪ್ಪಿಗೆ ನೀಡಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಅನೇಕ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ವೈಜ್ಞಾನಿಕ ಸಮುದಾಯವು ಈ ಎಲ್ಲ ವರದಿಗಳನ್ನು ಪರಿಶೀಲಿಸಲು ಹೋಗಿಲ್ಲ.