Site icon Vistara News

Snapping footwear: ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್‌ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!

ಬೆಂಗಳೂರು: ಮಧುಮೇಹ ಸಮಸ್ಯೆ ತೀವ್ರವಾಗಿರುವವರಿಗೆ ಪಾದರಕ್ಷೆ ಧರಿಸುವುದು ಕೂಡಾ ದೊಡ್ಡ ಸಮಸ್ಯೆಯೇ. ಕಾಲು ಸ್ಪರ್ಶ ಜ್ಞಾನವನ್ನು ಕಳೆದುಕೊಳ್ಳುವುದರಿಂದ ಕೆಲವೊಂದು ಭಾಗದಲ್ಲಿ ಗಾಯವಾಗಿ ಕೀವಾದರೂ ಗೊತ್ತಾಗುವುದಿಲ್ಲ. ಇದೀಗ ಕಾಲುಗಳಿಗೆ ಯಾವುದೇ ಗಾಯವಾಗದಂತೆ, ಯಾವುದೇ ನೋವಾಗದಂಥ ಹೊಸ ಮಾದರಿಯ ಪಾದರಕ್ಷೆಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿದೆ. ಇದಕ್ಕೆ ಸ್ನಾಪಿಂಗ್‌ ಫುಟ್‌ವೇರ್‌ ಎಂದು ಹೆಸರಿಡಲಾಗಿದೆ.

ಡಯಾಬಿಟೀಸ್ ರೋಗ ಹೆಚ್ಚಾದಂತೆ ಕ್ರಮೇಣವಾಗಿ ಪಾದಗಳಲ್ಲಿನ ಸ್ಪರ್ಶ ಜ್ಞಾನ ಕಡಿಮೆಯಾಗುತ್ತದೆ. ಆಗ ಅವರ ನಡೆಯುವ ರೀತಿ ಬದಲಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಮೊದಲು ಹಿಮ್ಮಡಿ, ನಂತರ ಪಾದ ಕೊನೆಯಲ್ಲಿ ಬೆರಳುಗಳನ್ನಿಟ್ಟು ನಡೆಯುತ್ತೇವೆ. ಆದರೆ, ಮಧುಮೇಹ ಸಮಸ್ಯೆ ಹೆಚ್ಚಾದಂತೆ ಕಾಲಿನ ಯಾವ ಭಾಗ ಸ್ಪರ್ಶವಾಗುತ್ತಿದೆ ಎಂದು ಅವರಿಗೆ ಗೊತ್ತಾಗುವುದಿಲ್ಲ. ಇದರಿಂದಾಗಿ ಕಾಲುಗಳಲ್ಲಿ ಅಲ್ಸರ್, ಕಾರ್ನ್‌ ರೀತಿಯ ಗಂಟುಗಳಾಗುವುದು ಸೇರಿದಂತೆ ಇತರೆ ಸಮಸ್ಯೆಗಳು ಹೆಚ್ಚಾಗುತ್ತದೆ.

ಮಧುಮೇಹಿ ರೋಗಿಗಳಿಗೆ ಯಾವುದೇ ರೀತಿಯ ಗಾಯವಾದರೆ ಅದು ಗುಣವಾಗುವುದು ತಡ. ಇದರಿಂದಾಗಿ ಅವರಿಗೆ ಸೋಂಕು, ಕೀವು ಆಗುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಕೆಲವೊಮ್ಮೆ ಸೋಂಕು ತಗುಲಿದ ಭಾಗವನ್ನು ಸಂಪೂರ್ಣ ಕತ್ತರಿಸಿ ತೆಗೆಯಬೇಕಾಗುತ್ತದೆ. ಉದಾಹರಣಗೆ ಕಾಲಿನ ಹೆಬ್ಬೆರಳಿಗೆ ಗಾಯವಾದರೆ, ಅದು ಗುಣವಾಗದಿದ್ದಾಗ ಆ ಬೆರಳನ್ನು ತೆಗೆಯಬೇಕಾಗುತ್ತದೆ.

snapping footware

ಈ ಎಲ್ಲ ಸಮಸ್ಯೆಗಳನ್ನು ಸರಿದೂಗಿಸಲು ಹೊಸ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಹಾಗೂ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಎಂಡೋಕ್ರೈನಾಲಜಿ ಹಾಗೂ ರಿಸರ್ಚ್ ಸಹಭಾಗಿತ್ವದಲ್ಲಿ ಸಂಶೋಧನೆ. ನಡೆಸಲಾಗಿದೆ. ಮಧುಮೇಹ ರೋಗಿಗಳ ಹಿತದೃಷ್ಟಿಯಿಂದ ʼಸ್ನಾಪಿಂಗ್ ಫುಟ್‌ವೇರ್ʼ ಪರಿಚಯಿಸಲಾಗಿದೆ. ಸ್ನಾಪಿಂಗ್ ಫುಟ್‌ವೇರ್ ಎಂದರೆ ಸ್ವಯಂ ನಿಯಂತ್ರಣ ಪಾದರಕ್ಷೆ. ಮಧುಮೇಹಿಯ ಕಾಲಳತೆ ಹಾಗು ನಡೆಯುವ ಮಾದರಿ ಗಮನಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ 3ಡಿ ಪ್ರಿಂಟಿಂಗ್ ಟೆಕ್ನಾಲಜಿ ಮುಖೇನ ಪಾದರಕ್ಷೆ ಸಿದ್ದಪಡಿಸಲಾಗುತ್ತದೆ. ಡಯಾಬಿಟಿಕ್ ಪೆರಿಫರೆಲ್ ನ್ಯೂರೋಪಥಿಯಿಂದ ಬಳಲುತ್ತಿರೋರಿಗೆ ಇದು ತುಂಬಾ ಸಹಕಾರಿ ಎಂದು ಹೇಳಲಾಗಿದೆ.

ಇದನ್ನೂ ಓದಿ: IISC ಅಗ್ರಗಣ್ಯ ಭಾರತೀಯ ಶಿಕ್ಷಣ ಸಂಸ್ಥೆ, ಜಾಗತಿಕ ಟಾಪ್‌ 500ನಲ್ಲಿ ಭಾರತದ 8 IIT

Exit mobile version