Site icon Vistara News

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

Medical Negligence

Medical Negligence

ಲಕ್ನೋ: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ (Medical Negligence). ಇದಕ್ಕೆ ತಾಜಾ ಉದಾಹರಣೆ ಇದು. 5 ದಿನಗಳ ಹೆಣ್ಣು ಮಗುವೊಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೈನ್‌ಪುರಿಯ ಆಸ್ಪತ್ರೆಯೊಂದರ ವೈದ್ಯರ ಸಲಹೆಯಂತೆ ನವಜಾತ ಶಿಶುವನ್ನು ತುಂಬಾ ಹೊತ್ತು ಸೂರ್ಯನ ಬಿಸಿಲು ತಾಕುವಂತೆ ತೆರೆದ ಸ್ಥಳದಲ್ಲಿ ಇರಿಸಲಾಗಿತ್ತು. ಇದರಿಂದ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ (Viral News).

ಈ ಹೃದಯ ವಿದ್ರಾವಕ ಘಟನೆ ಮೈನ್‌ಪುರಿಯ ಘಿರೊರ್‌ ಥಾನಾ ಪ್ರದೇಶದಲ್ಲಿ ನಡೆದಿದೆ. ಭುಗೈ ಎಂಬ ಹಳ್ಳಿಯ ರಿತಾ ಎನ್ನುವ ಮಹಿಳೆ ಇತ್ತೀಚೆಗೆ ಮೈನ್‌ಪುರಿಯ ರಾಧಾರಮಣ್‌ ರಸ್ತೆಯಲ್ಲಿರುವ ಸಾಯಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಿಸೇರಿಯನ್‌ ಮೂಲಕ ಈ ಮಗು ಜನಿಸಿತ್ತು. ಜನಿಸುವಾಗಲೇ ಮಗುವಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು. ಇದಕ್ಕೆ ವೈದ್ಯರು ಪ್ರತಿ ದಿನ ಅರ್ಧ ಗಂಟೆ ಮಗುವನ್ನು ಬಿಸಿಲಿನಲ್ಲಿ ಇರಿಸುವಂತೆ ಮನೆಯವರಿಗೆ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಬಿಸಿಲಿನ ತಾಪಕ್ಕೆ ಅಸುನೀಗಿದ ಹಸುಳೆ

ವೈದ್ಯರ ಸಲಹೆಯಂತೆ ಮಗುವಿನ ಮನೆಯವರು 5 ದಿನಗಳ ಹಸುಳೆಯನ್ನು ಆಸ್ಪತ್ರೆಯ ಟೆರೇಸ್‌ಗೆ ಒಯ್ದು ಬಿಸಿಲಿನಲ್ಲಿ ಮಲಗಿಸಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಟೆರೇಸ್‌ನಲ್ಲಿ ಇರಿಸಿ ಅರ್ಧ ಗಂಟೆ ಆದ ಮೇಲೆ ಮಗುವನ್ನು ವಾರ್ಡ್‌ಗೆ ಕರೆದೊಯ್ದಿದ್ದರು. ಇದಾಗಿ ಕೆಲ ಹೊತ್ತಿನಲ್ಲೇ ಮಗು ಮೃತಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಹೇಳಿ ಕೇಳಿ ಇದು ಬಿರು ಬೇಸಗೆ ಕಾಲ. ಇತ್ತೀಚೆಗಂತೂ ಉಷ್ಣಾಂಶ ವಿಪರೀತ ಎನ್ನುವಷ್ಟು ಏರಿಕೆಯಾಗಿದೆ. ಹೀಗಾಗಿ ಅತಿಯಾದ ತಾಪಮಾನ ತಾಳಲಾರದೆ ಮಗು ಅಸುನೀಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. ವಯಸ್ಕರಿಗೇ ಈ ಬಿಸಿಲಿನ ಝಳವನ್ನು ತಾಳಲು ಸಾಧ್ಯವಾಗುತ್ತಿಲ್ಲ. ಇನ್ನು 5 ದಿನಗಳ ಹಸುಳೆ ಹೇಗೆ ತಡೆದುಕೊಳ್ಳುತ್ತದೆ ಎಂದು ಮನೆಯವರು ಪ್ರಶ್ನಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ತಮ್ಮ ಮಗುವಿನ ಸಾವಿಗೆ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ

ಪ್ರತಿದಿನ ಅರ್ಧ ಗಂಟೆ ಬಿಸಿಲಿನಲ್ಲಿ ಇರುವಂತೆ ವೈದ್ಯರು ಸಲಹೆ ನೀಡಿದ್ದರಿಂದಲೇ ಮಗು ಅಸುನೀಗಿದೆ ಎಂದಿರುವ ಕುಟುಂಬಸ್ಥರು ಆಸ್ಪತ್ರೆಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಆಸ್ಪತ್ರೆಯ ಆಡಳಿತದ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಮಗು ಮೃತಪಡುತ್ತಿದ್ದಂತೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ. ಸಿಎಂಒ ಆದೇಶದ ಮೇರೆಗೆ ಸದ್ಯ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಮತ್ತು ವೈದ್ಯರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: Medical Negligence : ವೈದ್ಯರ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಬಲಿ? ಆಕ್ಸಿಜನ್‌ ಹಾಕಿದ 10 ನಿಮಿಷಕ್ಕೆ ಮೃತ್ಯು!

ಕೇರಳದಲ್ಲಿ ಮತ್ತೊಂದು ಪ್ರಕರಣ

ಇತ್ತ ಕೇರಳದಲ್ಲಿಯೂ ವೈದ್ಯರು ಎಡವಟ್ಟು ಮಾಡಿಕೊಂಡಿದ್ದಾರೆ. ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಡಾಕ್ಟರ್‌ ಮಗುವಿನ ಕೈ ಬೆರಳಿನ ಬದಲು ನಾಲಿಗೆಯ ಶಸ್ತ್ರಚಿಕಿತ್ಸೆಯ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಅಸಮಾಧಾನ ಹೊರ ಹಾಕುತ್ತಿದ್ದಂತೆ ವೈದ್ಯರು ಬಂದು ತಪ್ಪಿಗೆ ಕ್ಷಮೆ ಯಾಚಿಸಿದ್ದು, ಮತ್ತೆ ಮಗುವನ್ನು ಕರೆದುಕೊಂಡು ಹೋಗಿ ಬೆರಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಗುವಿನ ಕೈಯಲ್ಲಿರುವ ಆರನೇ ಬೆರಳನ್ನು ತೆಗೆಯಲು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Exit mobile version