Site icon Vistara News

ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್‌?: ಬಿಹಾರದಲ್ಲಿ ಇಫ್ತಾರ್‌ʼ ರಾಜಕೀಯ

ಪಟನಾ: ದೇಶದ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಬಿಹಾರ ರಾಜಕಾರಣ (Bihar Politics) ಇದೀಗ ಮತ್ತೊಮ್ಮೆ ರಂಗೇರಿದ್ದು, ಸಿಎಂ ನಿತೀಶ್‌ಕುಮಾರ್‌ ಅವರು ಲಾಲು ಪ್ರಸಾದ್‌ ಯಾದವ್‌ ಮನೆಯ ಇಫ್ತಾರ್‌ ಕೂಟದಲ್ಲಿ (Nitish Kumar iftar party) ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ. ಗುಜರಾತ್‌ನಲ್ಲಿ ಯುವ ನಾಯಕ ಹಾರ್ದಿಕ್‌ ಪಟೇಲ್‌ ಬಿಜೆಪಿಗೆ ಆಗಮಿಸುತ್ತಾರೆ ಎನ್ನುವ ಚರ್ಚೆಯ ನಡುವೆಯೇ ಬಿಹಾರದಲ್ಲಿ ತದ್ವಿರುದ್ಧ ಬೆಳವಣಿಗೆ ಎಲ್ಲರ ಗಮನ ಸೆಳೆಯುತ್ತಿದೆ.

ರಂಜಾನ್‌ ಮಾಸದಲ್ಲಿ ಮುಸ್ಲಿಂ ಸಮುದಾಯದವರಷ್ಟೆ ಅಲ್ಲದೆ ಅನೇಕ ರಾಜಕಾರಣಿಗಳೂ ಇಫ್ತಾರ್‌ ಕೂಟ ಆಯೋಜನೆ ಮಾಡುತ್ತಾರೆ. ಬಿಜೆರದ ಮಾಜಿ ಸಿಎಂ ಹಾಗೂ ಮೇವು ಹಗರಣದ ಅಪರಾಧಿ ಲಾಲೂಪ್ರಸಾದ್‌ ಯಾದವ್‌ ಮನೆಯಲ್ಲಿ ಶುಕ್ರವಾರ ಆಯೋಜನೆ ಮಾಡಿದ್ದ ಇಫ್ತಾರ್‌ ಕೂಟದಲ್ಲಿ ಭಾಗಿಯಾಗಿದ್ದಾರೆ.

ಭ್ರಷ್ಟಾಚಾರ ಕುರಿತ ಒಂದು ಪ್ರಕರಣದಲ್ಲಿ ಜಾರ್ಖಂಡ್‌ ನ್ಯಾಯಾಲಯದಿಂದ ಲಾಲು ಪ್ರಸಾದ್‌ ಯಾದವ್‌ಗೆ ಜಾಮೀನು ನೀಡಿದ ಕೆಲವೇ ಗಂಟೆಗಳಲ್ಲಿ ಈ ಸಭೆಯಲ್ಲಿ ನಿತೀಶ್‌ ಭಾಗಿಯಾಗಿದ್ದಾರೆ. ರಾಷ್ಟ್ರೀಯ ಜನತಾ ದಳದ (RJD) ಮುಖಂಡನ ಪತ್ನಿ ಹಾಗೂ ಮಾಜಿ ಸಿಎಂ ರಾಬ್ಡಿ ದೇವಿ ನೇತೃತ್ವದಲ್ಲಿ ಈ ಕೂಟ ಆಯೋಜನೆಯಾಗಿತ್ತು.

ಇದನ್ನೂ ಓದಿ: ಪಾಟಿದಾರ್‌ ನಾಯಕನ ʼಹಾರ್ದಿಕʼ ಸ್ವಾಗತಕ್ಕೆ ಸಜ್ಜಾದ BJP? : ಮೋದಿ ನಾಡಿನಲ್ಲಿ ಚುನಾವಣಾ ವರ್ಷದ ಅಚ್ಚರಿ

2019ರ ಲೋಕಸಭೆಗೂ ಮುನ್ನ ದೇಶಾದ್ಯಂತ ತೃತೀಯ ರಂಗದ ಮಾತುಗಳು ಕೇಳಿಬರುತ್ತಿದ್ದಾಗ ಅದಕ್ಕೆ ನೇತೃತ್ವ ವಹಿಸಲು ನಿತೀಶ್‌ ಕುಮಾರ್‌ ಸೂಕ್ತ ವ್ಯಕ್ತಿ ಎಂಬ ಲೆಕ್ಕಾಚಾರವಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ, 2015ರಲ್ಲಿ ಮಹಾಘಟಬಂಧನ ರಚಿಸಿಕೊಂಡಿದ್ದರು. ತಮ್ಮ ದಶಕಗಳ ಶತೃ ಆರ್‌ಜೆಡಿ ಹಾಗೂ ಕಾಂಗ್ರೆಸ್‌ನೊಂದಿಗೆ ತಮ್ಮ ಪಕ್ಷ ಜೆಡಿಯುವನ್ನು ಜೋಡಿಸಿ ಅದರ ನಾಯಕರಾದರು. ಮಹಾಘಟಬಂಧನ ಚುನಾವಣೆಯಲ್ಲಿ 178 ಸ್ಥಾನ ಗಳಿಸಿತು. ನಿತೀಶ್‌ ಅವರ ಜೆಡಿಯು 71 ಸ್ಥಾನ ಪಡೆದು ಎರಡನೇ ಸ್ಥಾನ, ಆರ್‌ಜೆಡಿ 80 ಸ್ಥಾನಗಳೊಂದಿಗೆ ಮೊದಲ ಸ್ಥಾನ ಪಡೆಯಿತು. ಆದರೂ ನಿತೀಶ್‌ ಕುಮಾರ್‌ ಮುಖ್ಯಮಂತ್ರಿ ಆದರು.

ಇನ್ನೇನು ನಿತೀಶ್‌ ನೇತೃತ್ವದಲ್ಲಿ ದೇಶದಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತದೆ ಎಂಬ ಚರ್ಚೆ ನಡೆದಿದ್ದವು. ಆದರೆ 2017ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೆಲವೇ ಗಂಟೆಗಳಲ್ಲಿ ಮುಖ್ಯ ಪ್ರತಿಪಕ್ಷ ಎನ್‌ಡಿಎ ಜತೆಗೆ ಸರ್ಕಾರ ರಚಿಸಿ ಬಿಹಾರದ ಮುಖ್ಯಮಂತ್ರಿ ಆದರು. 2020ರಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿ ಜತೆಗೇ ಇದ್ದು 125 ಸ್ಥಾನ ಗೆಲ್ಲುವುದರೊಂದಿಗೆ ಮತ್ತೊಮ್ಮೆ ಸಿಎಂ ಗದ್ದುಗೆ ಏರಿದರು.

ಇತ್ತೀಚಿನ ದಿನಳಲ್ಲಿ ಬಿಜೆಪಿ ವರಿಷ್ಠರೊಂದಿಗೆ ನಿತೀಸ್‌ ಸಂವಹನದಲ್ಲಿ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ. ಇದೇ ವೇಳೆ ಮತ್ತೊಮ್ಮೆ ದೇಶದಲ್ಲಿ ಬಿಜೆಪಿ ವಿರೋಧಿ ರಂಗವನ್ನು ರಚಿಸಬೇಕು ಎಂಬ ಬೇಡಿಕೆ, ಚರ್ಚೆ ನಡೆಯುತ್ತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಆರ್‌ಜೆಡಿ ಪಕ್ಷದ ಪ್ರಥಮ ಕುಟುಂಬದ ಮನೆಯ ಇಫ್ತಾರ್‌ ಕೂಟದಲ್ಲಿ ಅದರಲ್ಲೂ ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ನಿತೀಶ್‌ ಭಾಗಿಯಾಗಿರುವುದು ಸಹಜವಾಗಿಯೇ ಸುದ್ದಿಗೆ ರಂಗು ತಂದಿದೆ.

ಸೀಕ್ರೇಟ್‌ ಚರ್ಚೆ ನಡೆಸಿದ್ದೇವೆ ಎಂದ ತೇಜ್‌ ಪ್ರತಾಪ್‌

ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ ನಂತರ ಬಿಹಾರ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಉಂಟಾಗಿದೆ. ಬಿಜೆಪಿ ವರಿಷ್ಠರು ತಮ್ಮ ಮಾತನ್ನು ಕೇಳುತ್ತಿಲ್ಲ, ಹಾಗಾಗಿ ಅವರಿಗೆ ಪರೋಕ್ಷವಾಗಿ ಸಂದೇಶ ನೀಡಲು ಈ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ವರಿಷ್ಠರ ಜತೆಗೆ ಸಂಬಂಧ ಹಳಸಿದ್ದು, ಸದ್ಯದಲ್ಲೆ ಆರ್‌ಜೆಡಿ ಜತೆಗೆ ಸೇರಿ ಸರ್ಕಾರ ರಚಿಸುತ್ತಾರೆ ಎಂಬ ಮಾತುಗಳೂ ಇವೆ. ಇದೆಲ್ಲದರ ಕುರಿತು ಪ್ರತಿಕ್ರಿಯೆ ನೀಡಿರುವ ನಿತೀಶ್‌ ಕುಮಾರ್‌, “ಇಂತಹ ಇಫ್ತಾರ್‌ ಕೂಟಗಳಿಗೆ ಅನೇಕರನ್ನು ಆಹ್ವಾನಿಸಲಾಗುತ್ತದೆ. ಇದರಲ್ಲಿ ರಾಜಕೀಯ ಸಂಬಂಧ ಏನಿರುತ್ತದೆ? ನಾವೂ ಮುಂದೆ ಇಫ್ತಾರ್‌ ಕೂಟ ಆಯೋಜಿಸಿ ಎಲ್ಲರನ್ನೂ ಕರೆಯುತ್ತೇವೆ” ಎಂದಿದ್ದಾರೆ.

ಲಾಲು ಪ್ರಸಾದ್‌ ಯಾದವ್‌ ಕಿರಿಯ ಪುತ್ರ ತೇಜಸ್ವಿ ಯಾದವ್‌ ಸಹ ಇಂತಹ ಸುದ್ದಿಗಳನ್ನು ಅಲ್ಲಗಳೆದಿದ್ದಾರೆ. ಆದರೆ ಹಿರಿಯ ಪುತ್ರ ತೇಜ್‌ಪ್ರತಾಪ್‌ ಬೇರೆಯದೇ ರೀತಿ ಮಾತನಾಡಿದ್ದಾರೆ. “ರಾಜಕಾರಣದಲ್ಲಿ ಅದಲುಬದಲು ಆಗುತ್ತಲೇ ಇರುತ್ತದೆ. ಇಂದಿನ ಸ್ಥಿತಿ ನಾಳೆ ಬದಲಾಗಬಹುದು. ನಿನ್ನೆವರೆಗೆ ನಿತೀಶ್‌ ಕುಮಾರ್‌ ಅವರಿಗೆ ನೋ ಎಂಟ್ರಿ ಬೋರ್ಡ್‌ ಹಾಕಿದ್ದೆವು. ಈಗ ನಿತೀಶ್‌ ಚಾಚಾಗೆ ಸ್ವಾಗತ ಎಂದು ಬೋರ್ಡ್‌ ಹಾಕಿದ್ದೇವೆ. ಇಂದು ಇಲ್ಲಿರುವವರು ನಾಲೆ ಅಲ್ಲಿರಬಹುದು. ನಾವು ನಿತೀಶ್‌ ಕುಮಾರ್‌ ಅವರೊಂದಿಗೆ ಸೀಕ್ರೇಟ್‌ ಮಾತುಕತೆ ನಡೆಸಿದ್ದೇವೆ” ಎನ್ನುವ ಮೂಲಕ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿದ್ದಾರೆ.

ಇದನ್ನೂ ಓದಿ: 15 ದಿನ 9 ರಾಜ್ಯ 10 ಗಲಭೆಗಳು: ರಾಮನವಮಿ, ಹನುಮ ಜಯಂತಿ ವೇಳೆ ಕಲ್ಲು ತೂರಾಟ

Exit mobile version