ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದು ಹೋಗಿದೆ (Bihar politics). ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಈಗ ಮತ್ತೆ ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದ್ದಾರೆ. ಈ ಮಧ್ಯೆ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರಾಷ್ಟ್ರೀಯ ಜನತಾ ದಳ (RJD)ದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ (Rohini Acharya), “ತ್ಯಾಜ್ಯವು ಕಸದ ಬುಟ್ಟಿಗೆ ಹೋಗಿದೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ತಾವು ಹಿಂದೆ ಕೈ ಜೋಡಿಸಿದ್ದ ವಿಪಕ್ಷಗಳ ಒಕ್ಕೂಟ ಇಂಡಿಯಾ (I-N-D-I-A)ದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂಬ ಕಾರಣ ನೀಡಿ ನಿತೀಶ್ ಕುಮಾರ್ ಹೊರ ಬಂದಿದ್ದಾರೆ. “ರಾಜ್ಯದ ಜನರ ಹಿತದೃಷ್ಟಿಯಿಂದ ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡಿದ್ದೇನೆ. ಶಾಸಕರ ಅಭಿಪ್ರಾಯ ಪಡೆದ ಬಳಿಕವೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇಂಡಿಯಾ ಒಕ್ಕೂಟದಿಂದಲೂ ನಾನು ಹೊರಬಂದಿದ್ದೇನೆ. ಮೈತ್ರಿಯಲ್ಲಿ ಒಗ್ಗಟ್ಟು ಮೂಡದ ಕಾರಣ ಹೊರಬಂದಿದ್ದೇನೆ” ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರೋಹಿಣಿ ಆಚಾರ್ಯ ತ್ಯಾಜ್ಯದ ಪೋಸ್ಟ್ ಹಂಚಿಕೊಂಡಿದ್ದರು. ಇದು ವಿವಾದವಾಗುತ್ತಿದ್ದಂತೆ ಅವರು ಪೋಸ್ಟ್ ಡಿಲೀಟ್ ಮಾಡಿದ್ದಾರೆ.
कूड़ा गया फिर से कूड़ेदानी में
— Rohini Acharya (@RohiniAcharya2) January 28, 2024
कूड़ा – मंडली को बदबूदार कूड़ा मुबारक pic.twitter.com/gQvablD7fC
ಸ್ಪಷ್ಟನೆಯಲ್ಲೇನಿದೆ?
ಬಳಿಕ ಆರ್‌ಜೆಡಿ ಈ ಬಗ್ಗೆ ಸ್ಪಷ್ಟನೆ ನೀಡಿ, ರೋಹಿಣಿ ಅವರ ಈ ಪೋಸ್ಟ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದೇ ಹೊರತು ನಿತೀಶ್ ಕುಮಾರ್ ಅವರನ್ನು ಅಲ್ಲ ಎಂದು ಹೇಳಿದೆ. “ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಉದ್ದೇಶಗಳಿಗಾಗಿ ಪೋಸ್ಟ್ ಬಳಸಿದ ಕಾರಣಕ್ಕೆ ಡಿಲೀಟ್ ಮಾಡಲಾಗಿದೆʼʼ ಎಂದು ಆರ್‌ಜೆಡಿ ನಾಯಕರೊಬ್ಬರು ಪೋಸ್ಟ್ ಅಳಿಸಿದ್ದಕ್ಕೆ ಕಾರಣವನ್ನೂ ನೀಡಿದ್ದಾರೆ. ರೋಹಿಣಿ ಆಚಾರ್ಯ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ ಕ್ಷಣಾರ್ಧದಲ್ಲಿ ವೈರಲ್ ಆಗಿ ಟೀಕೆ ವ್ಯಕ್ತವಾಗಿದೆ.
ಸದ್ಯ ಡಿಲೀಟ್ ಮಾಡಲಾದ ಪೋಸ್ಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರೋಹಿಣಿ ಆಚಾರ್ಯ ಹಿಂದಿಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದರು. ಒಂದು ದಿನದ ಹಿಂದೆ ಆರ್‌ಜೆಡಿಯ ʼವಂಶಪಾರಂಪರ್ಯ ರಾಜಕೀಯʼ ವನ್ನು ಟೀಕಿಸಿದ್ದ ನಿತೀಶ್ ಕುಮಾರ್ ಅವರ ಮೇಲಿನ ಪರೋಕ್ಷ ದಾಳಿ ಎಂದು ಇದನ್ನು ವ್ಯಾಖ್ಯಾನಿಸಲಾಗಿದೆ.
ಇದನ್ನೂ ಓದಿ: Nitish Kumar: ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ
ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ
ಈ ಮಧ್ಯೆ ಬಿಜೆಪಿ ನೇತೃತ್ವದ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಭಾನುವಾರ ಸಾಯಂಕಾಲ ಪ್ರಮಾಣ ವಚನ ಸ್ವೀಕರಿಸಿದರು. ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕರು ಜೆಡಿಯು ಬೆಂಬಲದೊಂದಿಗೆ ಎನ್‌ಡಿಎ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ್ದರು. ಇದರೊಂದಿಗೆ ಬಿಹಾರದಲ್ಲಿ ಮಹಾಘಟಬಂಧನದಿಂದ ಹೊರಬಂದಿರುವ ನಿತೀಶ್ ಕುಮಾರ್ ಅವರು ತಮ್ಮ ದೀರ್ಘಕಾಲದ ಮೈತ್ರಿಯಾದ ಎನ್‌ಡಿಎ ಜತೆ ಮತ್ತೆ ಕೈಜೋಡಿಸಿದ್ದಾರೆ. ಆರ್‌ಜೆಡಿ ಜತೆಗಿನ ಮೈತ್ರಿ ಮಾತ್ರವಲ್ಲ, ಇಂಡಿಯಾ ಒಕ್ಕೂಟದಿಂದಲೂ ನಿತೀಶ್ ಕುಮಾರ್ ಅವರು ಹೊರಬಂದಿದ್ದಾರೆ. ಈಗಾಗಲೇ ಆರ್‌ಜೆಡಿ ಸಚಿವರನ್ನು ವಜಾಗೊಳಿಸಿರುವ ನಿತೀಶ್ ಕುಮಾರ್ ಅವರು ಬಿಜೆಪಿ ಶಾಸಕರಿಗೆ ಸಚಿವಸ್ಥಾನ ನೀಡಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ