ಪಾಕಿಸ್ತಾನ ಸರ್ಕಾರದ (Pakistan government) ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಭಾರತೀಯರು ಯಾರಾದರೂ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಗೆ (Pakistan government Twitter Account) ಹೋದರೆ ಅಲ್ಲಿ, Account Withheld (ಖಾತೆ ತಡೆಹಿಡಿಯಲಾಗಿದೆ) ಎಂಬ ಸಂದೇಶ ಕಾಣಿಸುತ್ತಿದೆ. ಕಾನೂನು ಕ್ರಮದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಟ್ವಿಟರ್ ಅಕೌಂಟ್ ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಅಂದಹಾಗೇ, ಹೀಗೆ ಪಾಕಿಸ್ತಾನದ ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯುತ್ತಿರುವುದು ಕಳೆದ 6ತಿಂಗಳಲ್ಲಿ ಇದು 2ನೇ ಬಾರಿ.
ಕಾನೂನು ವಿಷಯಕ್ಕೆ ಸಂಬಂಧಪಟ್ಟು ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಟ್ವಿಟರ್ ಅಕೌಂಟ್ನ್ನು ಭಾರತದಲ್ಲಿ ವೀಕ್ಷಿಸದಂತೆ ಮಾಡುವಂತೆ ಟ್ವಿಟರ್ಗೆ ಭಾರತದ ಸರ್ಕಾರ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಹಾಗಂತ, ನಿರ್ದಿಷ್ಟ ಯಾವ ವಿಷಯಕ್ಕಾಗಿ ಈ ಕ್ರಮ ಎಂದು ಸ್ಪಷ್ಟವಾಗಿಲ್ಲ. ಯಾರದ್ದೇ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲು ಕಾನೂನಾತ್ಮಕ ಕಾರಣಗಳನ್ನು ಕೊಟ್ಟಾಗ ಆ ಖಾತೆಯನ್ನು ತಡೆಹಿಡಿಯಬೇಕು ಎಂಬುದು ಟ್ವಿಟರ್ ಕಂಪನಿಯ ನಿಯಮವಾಗಿದ್ದು, ಅದರಂತೆ ಈ ವಿಷಯದಲ್ಲೂ ಟ್ವಿಟರ್ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: Amritpal Singh: ಅಮೃತ್ಪಾಲ್ ಸಿಂಗ್ನ ಆಪ್ತನಿಗೆ, ಪಾಕಿಸ್ತಾನ ಮಾಜಿ ಸೇನಾ ಮುಖ್ಯಸ್ಥನ ಪುತ್ರನ ಜತೆ ನಂಟು!
2022ರ ಅಕ್ಟೋಬರ್ನಲ್ಲಿ ಒಮ್ಮೆ ಇದೇ ಕಾನೂನು ವಿಷಯದ ಕಾರಣಕ್ಕಾಗಿಯೇ ಪಾಕಿಸ್ತಾನದ ಟ್ವಿಟರ್ ಅಕೌಂಟ್ನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು. ಅದಾದ ಮೇಲೆ ಆರು ತಿಂಗಳ ಬಳಿಕ ಈಗ ಮತ್ತೆ ನಿರ್ಬಂಧಿಸಲಾಗಿದೆ. ಅದಕ್ಕೂ ಪೂರ್ವ 2022ರ ಜುಲೈ ತಿಂಗಳಲ್ಲೂ ಒಮ್ಮೆ ಪಾಕ್ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಗೆ, ನಮ್ಮ ದೇಶದಲ್ಲಿ ಕತ್ತರಿಬಿದ್ದಿತ್ತು. ಈ ಹಿಂದೆ ಒಮ್ಮೆ ಯುಎಸ್, ಟರ್ಕಿ, ಇರಾನ್ ಮತ್ತು ಈಜಿಪ್ಟ್ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗಳ ಖಾತೆಯನ್ನು ಕೂಡ ಟ್ವಿಟರ್ ನಿರ್ಬಂಧ ವಿಧಿಸಿತ್ತು. ಅಷ್ಟೇ ಅಲ್ಲ, ಆಗಸ್ಟ್ನಲ್ಲಿ ಭಾರತದಲ್ಲಿ ಪಾಕಿಸ್ತಾನ ಮೂಲದ ಒಂದು ಯೂಟ್ಯೂಬ್ ಚಾನೆಲ್ ಸೇರಿ ಒಟ್ಟು 8 ಯೂಟ್ಯೂಬ್ ಚಾನೆಲ್ಗಳನ್ನು ಬ್ಲಾಕ್ ಮಾಡಲಾಗಿದೆ. ಅದರೊಂದಿಗೆ ಭಾರತ ವಿರೋಧಿ, ಭಾರತ ಬಗೆಗಿನ ನಕಲಿ ವಿಷಯಗಳನ್ನು ಪ್ರಸಾರ ಮಾಡುವ ಪಾಕ್ ಮೂಲದ ಫೇಸ್ಬುಕ್ ಖಾತೆಗಳನ್ನೂ ಈಗಾಗಲೇ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: Chicken Manchurian: ಚಿಕನ್ ಮಂಚೂರಿಯನ್ ಯಾರದ್ದು? ಟ್ವಿಟರ್‌ನಲ್ಲಿ ಭಾರತ-ಪಾಕ್ ನೆಟ್ಟಿಗರ ಜಟಾಪಟಿ