Site icon Vistara News

ಪಾಕ್‌ ಬೇಹುಗಾರಿಕೆ ಸಂಸ್ಥೆಯಿಂದ ಮತ್ತೊಮ್ಮೆ ʻಮಿಷನ್‌ ಕಾಶ್ಮೀರ್‌ʼ ಆರಂಭ!

terorist

ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳು ಹೊಸ ಬಗೆಯ ಕಳವಳವನ್ನು ಹುಟ್ಟು ಹಾಕಿದ್ದು, ಪಾಕ್‌ನ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಹೊಸದೊಂದು ʻಮಿಷನ್‌ ಕಾಶ್ಮೀರ್‌ʼ ಇಟ್ಟುಕೊಂಡು ಹೊರಟಿದೆ ಎಂಬ ಸಂಗತಿಯನ್ನು ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿಯೊಬ್ಬ ಹೊರಗೆಡಹಿದ್ದಾನೆ ಎಂದು ಖಾಸಗಿ ಆಂಗ್ಲ ವಾಹಿನಿಯೊಂದು ತಿಳಿಸಿದೆ.

ಈ ಮಾಜಿ ಅಧಿಕಾರಿ ಐಎಸ್‌ಐನ ಹಲವಾರು ವಿಭಾಗಗಳಲ್ಲಿ ಹಾಗೂ ಭಾರತ- ಪಾಕ್‌ ಗಡಿಯಲ್ಲಿ ಹಲವಾರು ವರ್ಷ ದುಡಿದ ಅನುಭವಿ. ಅವರ ಪ್ರಕಾರ ಐಎಸ್‌ಐ ತನ್ನ ಉಳಿವಿಗಾಗಿ ಮತ್ತೊಮ್ಮೆ ʻಮಿಷನ್‌ ಕಾಶ್ಮೀರ್‌ʼಗೆ ಪುನರುಜ್ಜೀವನ ನೀಡಿದೆ.

2008ರಲ್ಲಿ ಮುಂಬಯಿಯಲ್ಲಿ ಸರಣಿ ದಾಳಿಗಳು ನಡೆದ ಬಳಿಕ, ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಗಳ ಪರಿಣಾಮವಾಗಿ ಕಾಶ್ಮೀರದ ಮೇಲಿದ್ದ ತನ್ನ ಹಿಡಿತವನ್ನು ಐಎಸ್‌ಐ ಕಳೆದುಕೊಂಡಿತ್ತು. ಹಣಕಾಸಿನ ಮೂಲಗಳು ಬತ್ತಿಹೋಗಿದ್ದವು. ದೇಶದ ಆರ್ಥಿಕ ಸ್ಥಿತಿಯೂ ಚೆನ್ನಾಗಿರಲಿಲ್ಲ ಹಾಗೂ ಆರ್ಥಿಕ ಕ್ರಿಯಾ ಟಾಸ್ಕ್‌ ಫೋರ್ಸ್‌ನ ಕಪ್ಪು ಪಟ್ಟಿಗೆ ಸೇರುವ ಭೀತಿ ಇತ್ತು. ಇದಕ್ಕೂ ಮುನ್ನ ಕಾಶ್ಮೀರ ಹಾಗೂ ಭಾರತದಲ್ಲಿ 80 ಮಿಷನ್‌ಗಳನ್ನು ಐಎಸ್‌ಐ ನಿಭಾಯಿಸುತ್ತಿತ್ತು. ಆದರೆ ಆಗಿನ ಐಎಸ್‌ಐ ಮುಖ್ಯಸ್ಥ, ಲೆ.ಜ.ಅಹ್ಮದ್‌ ಶುಜಾ ಪಾಷಾ ಅವರು ಅವುಗಳಿಗೆ ಹಣಕಾಸು ಪೂರೈಕೆ ನಿಲ್ಲಿಸಿದರು. ಬಲೂಚಿಸ್ತಾನ ಹಾಗೂ ಅಫ್ಘಾನಿಸ್ತಾನಗಳಲ್ಲೂ ಐಎಸ್‌ಐ ಸ್ವಲ್ಪಮಟ್ಟಿಗೆ ಹಿಂದೆಗೆದುಕೊಂಡಿತು.

ಇದನ್ನೂ ಓದಿ: Drone terror | ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್‌ ಹಾರಾಟ, ಭದ್ರತಾ ಪಡೆಗಳ ದೌಡು

ಆದರೆ ಈಗ ಅದು ಮತ್ತೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸತೊಡಗಿದೆ. ಹೊಸ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ ವಿಲಯಾಹ್‌ ಹಿಂದ್‌ (ಐಎಸ್‌ಎಚ್‌ಪಿ) ಜತೆಗೆ ಲಷ್ಕರೆ ತಯ್ಬಾ, ಜೈಷೆ ಮೊಹಮ್ಮದ್‌, ತೆಹ್ರೀಕ್‌ ಇ ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಮುಂತಾದ ಸಂಘಟನೆಗಳ ಉಗ್ರ ಕಾಲಾಳುಗಳನ್ನು ಕಣಕ್ಕಿಳಿಸತೊಡಗಿದೆ. ಐಎಸ್‌ಎಚ್‌ಪಿಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಕಾರ್ಯಾಚರಿಸಲು ನಿರ್ದಿಷ್ಟ ಟಾರ್ಗೆಟ್‌ಗಳನ್ನು ಕೊಡಲಾಗಿದೆ. ಚೀನಾ ಕೂಡ ಈ ಕೃತ್ಯದಲ್ಲಿ ಸಹಕರಿಸುತ್ತಿದ್ದು, ಭಾರತವನ್ನು ಹಲವು ದಿಕ್ಕುಗಳಿಂದ ಕಿರುಕುಳಕ್ಕೊಳಪಡಿಸಲು ಮುಂದಾಗಿದೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ.

ಐಎಸ್‌ಎಚ್‌ಪಿ ಸಂಘಟನೆಗೆ ಕಾಶ್ಮೀರದ ಹಲವು ಮೂಲಗಳಿಂದ ಹಾಗೂ ಪಾಕಿಸ್ತಾನದಿಂದ ಹಣ ಹರಿದುಬರುತ್ತಿದೆ. ಸೋಪೋರ್‌, ಕುಪ್ವಾರಾ ಮತ್ತಿತರ ಸಣ್ಣ ಗ್ರಾಮಗಳಲ್ಲಿರುವ ಜಮೀನು ಮುಂತಾದ ಆಸ್ತಿಪಾಸ್ತಿಗಳ ಮಾರಾಟದಿಂದ ಬಂದ ಹಣ ಈ ಸಂಘಟನೆಯನ್ನು ಸೇರುತ್ತಿದೆ. ಜಿಹಾದ್‌ ಹಾಗೂ ಸ್ವಾತಂತ್ರ್ಯದ ಹೆಸರಿನಲ್ಲಿ ಕಾಶ್ಮೀರದ ಹಲವಾರು ಮುಸ್ಲಿಂ ಯುವಕರ ಬ್ರೈನ್‌ವಾಶ್‌ ಮಾಡುತ್ತಿರುವ ಐಎಸ್‌ಐ, ಭಾರತೀಯ ಮಿಲಿಟರಿಯ ವಿರುದ್ಧ ಹೋರಾಡುವಂತೆ ಅವರನ್ನು ಪ್ರಚೋದಿಸುತ್ತಿದೆ ಎಂದು ಈ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kashmir Drugs | ಕಾಶ್ಮೀರದಲ್ಲಿ ಮಾದಕದ್ರವ್ಯಗಳ ಭಯೋತ್ಪಾದನೆ!

Exit mobile version