Site icon Vistara News

Democracy Index: ಪಾಕಿಸ್ತಾನದ ಪ್ರಜಾಪ್ರಭುತ್ವ ವಿಶ್ವದಲ್ಲೇ ಕಳಪೆ; ಭಾರತದ ಸ್ಥಿತಿ ಏನು?

Democracy

Pakistan Plummets in Democracy Index; India Witnesses Biggest Score Improvements: Report

ನವದೆಹಲಿ: ಪಾಕಿಸ್ತಾನದಲ್ಲಿ ಅರಾಜಕತೆ ತಲೆದೋರಿದೆ. ಅಸಮರ್ಥ ನಾಯಕತ್ವ, ಸೇನೆಯ ಕೈಗೊಂಬೆಯಾಗಿ ಸರ್ಕಾರಗಳ ಆಡಳಿತ, ಉಗ್ರವಾದದ ಪೋಷಣೆ, ಉಗ್ರರಿಗೆ ರಕ್ಷಣೆ ನೀಡಿದ ಕಾರಣ ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಪಾಕ್‌ ದಿವಾಳಿಯಾಗಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಪ್ರಜಾಪ್ರಭುತ್ವವು (Pakistan Democracy) ವಿಶ್ವದಲ್ಲೇ ಮೂರನೇ ಕಳಪೆ ಪ್ರಜಾಪ್ರಭುತ್ವ (Democracy Index) ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಹೌದು, ಲಂಡನ್‌ ಮೂಲದ ಸಂಸ್ಥೆಯು 2023ನೇ ಸಾಲಿನ ಏಜ್‌ ಆಫ್‌ ಕಾನ್‌ಫ್ಲಿಕ್ಟ್‌ (Age Of Conflict) ಎಂಬ ವರದಿ ಬಿಡುಗಡೆ ಮಾಡಿದ್ದು, ಪಾಕ್‌ ಕಳಪೆ ಅಂಕ ದಾಖಲಿಸಿದೆ. ಮತ್ತೊಂದೆಡೆ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಸುಧಾರಣೆ ಕಂಡಿದೆ.

ಲಂಡನ್‌ ಮೂಲದ ಎಕನಾಮಿಕ್‌ ಇಂಟಲಿಜೆನ್ಸ್‌ ಯುನಿಟ್‌ (EIU) ಸಂಸ್ಥೆಯು 165 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ, ಪ್ರಜಾಪ್ರಭುತ್ವ ಸ್ಥಿತಿಗತಿಯ ಕುರಿತು ಸೂಚ್ಯಂಕ ಬಿಡುಗಡೆ ಮಾಡಿದೆ. ನಾರ್ವೆ, ನ್ಯೂಜಿಲ್ಯಾಂಡ್‌, ಐಸ್‌ಲೆಂಡ್‌ ಅಗ್ರ ಸ್ಥಾನ ಪಡೆದಿವೆ. ಮತ್ತೊಂದೆಡೆ, ಉತ್ತರ ಕೊರಿಯಾ, ಮ್ಯಾನ್ಮಾರ್‌ ಹಾಗೂ ಅಫಘಾನಿಸ್ತಾನವು ಕ್ರಮವಾಗಿ ಕೊನೆಯ ಮೂರನೇ ಸ್ಥಾನ ಪಡೆದಿವೆ. ಪಾಕಿಸ್ತಾನವು ಕೇವಲ 3.25 ಅಂಕಗಳನ್ನು ಗಳಿಸುವ ಮೂಲಕ ಜಗತ್ತಿನಲ್ಲೇ ಪ್ರಜಾಪ್ರಭುತ್ವ ಸುಧಾರಣೆಯಲ್ಲಿ ಮೂರನೇ ಕಳಪೆ ರಾಷ್ಟ್ರ ಎನಿಸಿದೆ.

ಭಾರತದ ಪರಿಸ್ಥಿತಿ ಏನು?

ಸೂಚ್ಯಂಕದ ಪ್ರಕಾರ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಅಂಕ ಸಾಧನೆಯಲ್ಲಿ ಗಣನೀಯ ಪ್ರಗತಿ ಹೊಂದಿದೆ. ಭಾರತವನ್ನು ದೋಷಪೂರಿತ ಪ್ರಜಾಪ್ರಭುತ್ವ ವಿಭಾಗಕ್ಕೆ ಸೇರಿಸಿದರೂ, ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ಬದಲಾಗುತ್ತಿದೆ. ಸೂಚ್ಯಂಕದಲ್ಲಿ 7.18 ಅಂಕದೊಂದಿಗೆ ಭಾರತವು 41ನೇ ಸ್ಥಾನ ಪಡೆದಿದೆ. ಇನ್ನು ಚೀನಾ ಕೂಡ ಪಾಕಿಸ್ತಾನಕ್ಕಿಂತ ಕಳಪೆ ಸಾಧನೆ ಮಾಡಿದ್ದು, 2.12 ಅಂಕದೊಂದಿಗೆ 148ನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: Pakistan Election: ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ ಸಹೋದರ ಶೆಹಬಾಜ್ ನಾಮನಿರ್ದೇಶಿಸಿದ ನವಾಜ್ ಷರೀಫ್

“ಭಾರತ ಹಾಗೂ ಚೀನಾ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಜಗತ್ತಿನಲ್ಲೇ ಎರಡೂ ರಾಷ್ಟ್ರಗಳು ಏಳಿಗೆ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯತ್ಯಾಸವಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕ, ಕೆನಡಾವನ್ನು ಒಳಗೊಂಡ ಉತ್ತರ ಅಮೆರಿಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಸದೃಢವಾಗಿದೆ. 2022ರಲ್ಲಿದ್ದ 8.37 ಅಂಕಗಳಿಂದ 2023ರಲ್ಲಿ 8.27 ಅಂಕಗಳಿಗೆ ಕುಸಿತ ಕಂಡರೂ ರ‍್ಯಾಂಕಿಂಗ್‌ನಲ್ಲಿ ಸುಧಾರಣೆಯಾಗಿದೆ ಎಂದು ವರದಿ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version