ಇಸ್ಲಾಮಾಬಾದ್: ಭಾರತದ ಸಂಸತ್ ಮೇಲಿನ ಉಗ್ರ ದಾಳಿಯ ರೂವಾರಿ ಮಸೂದ್ ಅಜರ್ (masood azhar) ಅನ್ನು ಪತ್ತೆ ಹಚ್ಚಿ ಬಂಧಿಸಲು ನೆರವಾಗುವಂತೆ ಆಫ್ಘಾನಿಸ್ತಾನ ಸರ್ಕಾರಕ್ಕೆ ಪಾಕಿಸ್ತಾನ ಸರ್ಕಾರ ಮನವಿ ಮಾಡಿದೆ.
ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಅನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವನ್ನು ಕೋರಿದೆ. ಅಜರ್ “ಆಫ್ಘಾನಿಸ್ತಾನದಲ್ಲಿ ಎಲ್ಲೋ ಅಡಗಿದ್ದಾನೆ” ಎಂದು ಪಾಕಿಸ್ತಾನಿ ಅಧಿಕಾರಿಗಳು ನಂಬಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಖಾಸಗಿ ವಾಹಿನಿ ವರದಿ ಮಾಡಿದೆ.
1999ರ ಡಿಸೆಂಬರ್‌ನಲ್ಲಿ ಕಠ್ಮಂಡುವಿನಿಂದ ಕಂದಹಾರ್‌ಗೆ ಹೋಗುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಿದ ಉಗ್ರರಿಂದ ಭಾರತೀಯ ಪ್ರಯಾಣಿಕರನ್ನು ಬಿಡಿಸಿಕೊಳ್ಳಲು, ಬಂಧನದಲ್ಲಿದ್ದ ಅಜರ್ ಹಾಗೂ ಇನ್ನಿಬ್ಬರು ಭಯೋತ್ಪಾದಕರನ್ನು ಭಾರತ ಬಿಡುಗಡೆ ಮಾಡಿತ್ತು. ನಂತರ ಜೆಇಎಂ ಅನ್ನು ಸ್ಥಾಪಿಸಿದ ಅಜರ್, ಭಾರತದ ಸಂಸತ್ ಮೇಲಿನ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ಸಂಯೋಜಿಸಿದ್ದಾನೆ. ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯದ ಮೂಲಕ ಪಾಕಿಸ್ತಾನದ ಮೇಲೆ ಭಾರತ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಜರ್ ನಂಗರ್‌ಹಾರ್ ಪ್ರಾಂತ್ಯ ಅಥವಾ ಆಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ. 2021ರ ಆಗಸ್ಟ್‌ನಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಳ್ಳುವ ಮೊದಲೇ ಅಜರ್ ಆಫ್ಘಾನಿಸ್ತಾನಕ್ಕೆ ತೆರಳಿದ್ದನೋ ಅಥವಾ ಅದರ ನಂತರವೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ಈ ಬೆಳವಣಿಗೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ | ಪಾಕಿಸ್ತಾನಕ್ಕೆ ಎಫ್-16 ಪೂರೈಕೆಗೆ ಅಮೆರಿಕ ಒಪ್ಪಿದ ಬೆನ್ನಲ್ಲೇ, ವ್ಯಾಪಾರ ಮಾತುಕತೆ ಸ್ಥಗಿತಗೊಳಿಸಿದ ಭಾರತ
ಈ ವರ್ಷದ ಆರಂಭದಲ್ಲಿ, ಅಜರ್, ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಎಲ್‌ಇಟಿ ಕಾರ್ಯಕರ್ತ ಸಾಜಿದ್ ಮಿರ್ ಸೇರಿದಂತೆ 30 ಪ್ರಮುಖ ಭಯೋತ್ಪಾದಕ ನಾಯಕರ ವಿರುದ್ಧ ಕ್ರಮಕ್ಕಾಗಿ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಸಭೆಯಲ್ಲಿ ಭಾರತ ಒತ್ತಾಯಿಸಿತ್ತು. ಇದನ್ನು ಇತರ ಪ್ರಭಾವಿ ಪಾಶ್ಚಿಮಾತ್ಯ ದೇಶಗಳು ಬೆಂಬಲಿಸಿದ್ದವು. ಮಿರ್ ಸತ್ತಿದ್ದಾನೆ ಎಂದು ಪಾಕಿಸ್ತಾನ ತಿಂಗಳುಗಳ ಕಾಲ ವಾದಿಸಿತ್ತು. ನಂತರ ಆತನಿನ್ನೂ ಬದುಕಿದ್ದಾನೆ ಎಂಬುದು ಗೊತ್ತಾಗಿತ್ತು.
FATF ಆಗಸ್ಟ್ 28ರಿಂದ ಸೆಪ್ಟೆಂಬರ್ 2ರವರೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಎಫ್‌ಎಟಿಎಫ್‌ನ “ಗ್ರೇ ಲಿಸ್ಟ್”ನಿಂದ ಪಾಕಿಸ್ತಾನವನ್ನು ತೆಗೆದುಹಾಕುವ ಸಾಧ್ಯತೆಯಿದೆ. ಅಜರ್ ಆಫ್ಘಾನಿಸ್ತಾನಕ್ಕೆ ಪಲಾಯನ ಮಾಡಿದ್ದಾನೆ ಎಂದು ಪಾಕಿಸ್ತಾನ FATFಗೆ ಮಾಹಿತಿ ನೀಡಿತ್ತು. 2002ರಲ್ಲಿ ಪರ್ವೇಜ್ ಮುಷರ್ರಫ್ ಆಡಳಿತದಲ್ಲಿದ್ದಾಗ ಪಾಕಿಸ್ತಾನವು ಜೆಎಂ ಅನ್ನು ನಿಷೇಧಿಸಿತ್ತು.
ಇದನ್ನೂ ಓದಿ | ಮತ್ತೊಬ್ಬ ಉಗ್ರನ ಪರ ವಿಟೋ ಪವರ್ ಬಳಸಿದ ಚೀನಾ; ಬ್ಲ್ಯಾಕ್ ಲಿಸ್ಟ್ನಿಂದ ಪಾರಾದ ಅಬ್ದುಲ್ ರವೂಫ್