ಬೆಂಗಳೂರು: ಪಾಕಿಸ್ತಾನಿ ಮಹಿಳೆಯೊಬ್ಬಳು ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ, ಉತ್ತರಪ್ರದೇಶದ ಪ್ರಿಯತಮನನ್ನು ಮದುವೆಯಾಗಿ, ಬೆಂಗಳೂರಿನಲ್ಲಿ ನೆಲೆಸಿದ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ಪ್ರಕರಣ, ದೇಶದ ಇನ್ನೂ ಹಲವು ಕಡೆ ಸಮಸ್ಯೆಯಾಗಿಯೇ ಉಳಿದಿರುವ ʼಪಾಕಿಸ್ತಾನಿ ವಧುʼಗಳ ಸಮಸ್ಯೆಯ ಕಡೆ ಬೆಳಕು ಬೀರಿದೆ. ಮುಖ್ಯವಾಗಿ, ಕರ್ನಾಟಕದ ಭಟ್ಕಳದಲ್ಲಿ ದೊಡ್ಡ ಸಂಖ್ಯೆಯ ʼಪಾಕ್ ವಧುಗಳುʼ ಇದ್ದಾರೆ.
ಪಾಕಿಸ್ತಾನದ ಇಕ್ರಾ ಜೀವನಿ ಎಂಬ 19 ವರ್ಷದ ಮಹಿಳೆ ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಯಾದವ್‌ನೊಂದಿಗೆ ಸಂಪರ್ಕಕ್ಕೆ ಬಂದಿದ್ದಳು. ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಈತ ಆನ್‌ಲೈನ್ ಗೇಮ್ ಮೂಲಕ ಆಕೆಯ ಗೆಳೆತನ ಬೆಳೆಸಿದ್ದ. ಸೆಪ್ಟೆಂಬರ್‌ನಲ್ಲಿ ನೇಪಾಳದ ಮೂಲಕ ಆಕೆ ದೇಶವನ್ನು ಪ್ರವೇಶಿಸಿದ್ದು, ಬೆಂಗಳೂರಿನಲ್ಲಿ ಇಬ್ಬರೂ ಜತೆಯಾಗಿ ವಾಸಿಸುತ್ತಿದ್ದರು. ಜನವರಿಯಲ್ಲಿ ಆಕೆಯನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರು ಆಕೆಯನ್ನು ಮರಳಿ ಗಡಿಪಾರು ಮಾಡುವ ಪ್ರಕ್ರಿಯೆಯಲ್ಲಿದ್ದಾರೆ.
ಇದು ವಂಚನೆ ಪ್ರಕರಣ. ಆದರೆ ಕರ್ನಾಟಕ ಕರಾವಳಿಯ ಭಟ್ಕಳದಲ್ಲಿ ಇಲ್ಲಿನ ಮುಸ್ಲಿಂ ಪುರುಷರನ್ನು ವಿಧ್ಯುಕ್ತವಾಗಿ, ಕಾನೂನುಬದ್ಧವಾಗಿಯೇ ಮದುವೆಯಾಗಿರುವ ಪಾಕಿಸ್ತಾನಿ ಮಹಿಳೆಯರು ಹಲವರು ಇದ್ದಾರೆ. ಕಾನೂನುಬದ್ಧವಾಗಿ ವಿವಾಹವಾದ ಹಲವರು ತಮ್ಮ ಪೌರತ್ವವನ್ನು ಸ್ವೀಕರಿಸಿದ್ದಾರೆ; ಅಥವಾ ಅದಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಹಲವರ ವಾಸ ವೀಸಾ ದೊರೆಯದೆ ಅತಂತ್ರವಾಗಿದೆ.
ಭಟ್ಕಳದ ಪುರುಷರು ಕರಾಚಿಯ ಮಹಿಳೆಯರನ್ನು ಮದುವೆಯಾಗುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಆದರೆ ಭಯೋತ್ಪಾದನೆ ಪ್ರಕರಣಗಳು ಹೆಚ್ಚಿದ ಬಳಿಕ, 1990ರ ದಶಕದಿಂದ ಈ ಮಹಿಳೆಯರ ಜೀವನ ಕಷ್ಟಕರವಾಗಿದೆ.
ಜನವರಿ 6ರಂದು ವೀಸಾ ಉಲ್ಲಂಘನೆಗಾಗಿ ಇಲ್ಲಿದ್ದ ಒಬ್ಬ ಪಾಕಿಸ್ತಾನಿ ಮಹಿಳೆ ಮತ್ತು ಆಕೆಯ ಭಾರತೀಯ ಪತಿಗೆ ಕರ್ನಾಟಕದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ನಾಸಿರಾ ಪರ್ವೀನ್‌ಗೆ ಕಾರವಾರ ಜಿಲ್ಲೆ ಸೆಷನ್ಸ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದರೆ, ಆಕೆಯ ಪತಿ ಮೊಹಮ್ಮದ್ ಇಲಿಯಾಸ್‌ಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಇಬ್ಬರಿಗೂ ತಲಾ 10,000 ರೂ. ದಂಡ ಹಾಕಿತ್ತು.
ಇಲ್ಯಾಸ್ ಪರ್ವೀನ್ ವೀಸಾ ವಿಸ್ತರಣೆಗಾಗಿ ನವ ದೆಹಲಿಗೆ ಭಟ್ಕಳ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಹೋದುದರಿಂದ ದಂಪತಿಯನ್ನು ಜೈಲಿಗೆ ಹಾಕಲಾಗಿತ್ತು. ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರ ವಿರುದ್ಧ 2014ರಲ್ಲಿ ಪ್ರಕರಣ ದಾಖಲಾಗಿತ್ತು.
ಕಟ್ಟುನಿಟ್ಟಾದ ಕಾನೂನು ಜಾರಿಯಿಂದಾಗಿ ಈ ಕುಟುಂಬಗಳು ಪಾಕಿಸ್ತಾನಿಗಳೊಂದಿಗಿನ ವಿವಾಹ ಸಂಬಂಧವನ್ನು ರಹಸ್ಯವಾಗಿಡುವಂತೆ ಮಾಡಿವೆ. “ದೇಶ ವಿಭಜನೆಯ ಮೊದಲು, ಇಲ್ಲಿನ ಅನೇಕ ಮುಸ್ಲಿಂ ಕುಟುಂಬಗಳು, ನವಾಯತ ಸಮುದಾಯ ಕರಾಚಿ ಮತ್ತು ಪಾಕಿಸ್ತಾನದ ಇತರ ಭಾಗಗಳಲ್ಲಿ ವ್ಯಾಪಾರ ಸಂಬಂಧಗಳನ್ನು ಹೊಂದಿತ್ತು. ವಿಭಜನೆ ನಂತರ, ಅನೇಕ ಕುಟುಂಬಗಳು ಒಡೆದುಹೋದವು. ಬಂಧುಗಳು ಬೇರೆಯಾದರು. ಈ ಸಂಬಂಧಗಳನ್ನು ಮುಂದುವರಿಸಲು ಕರಾಚಿಯ ಮಹಿಳೆಯರನ್ನು ಮದುವೆಯಾಗುವ ಅಭ್ಯಾಸ ಪ್ರಾರಂಭವಾಯಿತು. ಹೀಗೆ ಮದುವೆಯಾಗುವವರಲ್ಲಿ ಹೆಚ್ಚಿನವರು ಮದುವೆಯ ಬಳಿಕ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುತ್ತಾರೆ.
1990ರ ದಶಕದಲ್ಲಿ ನಡೆದ ಆಗಿನ ಶಾಸಕ, ಜನಪ್ರಿಯ ಆರ್‌ಎಸ್‌ಎಸ್ ಮುಖಂಡ ಡಾ.ಯು.ಚಿತ್ತರಂಜನ್ ಕೊಲೆಯ ಬಳಿಕ ಈ ಪಟ್ಟಣದ ಭವಿಷ್ಯ ಬದಲಾಯಿತು. ಕರಾವಳಿಯ ಚಿತ್ರಣವೇ ಬದಲಾಯಿತು. ಕೋಮುಗಲಭೆಗಳು ನಡೆದವು. ಅಂತಿಮವಾಗಿ ಯಾಸಿನ್ ಮತ್ತು ರಿಯಾಜ್‌ನಂತಹ ಭಯೋತ್ಪಾದಕರ ಸೃಷ್ಟಿಗೆ ಕಾರಣವಾಯಿತು. ಭಟ್ಕಳದ ಹೆಸರಿನೊಂದಿಗೆ ಭಯೋತ್ಪಾದನೆಯ ಕೆಸರು ಅಂಟಿಕೊಂಡಿತು. ಹೀಗಾಗಿ ಭಟ್ಕಳದ ಅನೇಕ ಪಾಕಿಸ್ತಾನಿ ವಧುಗಳ ಪೌರತ್ವಕ್ಕೆ ಅನುಮೋದನೆ ಕಷ್ಟವಾಯಿತು.
ʼʼಇಂದಿಗೂ ಭಾರತೀಯ ಪೌರತ್ವಕ್ಕಾಗಿ ಸುಮಾರು 70 ಅರ್ಜಿಗಳು ಗೃಹ ಸಚಿವಾಲಯದ ಮುಂದೆ ಬಾಕಿ ಉಳಿದಿವೆ. 1992ರಿಂದ ಈಚೆಗೆ ನಮ್ಮ ದಾಖಲೆಗಳ ಪ್ರಕಾರ, ಭಟ್ಕಳ ಪಟ್ಟಣದಲ್ಲಿ ಪಾಕಿಸ್ತಾನದ 16 ಮಹಿಳೆಯರು ದೀರ್ಘಾವಧಿಯ ವೀಸಾದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ 14 ಮಂದಿ ಭಾರತೀಯರನ್ನು ವಿವಾಹವಾಗಿದ್ದಾರೆ. ಅವರ ಹೆಚ್ಚಿನ ಮಕ್ಕಳು ಭಾರತದಲ್ಲಿ ಹುಟ್ಟಿದ್ದಾರೆʼʼ ಎಂದು ಉತ್ತರ ಕನ್ನಡದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಆದರೆ ಪೌರತ್ವಕ್ಕಾಗಿ ಕಾಯುವುದೇ ಕಷ್ಟ. ಜಾವೀದ್ (ಹೆಸರು ಬದಲಾಯಿಸಲಾಗಿದೆ) ಎಂಬವರ ಪತ್ನಿ ಪಾಕಿಸ್ತಾನದಿಂದ ಬಂದವರು. ವೀಸಾ ನಿರ್ಬಂಧಗಳಿಂದಾಗಿ ಅವರು ದೇಶದೊಳಗೆ ಪ್ರಯಾಣಿಸುವುದು ಕಷ್ಟವಾಗಿದೆ. “ನಾವು ಪ್ರಯಾಣಿಸಬೇಕಾದರೆ ಪೊಲೀಸರಿಂದ ಅನುಮತಿ ಪಡೆಯಬೇಕು, ಎಷ್ಟೋ ಕಚೇರಿಗಳಿಗೆ ಅಲೆದಾಡಬೇಕು. ಎಷ್ಟೋ ಬಾರಿ ಪೊಲೀಸ್ ಪರಿಶೀಲನೆ ನಡೆದಿವೆ. ಆದರೆ ಪೌರತ್ವದ ಅರ್ಜಿ ಮುಂದೆ ಹೋಗಿಲ್ಲʼʼ ಎನ್ನುತ್ತಾರೆ ಅವರು.
ಇದನ್ನೂ ಓದಿ: ಪ್ರವೇಶದ್ವಾರ ನಿರ್ಮಾಣ ವಿಚಾರಕ್ಕೆ 2 ಕೋಮುಗಳ ನಡುವೆ ಸಂಘರ್ಷ; ಭಟ್ಕಳದಲ್ಲಿ ಉದ್ವಿಗ್ನ ಸ್ಥಿತಿ
ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಪ್ರಕ್ರಿಯೆಯನ್ನು ಇನ್ನಷ್ಟು ಕಷ್ಟಕರವಾಗಿಸಿದೆ. ಇಲ್ಲಿನ ಶಂಕಿತ ಭಯೋತ್ಪಾದಕನೊಬ್ಬನ ಪತ್ನಿ ಪಾಕಿಸ್ತಾನಿಯಾಗಿದ್ದು, ಇದು ಈ ಸಂಕಷ್ಟಕ್ಕೆ ಹೊಸ ಸೇರ್ಪಡೆ. ಇಂಡಿಯನ್ ಮುಜಾಹಿದ್ದೀನ್ (ಐಎಂ) ಮೂಲಕ ಭಾರತದಾದ್ಯಂತ ಬಾಂಬ್ ದಾಳಿಗೆ ಬಳಸಿದ ಸ್ಫೋಟಕ ವಸ್ತುಗಳನ್ನು ಪೂರೈಸಿದ್ದಕ್ಕಾಗಿ ಸೈಯದ್ ಇಸ್ಮಾಯಿಲ್ ಅಫಾಕ್ ಎಂಬವನು ಈಗ ಜೈಲಿನಲ್ಲಿದ್ದಾನೆ. ಈತನ ಪತ್ನಿ ಅರ್ಸಾಲಾ ಅಬೀರ್. 2006ರಲ್ಲಿ ಅಫಾಕ್ ಜೊತೆಗಿನ ಮದುವೆಯ ನಂತರ ಅವಳ ಎರಡು ವರ್ಷಗಳ ವೀಸಾವನ್ನು ನವೀಕರಿಸಲಾಯಿತು. ಪತಿಯ ಬಂಧನದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗಸ್ಟ್‌ನಲ್ಲಿ ಆಕೆಯ ವೀಸಾ ನವೀಕರಣ ಅರ್ಜಿಯನ್ನು ತಿರಸ್ಕರಿಸಿತು. ಭಾರತದಿಂದ ತೆರಳಲು ಒಂದು ತಿಂಗಳ ಗಡುವನ್ನು ಈಕೆಗೆ ಕೇಂದ್ರ ಗೃಹ ಸಚಿವಾಲಯ ನಿಗದಿಪಡಿಸಿತು. ಅದನ್ನೂ ಮೀರಿ ಆಕೆ ಇಲ್ಲಿಯೇ ಇದ್ದುದರಿಂದ ಈಕೆಯನ್ನು ಅಕ್ಟೋಬರ್ 7, 2019ರಂದು ಗಡೀಪಾರು ಮಾಡಲಾಯಿತು. ಇಂಥ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಮ್ಮ ವೀಸಾ ನವೀಕರಣ ಮತ್ತು ಪೌರತ್ವ ಅರ್ಜಿ ವಿಲೇವಾರಿ ಪ್ರಕ್ರಿಯೆ ಇನ್ನಷ್ಟು ಕಟ್ಟುನಿಟ್ಟಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ.
ಆದರೆ ಹೆಚ್ಚಿನ ಪಾಕ್ ವಧುಗಳು ಇಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳು ಇಲ್ಲಿಯೇ ಹುಟ್ಟಿ ಬೆಳೆದು ಶಿಕ್ಷಿತರಾಗಿದ್ದಾರೆ. ಅಂಥವರನ್ನು ಗಡಿಪಾರು ಮಾಡುವುದರಲ್ಲಿ ಅರ್ಥವಿಲ್ಲ ಎಂದೂ ಅಧಿಕಾರಿ ಹೇಳುತ್ತಾರೆ.
ಇದನ್ನೂ ಓದಿ: Bomb Threat | ಭಟ್ಕಳ ಪೊಲೀಸರಿಗೆ ಬಂತು ಬಾಂಬ್ ಬ್ಲ್ಯಾಸ್ಟ್ ಬೆದರಿಕೆ ಪತ್ರ; ಕಳ್ಳತನ ಮುಚ್ಚಿಡಲು ಕಳ್ಳನ ಕೃತ್ಯ