Site icon Vistara News

ಪಾಕ್‌ ಯುವತಿಗೆ ಭಾರತದ ಹಿಂದು ವ್ಯಕ್ತಿ ಹೃದಯದ ಕಸಿ; ತಕರಾರು ತೆಗೆದ ನೆರೆ ರಾಷ್ಟ್ರದ ಇಸ್ಲಾಂ ಧರ್ಮಗುರು!

Pakistan Teen

Pakistani Imam claims Ayesha has done a brave act by 'accepting' an unworthy Hindu infidel's heart

ಇಸ್ಲಾಮಾಬಾದ್:‌ ಜಗತ್ತಿನ ಯಾವುದೇ ಧರ್ಮಗಳು, ಧರ್ಮ ಗ್ರಂಥಗಳು ಹಿಂಸೆ, ದ್ವೇಷವನ್ನು ಬೆಂಬಲಿಸುವುದಿಲ್ಲ. ಶಾಂತಿ, ಸಹಬಾಳ್ವೆ, ಮಾನವೀಯತೆಯನ್ನೇ ಪ್ರತಿಯೊಂದು ಧರ್ಮವು ಬೋಧಿಸುತ್ತದೆ. ಆದರೆ, ಧರ್ಮಪಾಲಕರ ಎಡವಟ್ಟುಗಳಿಂದಾಗಿ ಧರ್ಮಗಳ ಸಾರಕ್ಕೇ ಕೆಲವೊಮ್ಮೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದಿಂದ (Pakistan) ಭಾರತಕ್ಕೆ ಬಂದು, ಚೆನ್ನೈ ಆಸ್ಪತ್ರೆಯಲ್ಲಿ ಹೃದಯದ ಕಸಿ ಮಾಡಿಸಿಕೊಂಡ ಪಾಕಿಸ್ತಾನದ ಯುವತಿಯೊಬ್ಬಳನ್ನು ಅಲ್ಲಿನ ಧರ್ಮಗುರುವೊಬ್ಬ (Pakistani Imam) ಟೀಕಿಸಿದ್ದಾನೆ.

ಯುವತಿಯು ಹೃದಯದ ಕಸಿ ಮಾಡಿಸಿಕೊಂಡಿರುವ ಯುಟ್ಯೂಬರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮಾಮ್‌, “ಯುವತಿಗೆ ಹೃದಯ ದಾನ ಮಾಡಿದವನು ಸತ್ತಿದ್ದಾನೆ. ಅವನು ಖಂಡಿತವಾಗಿಯೂ ನಾಸ್ತಿಕನೇ ಆಗಿರುತ್ತಾನೆ. ಅಂತಹ ಹಿಂದುವಿನ ಹೃದಯವನ್ನು ಕಸಿ ಮಾಡಿಸಿಕೊಂಡು ಬಂದ ಪಾಕಿಸ್ತಾನದ ಯುವತಿಯ ಧೈರ್ಯವನ್ನು ಮೆಚ್ಚಬೇಕು. ಆದರೆ, ಹಿಂದುವಿನ ಹೃದಯ ಹೊಂದಿರುವ ಆಯೇಷಾ ಈಗ ಅಲ್ಲಾನ ಎದುರು ತಲೆ ಬಾಗಿ ನಿಲ್ಲಬೇಕು. ಆಗ ಆಕೆಯ ಧೈರ್ಯವನ್ನು ಮೆಚ್ಚುತ್ತೇನೆ” ಎಂಬುದಾಗಿ ಇಮಾಮ್‌ ಹೇಳಿದ್ದಾನೆ. “ಮುಸ್ಲಿಮರು ಅಂಗಾಂಗ ಹಾಗೂ ರಕ್ತವನ್ನು ದಾನ ಮಾಡುವುದು ತಪ್ಪು” ಎಂದು ಕೂಡ ಹೇಳಿದ್ದಾನೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದ್ದು, ಇಮಾಮ್‌ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೃದಯದ ಸಮಸ್ಯೆಯಿಂದಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಆಯೇಷಾ ರೆಶಾನ್‌ (19) ಎಂಬ ಯುವತಿಗೆ ಚೆನ್ನೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆ ವೈದ್ಯರು ಉಚಿತವಾಗಿ ಹೃದಯದ ಕಸಿ ಮಾಡುವ ಮೂಲಕ ನೆರೆ ರಾಷ್ಟ್ರದ ಯುವತಿಯ ಬಾಳಿಗೆ ಬೆಳಕಾಗಿದ್ದಾರೆ. ಭಾರತೀಯರೊಬ್ಬರ ಹೃದಯವನ್ನು ಪಾಕಿಸ್ತಾನದ ಯುವತಿಗೆ ಕಸಿ ಮಾಡುವ ಮೂಲಕ, ಆಕೆ ಮತ್ತೆ ಬದುಕು ಕಟ್ಟಿಕೊಳ್ಳಲು ಅಪೂರ್ವ ಅವಕಾಶ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಇದಕ್ಕಾಗಿ ಆಯೇಷಾ ರೆಶಾನ್‌ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆಯೇಷಾ ರೆಶಾನ್‌ಗೆ ಏನಾಗಿತ್ತು?

ಕಾಲೇಜು ವಿದ್ಯಾರ್ಥಿನಿಯಾಗಿರುವ ಆಯೇಷಾ ರೆಶಾನ್‌ ಅವರು ಕಳೆದ 10 ವರ್ಷಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಅವರಿಗೆ ಹಾರ್ಟ್‌ ಪಂಪ್‌ ಡಿವೈಸ್‌ ಅಳವಡಿಸಬೇಕಾಗಿತ್ತು. ಇದಕ್ಕಾಗಿ ಅವರು ತಮಿಳುನಾಡಿಗೆ ಆಗಮಿಸಿದ್ದರು. ಆದರೆ, ಹಾರ್ಟ್‌ ಪಂಪ್‌ ಅಳವಡಿಸಿದ ಬಳಿಕ ಶಸ್ತ್ರಚಿಕಿತ್ಸೆಯು ವಿಫಲವಾಗಿತ್ತು. ಇದರಿಂದಾಗಿ ಆಯೇಷಾ ರೆಶಾನ್‌ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು. ಆಗ, ಆಸ್ಪತ್ರೆಯ ಸರ್ಜನ್‌ಗಳು ದಾನಿಯೊಬ್ಬರ ಹೃದಯವನ್ನು ಆಯೇಷಾ ರೆಷಾನ್‌ ಅವರಿಗೆ ಅಳವಡಿಸುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ.

ಹೃದಯದ ಕಸಿ ಮಾಡಲು ಸುಮಾರು 35 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಚೆನ್ನೈನ ಐಶ್ವರ್ಯನ್‌ ಟ್ರಸ್ಟ್‌ ಹಾಗೂ ಆಸ್ಪತ್ರೆ ವೈದ್ಯರೇ ಖರ್ಚು ಭರಿಸಿ, ಉಚಿತವಾಗಿ ಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದೆಹಲಿ ಮೂಲದ ದಾನಿಯಿಂದ ಹೃದಯ ಪಡೆದ ವೈದ್ಯರು, ಆಯೇಷಾಗೆ ಅಳವಡಿಸಿದ್ದಾರೆ. “ಹೃದಯ ಕಸಿ ಬಳಿಕ ನಾನೀಗ ಆರೋಗ್ಯದಿಂದ ಇದ್ದೇನೆ. ಚೆನ್ನೈ ವೈದ್ಯರಿಂದಾಗಿ ನಾನು ಉಸಿರಾಡುತ್ತಿದ್ದೇನೆ. ನನ್ನ ಜೀವ ಉಳಿಸಿದ ವೈದ್ಯರಿಗೆ ಕೃತಜ್ಞತೆಗಳು. ಪಾಕಿಸ್ತಾನಕ್ಕೆ ತೆರಳಿ ನಾನು ಪದವಿ ಪಡೆಯುತ್ತೇನೆ” ಎಂಬುದಾಗಿ ಆಯೇಷಾ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ಹೊಗಳಿದ ಪಾಕ್‌ ಮಾಜಿ ಸಚಿವ; ತಿರುಗೇಟು ಕೊಟ್ಟ ಬಿಜೆಪಿ

Exit mobile version