Site icon Vistara News

Parliament Session 2024: ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಎಚ್‌ಡಿಕೆ, ಶೋಭಾ ಕರಂದ್ಲಾಜೆ; Video ಇಲ್ಲಿದೆ

Parliament Session 2024

Parliament Session 2024

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದೆ (Parliament Session 2024). ಮೊದಲ ಬಾರಿಗೆ ನೂತನ ಸಂಸತ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನರೇಂದ್ರ ಮೋದಿ ಅವರಿಗೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹ್ತಾಬ್ (Bhartuhari Mahtab) ಪ್ರಮಾಣ ವಚನ ಬೋಧಿಸಿದರು. ಮೋದಿ ಅವರೊಂದಿಗೆ ಇತರ ಸಂಸದರೂ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಮತ್ತು ಬೆಂಗಳೂರು ಉತ್ತರ ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ʼʼ18ನೇ ಲೋಕಸಭೆಯ ಸದಸ್ಯನಾಗಿ, ಮಂಡ್ಯ ಮಹಾಜನತೆಯ ಪ್ರತಿನಿಧಿಯಾಗಿ ಹಂಗಾಮಿ ಸಭಾಧ್ಯಕ್ಷ ಭರ್ತೃಹರಿ ಮಹತಾಬ್‌ ಅವರ ಸಮಕ್ಷಮದಲ್ಲಿ ನನ್ನ ಮಾತೃಭಾಷೆಯಾದ ಕನ್ನಡಲ್ಲಿ ಪ್ರಮಾಣ ಸ್ವೀಕರಿಸಿದೆ. ಇದು ನನ್ನ ಬದುಕಿನ ಅವಿಸ್ಮರಣೀಯ, ಹೆಮ್ಮೆಯ ಕ್ಷಣ. ಭಾರತದ ಪ್ರಜಾಪ್ರಭುತ್ವ ದೇಗುಲದಲ್ಲಿ ಈ ಧನ್ಯತೆಯ ಕ್ಷಣಕ್ಕೆ ಕಾರಣೀಭೂತರಾದ ಮಂಡ್ಯ ಲೋಕಸಭೆ ಕ್ಷೇತ್ರದ ಎಲ್ಲ ತಂದೆ, ತಾಯಂದಿರು, ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರು ಹಾಗೂ ಸಮಸ್ತ ಕನ್ನಡಿಗರಿಗೆ ಅನಂತ ಧನ್ಯವಾದಗಳನ್ನು ಅರ್ಪಣೆ ಮಾಡುತ್ತೇನೆʼʼ ಎಂದು ಅವರು ಹೇಳಿದ್ದಾರೆ. ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಶೋಭಾ ಕರಂದ್ಲಾಜೆ ಅವರಿಂದಲೂ ಕನ್ನಡದಲ್ಲೇ ಪ್ರಮಾಣ ವಚನ

ಇನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಜಯ ದಾಖಲಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ. ʼʼ18ನೇ ಲೋಕಸಭೆಯ ಪ್ರಥಮ ಅಧಿವೇಶನದಲ್ಲಿ ಇಂದು, ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ಅಭೂತಪೂರ್ವ ಕ್ಷಣ. ನಮ್ಮೆಲ್ಲರ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನೇತೃತ್ವದೊಂದಿಗೆ, ದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಾ, ನಿರಂತರ ಜನಸೇವೆಗೈಯ್ಯಲು ಬದ್ಧಳಾಗಿದ್ದೇನೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಶೋಭಾ ಅವರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್​ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ (8,51,881 ಮತಗಳು) ಗೆಲುವು ಸಾಧಿಸಿದ್ದರು. ಈ ಮೂಲಕ ತೀವ್ರ ಜಿದ್ದಾಜಿದ್ದಿಯಲ್ಲಿ ಅವರು ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು (5,67,261 ಮತಗಳು) ವಿರುದ್ಧ 2,84,620 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.

ಮಹಾನಗರ ಬೆಂಗಳೂರು ಹಾಗೂ ಗ್ರಾಮಾಂತರ ಪ್ರದೇಶದ ಕೆಲವು ವ್ಯಾಪ್ತಿಯನ್ನು ಒಳಗೊಂಡಿರುವ ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ (9,86,049 ಮತಗಳು) ಗೆಲುವು ಸಾಧಿಸಿದ್ದರು. ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಪಿ. ರಾಜೀವ್ ಗೌಡ (7,26,573 ಮತಗಳು) ವಿರುದ್ಧ 2,59,476 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಸದ್ಯ ಇಬ್ಬರೂ ಮೋದಿ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Parliament Session 2024: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

Exit mobile version