ನವದೆಹಲಿ: ಜಿದ್ದಾಜಿದ್ದಿನ ಲೋಕಸಭಾ ಚುನಾವಣೆಯ ಬಳಿಕ ಇದೀಗ ದೇಶ ಲೋಕಸಭಾ ಸ್ಪೀಕರ್ ಆಯ್ಕೆಯ ಚುನಾವಣೆಗೆ ಸಾಕ್ಷಿಯಾಗಲಿದೆ (Lok Sabha Speaker Election). ಲೋಕಸಭಾ ಸ್ಪೀಕರ್ ಹುದ್ದೆಗೆ ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಸ್ಪರ್ಧಿಸುತ್ತಿದ್ದಾರೆ. ಅವಿರೋಧ ಆಯ್ಕೆಗೆ ಒಮ್ಮತ ಮೂಡದ ಹಿನ್ನಲೆಯಲ್ಲಿ ಈ ಇಬ್ಬರು ನಾಯಕರು ಮಂಗಳವಾರ ನಾಮಪತ್ರ ಸಲ್ಲಿಸಿದರು (Parliament Session 2024).
ಸಾಮಾನ್ಯವಾಗಿ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಆಯ್ಕೆಯು ಸಹಮತದೊಂದಿಗೆ ನಡೆಯುತ್ತದೆ. ಹಲವು ವರ್ಷಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಈ ಸಂಪ್ರದಾಯ ಕೊನೆಯಾಗಿದ್ದು, ಹಲವು ದಶಕಗಳ ಬಳಿಕ ಇದೇ ಮೊದಲ ಸಲ ಸ್ಪೀಕರ್ ಸ್ಥಾನಕ್ಕೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿವೆ.
ಆರಂಭದಲ್ಲಿ ಎನ್‌ಡಿಎ ಪ್ರತಿಪಕ್ಷಗಳ ಮನವೊಲಿಸಲು ಯತ್ನಿಸಿತ್ತು. ಓಂ ಬಿರ್ಲಾ ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದ್ದ ಇಂಡಿ ಬಣ ಡೆಪ್ಯುಟಿ ಸ್ಪೀಕರ್ ತಮಗೆ ಸಿಗಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದು ಕೊನೆಯ ಕ್ಷಣದಲ್ಲಿ ಕೊಂಡಿಕುನಾಲ್ ಸುರೇಶ್ ನಾಮಪತ್ರ ಸಲ್ಲಿಸಿದರು.
ಓಂ ಬಿರ್ಲಾ, ಕೆ.ಸುರೇಶ್ ಹಿನ್ನೆಲೆ
ರಾಜಸ್ಥಾನದ ಕೋಟಾ ಕ್ಷೇತ್ರವನ್ನು ಪ್ರತಿನಿಧಿಸುವ ಓಂ ಬಿರ್ಲಾ ಅವರು 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯೂ ಅವರೇ ಸ್ಪೀಕರ್ ಆಗಿದ್ದರು. ಹೀಗಾಗಿ ಅವರನ್ನೇ ಸ್ಪೀಕರ್ ಆಗಿ ಮುಂದುವರಿಸಲು ಬಿಜೆಪಿ ಮುಂದಾಗಿದೆ. ಇನ್ನು ಕೆ.ಸುರೇಶ್ ಕೇರಳದ ಮಾವೆಲಿಕರಾ ಕ್ಷೇತ್ರದ ಕಾಂಗ್ರೆಸ್ ಸಂಸದ. ಎಂಟು ಬಾರಿ ಗೆದ್ದಿರುವ ಸುರೇಶ್ ಅವರು, 18ನೇ ಲೋಕಸಭೆಯಲ್ಲಿ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಸಂಸದರೆನಿಸಿದ್ದಾರೆ. ಕಳೆದ 2 ಲೋಕಸಭಾ ಅಧಿವೇಶನಗಳಲ್ಲಿ ಬಿಜೆಪಿಯ ಸುಮಿತ್ರಾ ಮಹಾಜನ್ (2014) ಮತ್ತು ಓಂ ಬಿರ್ಲಾ (2019) ಸ್ಪೀಕರ್‌ಗಳಾಗಿದ್ದರು.
ಚುನಾವಣೆ ಎಷ್ಟು ಗಂಟೆಗೆ?
ಇಂದು ಬೆಳಿಗ್ಗೆ 11 ಗಂಟೆಗೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ. 293 ಸಂಸದರ ಬಲ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತದೊಂದಿಗೆ ಓಂ ಬಿರ್ಲಾ ಅವರು ಪುನರಾಯ್ಕೆ ಆಗುವ ನಿರೀಕ್ಷೆಯಲ್ಲಿದೆ. ಇಂಡಿ ಮೈತ್ರಿಕೂಟಕ್ಕೆ 232 ಸದಸ್ಯರ ಬಲವಿದೆ. ಈ ಪೈಕಿ 7 ಸಂಸದರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಹೀಗಾಗಿ ಅವರಿಗೆ ವೋಟು ಮಾಡುವ ಅಧಿಕಾರವಿಲ್ಲ. ಜತೆಗೆ ವೈ.ಎಸ್.ಜಗಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್‌ನ ನಾಲ್ವರು ಸಂಸದರು ಎನ್‌ಡಿಎಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.
ವಿಪ್ ಜಾರಿ
ಲೋಕಸಭಾ ಸ್ಪೀಕರ್ ಹುದ್ದೆಯ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಸದನಕ್ಕೆ ಹಾಜರಾಗುವಂತೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಸಂಸದರಿಗೆ ವಿಪ್ (Whip) ಜಾರಿ ಮಾಡಿವೆ. ಎರಡೂ ಪಕ್ಷಗಳು ಬುಧವಾರ ಬೆಳಿಗ್ಗೆ 11 ಗಂಟೆಗೆ ಲೋಕಸಭೆಗೆ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿ ಮಾಡಿವೆ.
ಇದನ್ನೂ ಓದಿ: Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್ ಹುದ್ದೆಗೆ ನಡೆಯಲಿದೆ ಚುನಾವಣೆ