ನವ ದೆಹಲಿ: ವಿವಾದಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಸ್ಥೆಯ ಸದಸ್ಯರು ಅದರ ಹಿಂಸಾತ್ಮಕ ತರಬೇತಿ ಲಾಭ ಪಡೆದು ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಇತರ ಭಯೋತ್ಪಾದಕ ಸಂಘಟನೆಗಳನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ ಎಂದು ಖಾಸಗಿ ಇಂಗ್ಲಿಷ್ ವಾಹಿನಿಯೊಂದು ವರದಿ ಮಾಡಿದೆ.
ಆದರೆ ಪಿಎಫ್‌ಐ ಇಂಥ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ತನಗೆ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇರಳದಲ್ಲಿ ನಡೆದ ಪಿಎಫ್‌ಐ ಸಂಘಟನೆಯ ಪ್ರತಿಭಟನೆ ವೇಳೆ ಹಿಂಸಾಚಾರ, ಕೇಳಿಬಂದ ದೇಶವಿರೋಧಿ ಘೋಷಣೆಗಳು ಸಂಘಟನೆಯ ಸ್ಪಷ್ಟನೆಯನ್ನು ಮರುಪರಿಶೀಲಿಸುವಂತೆ ಮಾಡಿದೆ.
ಪಿಎಫ್‌ಐನ ಸದಸ್ಯರು ಬೇರೆ ಉಗ್ರ ಸಂಘಟನೆಗಳಿಗೆ ಹೆಚ್ಚು ಪ್ರಿಯರಾಗಿರಲು ಕಾರಣ ಪಿಎಫ್‌ಐ ಬೋಧಿಸುವ ತೀವ್ರ ಮತೀಯವಾದಿ ಚಿಂತನೆಗಳು. 2021ರ ಅಕ್ಟೋಬರ್- ನವೆಂಬರ್‌ನಲ್ಲಿ ನಡೆದ ತ್ರಿಪುರಾ ಗಲಭೆಯ ಸಂದರ್ಭದಲ್ಲಿ ಪಿಎಫ್‌ಐ ಮುಸ್ಲಿಮರನ್ನು ಇಂಥ ಚಿಂತನೆಗಳ ಮೂಲಕ ಧ್ರುವೀಕರಣಗೊಳಿಸಿತು. ಇದು ಹಿಂಸಾತ್ಮಕ ಕೃತ್ಯಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಿತು ಎಂದು ಮೂಲಗಳು ತಿಳಿಸಿವೆ.
ಈ ಹಿಂಸಾಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ನಡೆದ ಬಂಧನಗಳನ್ನು ಗಮನಿಸಿದರೆ ಕುರ್ದಿಶ್ ಇಸ್ಲಾಮಿಸ್ಟ್ ತೀವ್ರವಾದಿ ಸಂಘಟನೆ ಅನ್ಸರ್ ಅಲ್ ಇಸ್ಲಾಂ (AAI) ಜತೆ ಇರುವ ಸಂಪರ್ಕಗಳನ್ನು ಗಮನಿಸಬಹುದು. ಮುಸ್ಲಿಂ ವಿರೋಧಿ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಹಿಂಸಾತ್ಮಕವಾಗಿ ತಿರುಗೇಟು ನೀಡಲು ಪಿಎಫ್‌ಐ ತನ್ನ ಸದಸ್ಯರಿಗೆ ತರಬೇತಿ ನೀಡುತ್ತದೆ. ಇದರಿಂದಾಗಿ ಇಲ್ಲಿ ತರಬೇತಿ ಪಡೆದವರು ಇತರ ಭಯೋತ್ಪಾದಕ ಸಂಘಟನೆಗಳನ್ನು ಸೇರಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.
ಯಾವುದಿದು ಪಿಎಫ್‌ಐ?
PFI ತೀವ್ರವಾದಿ ಇಸ್ಲಾಮಿಸ್ಟ್ ಸಂಘಟನೆಯಾಗಿದ್ದು, ಕೆಲವು ಪ್ರಾದೇಶಿಕ ಇಸ್ಲಾಮಿಸ್ಟ್ ಗುಂಪುಗಳಾದ ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (NDF), ಮನಿತ ನೀತಿ ಪಸರೈ (MNP) ಮತ್ತು ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ (KFD) ಮುಂತಾದವುಗಳ ವಿಲೀನದೊಂದಿಗೆ 2006ರಲ್ಲಿ ಸ್ಥಾಪನೆಯಾಯಿತು.
PFIಯ ಹೆಚ್ಚಿನ ಪ್ರಮುಖ ಪದಾಧಿಕಾರಿಗಳು ಈ ಹಿಂದೆ ನಿಷೇಧಿತ ವಿದ್ಯಾರ್ಥಿಗಳ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ನೊಂದಿಗೆ ಸಂಬಂಧ ಹೊಂದಿದ್ದರು. ಇಸ್ಲಾಮೀಯರ ಭಾವನೆಗಳಿಗೆ ಧಕ್ಕೆ ತಂದರು ಎಂದು ಕೇರಳದಲ್ಲಿ ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ ಘಟನೆಯ ಹಿಂದೆ ಪಿಎಫ್‌ಐ ಕೈವಾಡವನ್ನು ಶಂಕಿಸಲಾಗಿದೆ.
ಇದನ್ನೂ ಓದಿ: ಪಿಎಫ್‌ಐ ರ‍್ಯಾಲಿಯಲ್ಲಿ ಮಕ್ಕಳಿಂದ ದ್ವೇಷ ಘೋಷಣೆ, ನಿಷೇಧದ ಕೂಗಿಗೆ ಮತ್ತೆ ಬಲ
ಈ ಹಿಂದೆ PFI ಸಂಪರ್ಕ ಹೊಂದಿದ್ದ ಕೆಲ ವ್ಯಕ್ತಿಗಳು ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನಕ್ಕೆ ಹೋಗಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘರ್ಷದ ಕಣದಲ್ಲಿ ಸೇರಿಕೊಂಡಿದ್ದರು. ಇನ್ನೂ ಕೆಲವರನ್ನು ಭಾರತದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸಲಾಯಿತು.
PFIಗೆ ಪ್ರಜಾಸತ್ತಾತ್ಮಕ ಮುಖವಾಡ ಹೊದಿಸುವ ಕೆಲವು ಸಂಘಟನೆಗಳಿವೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತಾನು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತೋರಿಸಿಕೊಳ್ಳುತ್ತದೆ. ಆದರೆ ಹಿನ್ನೆಲೆಯಲ್ಲಿ ಪಿಎಫ್‌ಐ ಜತೆ ಸಂಬಂಧ ಹೊಂದಿದೆ. ವಿವಿಧ ಮತೀಯ ಪ್ರಚೋದನೆ, ಕೋಮು ಗಲಭೆಗಳು ಉಂಟಾದಾಗ ಪಿಎಫ್‌ಐ ಪಾತ್ರದ ಉಲ್ಲೇಖ ಕೇಳಿಬರುತ್ತದೆ.
ಪ್ರಸ್ತುತ PFI ತನ್ನ ಚಟುವಟಿಕೆಗಳನ್ನು ಈಶಾನ್ಯ ಭಾರತದಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಎಎಐ ಜೊತೆಗಿನ ಪಿಎಫ್‌ಐನ ಕೆಲ ಸದಸ್ಯರ ಸಂಬಂಧ ಆತಂಕಕಾರಿ. ಏಕೆಂದರೆ ದಕ್ಷಿಣ ಭಾರತದ ರಾಜ್ಯಗಳು ಈಶಾನ್ಯದಿಂದ ಭಾರಿ ವಲಸಿಗರನ್ನು ಕಾಣುತ್ತಿದೆ. ಪಿಎಫೈ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಹಲವು ಹಿಂದೂಪರ ಸಂಘಟನೆಗಳು ತುಂಬ ಹಿಂದಿನಿಂದಲೂ ಒತ್ತಾಯಿಸುತ್ತಿವೆ.
ಇದನ್ನೂ ಓದಿ: Explainer: ಏನಿದು ಪಿಎಫ್‌ಐ? ಯಾಕೆ ಬ್ಯಾನ್ ಒತ್ತಾಯ?