ಸೂರತ್: ವಿಶ್ವದ ಅತಿ ದೊಡ್ಡ ಕಚೇರಿ ಸಂಕೀರ್ಣ, ಅಮೆರಿಕದ ಭದ್ರತಾ ಸಂಸ್ಥೆ ಕಟ್ಟಡ ಪೆಂಟಗನ್ (Pentagon) ಅನ್ನೂ ಮೀರಿಸುವ ಗಾತ್ರದ ಹೊಸ ವಜ್ರದ ವ್ಯಾಪಾರ ಸಂಸ್ಥೆಗಳ ಸಂಕೀರ್ಣ (Surat Diamond Bourse) ಸೂರತ್‌ನಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ.
ವಿಶ್ವದ ವಜ್ರ ವ್ಯಾಪಾರದ ರಾಜಧಾನಿ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಈ ಸಂಕೀರ್ಣ ಈಡೇರಿಸಲಿದೆ. ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 67 ಲಕ್ಷ ಚದರಡಿ (620,000 ಚದರ ಮೀಟರ್) ಪ್ರದೇಶದಲ್ಲಿ ರೂಪುಗೊಂಡಿದೆ. ಜುಲೈನಲ್ಲಿ 32 ಶತಕೋಟಿ ರೂಪಾಯಿಗಳಲ್ಲಿ ಇದು ಪೂರ್ಣಗೊಂಡು ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವೆನಿಸಿದೆ. ಅಮೆರಿಕದ ಹೆಗ್ಗುರುತಾದ ಪೆಂಟಗನ್ ಅನ್ನು 1943ರಲ್ಲಿ ತೆರೆಯಲಾಗಿದ್ದು, 65 ಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿದೆ.
ಸೂರತ್‌ನಲ್ಲಿರುವ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ. ಗುಜರಾತನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಪ್ರಧಾನಿ ಮೋದಿಯವರ ಆಡಳಿತ ನಡೆಸುತ್ತಿರುವ ಹಲವು ಪ್ರಯತ್ನಗಳಲ್ಲಿ ಇದೊಂದು. ಮುಂಬಯಿ ಸದ್ಯ ಭಾರತದಲ್ಲಿ ವಜ್ರಗಳ ರಫ್ತಿನ ಕೇಂದ್ರವಾಗಿದೆ. ʼಡೈಮಂಡ್ ಸಿಟಿʼ (Diamond City) ಎಂದೂ ಕರೆಯಲ್ಪಡುವ ಸೂರತ್ ಅಮೂಲ್ಯ ರತ್ನಗಳ ಸಂಸ್ಕರಣೆಯಲ್ಲಿ ಪ್ರಾಬಲ್ಯ ಹೊಂದಿದೆ. ಪ್ರಪಂಚದ ಸುಮಾರು 90 ಪ್ರತಿಶತದಷ್ಟು ಒರಟು ವಜ್ರಗಳನ್ನು ಇಲ್ಲಿಯೇ ಕತ್ತರಿಸಿ ಹೊಳಪು ನೀಡಲಾಗುತ್ತದೆ. ಅಮೆರಿಕ ಮತ್ತು ಚೀನಾಗಳಲ್ಲಿ ಇವುಗಳನ್ನು ಮಾರಲಾಗುತ್ತದೆ. ಹೊಸ ಬೋರ್ಸ್, ಈ ಉದ್ಯಮವನ್ನು ಒಂದೇ ಸೂರಿನಡಿ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ.
“ಸೂರತ್ ಒಂದು ಪ್ರಮುಖ ವಜ್ರ ಕತ್ತರಿಸುವ ಕೇಂದ್ರ. ಡೈಮಂಡ್ ಎಕ್ಸ್‌ಚೇಂಜ್ ಇಲ್ಲಿಗೆ ಬಹಳ ಸಮಯದಿಂದ ಅಗತ್ಯವಿತ್ತು. ವಿಶ್ವದಾದ್ಯಂತದ ವಿತರಕರು ಈ ಸುರಕ್ಷಿತ ಮತ್ತು ಕೇಂದ್ರೀಕೃತ ಸ್ಥಳದಿಂದ ಆತ್ಮವಿಶ್ವಾಸದಿಂದ ವ್ಯಾಪಾರ ಮಾಡಬಹುದು” ಎಂದು ಡೈಮಂಡ್ ಬೋರ್ಸ್‌ಗಳ ವಿಶ್ವ ಫೆಡರೇಶನ್‌ನ ಗೌರವಾಧ್ಯಕ್ಷ ಎಲಿ ಇಝಾಕೋಫ್ ಹೇಳುತ್ತಾರೆ.
ಹೊಸ ಸಂಕೀರ್ಣವು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ ಸಿಟಿಯೊಳಗೆ ಇದೆ. ಇದು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಅಥವಾ ಗಿಫ್ಟ್ ಸಿಟಿಯ ಮಾದರಿಯ ವ್ಯಾಪಾರ ಜಿಲ್ಲೆ. ಇದು ಪ್ರಧಾನಿ ಮೋದಿಯವರ ಪ್ರಮುಖ ಯೋಜನೆಗಳಲ್ಲಿ ಒಂದು. 15 ಅಂತಸ್ತಿನ ಗೋಪುರಗಳ ಒಂಬತ್ತು ಕಟ್ಟಡಗಳು ಮತ್ತು ಸುಮಾರು 4,700 ಕಚೇರಿಗಳನ್ನು ಹೊಂದಿದೆ. ಸೂರತ್ ಡೈಮಂಡ್ ಬೋರ್ಸ್‌ನ ಅಧ್ಯಕ್ಷ ನಾಗಜಿಭಾಯ್ ಸಕರಿಯಾ ಪ್ರಕಾರ, ಸುಮಾರು 130 ಕಚೇರಿಗಳು ಈಗಾಗಲೇ ಬಳಕೆಯಲ್ಲಿವೆ.
SDB ಮುಂದೆ ಇಸ್ರೇಲ್ ಡೈಮಂಡ್ ಎಕ್ಸ್ಚೇಂಜ್ ಕೂಡ ಈಗ ಸಣ್ಣದೆನಿಸಲಿದೆ. ಅದು 80,000 ಚದರ ಮೀಟರ್ ವಿಸ್ತೀರ್ಣದ್ದು. ಟೆಲ್ ಅವಿವ್ ಸಂಕೀರ್ಣವು 1,000 ಕಚೇರಿಗಳನ್ನು ಮಾತ್ರವಲ್ಲದೆ ವಿಮಾದಾರರು, ಬ್ಯಾಂಕ್‌ಗಳು, ಅಂಚೆ ಕಚೇರಿ, ಕಸ್ಟಮ್ಸ್ ಕಚೇರಿ ಮತ್ತು ಮನರಂಜನೆ, ಆಹಾರ ಮತ್ತು ಧಾರ್ಮಿಕ ಸೌಲಭ್ಯ ಸೇವೆಗಳನ್ನು ಒಳಗೊಂಡಿದೆ.
ಐತಿಹಾಸಿಕವಾಗಿ ಭಾರತ ಮತ್ತು ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಪೋರ್ಚುಗಲ್‌ನಂತಹ ದೇಶಗಳ ನಡುವಿನ ಪ್ರಮುಖ ವ್ಯಾಪಾರ ಕೊಂಡಿಗಳಲ್ಲಿ ಸೂರತ್ ಒಂದು. ಏಕೆಂದರೆ ಅರೇಬಿಯನ್ ಸಮುದ್ರ ತೀರಕ್ಕೆ ಇದು ಸಮೀಪ. 17 ಮತ್ತು 18ನೇ ಶತಮಾನಗಳಲ್ಲಿ ಬಾಂಬೆ ದೊಡ್ಡ ಬಂದರು ಆಗಿ ಹೊರಹೊಮ್ಮಿ ಚಿತ್ರಣ ಬದಲಾಯಿತು. ಇಲ್ಲಿ ವಜ್ರ ಉದ್ಯಮ ಸುಮಾರು ಆರು ದಶಕಗಳ ಹಿಂದೆ ಕಾರ್ಯಾರಂಭಿಸಿತು. ಆಸ್ಟ್ರೇಲಿಯಾದಲ್ಲಿ ದೊಡ್ಡ ನಿಕ್ಷೇಪಗಳ ಆವಿಷ್ಕಾರ ಮತ್ತು 1990ರ ದಶಕದಲ್ಲಿ ಭಾರತದ ಆರ್ಥಿಕ ಸುಧಾರಣೆಗಳ ನಂತರ ವೇಗ ಪಡೆದುಕೊಂಡಿತು. ಮುಂಬೈ, ಪ್ರಪಂಚದೊಂದಿಗೆ ಉತ್ತಮ ಸಂಪರ್ಕದಿಂದಾಗಿ ವ್ಯಾಪಾರ ಕೇಂದ್ರವಾಗಿ ಉಳಿಯಿತು.
ಸೂರತ್ ವಜ್ರ ತಯಾರಿಕಾ ಕೇಂದ್ರವಾಗಿ ಬೆಳೆಯಿತು. ದೇಶ, ವಿಶ್ವದ ನಾನಾ ಕಡೆಯ ವಜ್ರ ಪಾಲಿಶ್ ಮಾಡುವವರು ಇಲ್ಲಿಗೆ ಬಂದರು. 1994ರಲ್ಲಿ ನಗರದಲ್ಲಿ ನ್ಯುಮೋನಿಕ್ ಪ್ಲೇಗ್ ಉಲ್ಬಣಗೊಂಡಾಗ ಕಾರ್ಮಿಕರು ಸೂರತ್‌ನಿಂದ ಪಲಾಯನ ಮಾಡಿದರು. ಉದ್ಯಮ ದೊಡ್ಡ ಹಿನ್ನಡೆ ಅನುಭವಿಸಿತು. ಪ್ಲೇಗ್ ನಿಯಂತ್ರಣಕ್ಕೆ ಬಂದ ನಂತರ ಸೂರತ್ ಆಡಳಿತ ಮತ್ತು ಮೂಲಸೌಕರ್ಯದಲ್ಲಿ ಕೂಲಂಕಷ ಬದಲಾವಣೆ ಮಾಡಿತು. ಇಂದು ಇದು ದೇಶದ ಸ್ವಚ್ಛ ನಗರಗಳಲ್ಲಿ ಒಂದಾಗಿದೆ.
ಇಂದು ಸೂರತ್‌ನ ಮಹಿಧರ್‌ಪುರ ಅತಿದೊಡ್ಡ ವಜ್ರದ ಬಜಾರ್. ಇಲ್ಲಿನ ಕಟ್ಟಡಗಳಲ್ಲಿ ಸಾಲು ಮೇಜುಗಳ ಮುಂದೆ ಕುಳಿತಿರುವ ವ್ಯಾಪಾರಿಗಳು ಪ್ರಕಾಶಮಾನವಾದ ದೀಪಗಳ ಅಡಿಯಲ್ಲಿ ಬೆಲೆಬಾಳುವ ಕಲ್ಲುಗಳನ್ನು ಪರಿಶೀಲಿಸುತ್ತಿರುತ್ತಾರೆ. ಕೆಲವರು ಬೀದಿಗಳಲ್ಲೂ ವ್ಯಾಪಾರ ಮಾಡುತ್ತಾರೆ. ವ್ಯಾಪಾರಿಗಳು ಸಾಮಾನ್ಯವಾಗಿ ತಮ್ಮ ಶರ್ಟ್‌ಗಳ ಒಳಭಾಗದಲ್ಲಿ ಹೊಲಿಸಿದ ಜೇಬುಗಳಲ್ಲಿ ಅಥವಾ ಸಣ್ಣ ಚೀಲಗಳಲ್ಲಿ ವಜ್ರಗಳನ್ನು ಸುತ್ತಿಟ್ಟುಕೊಂಡು ನಗರದಲ್ಲಿ ಓಡಾಡುತ್ತಾರೆ.
ವಜ್ರದ ಎಲ್ಲಾ ವ್ಯವಹಾರಗಳನ್ನು ಒಂದೇ ಸೂರಿನಡಿ ತರುವ ಸವಾಲನ್ನು SDB ಎದುರಿಸುತ್ತಿದೆ. ಸೂರತ್‌ನಲ್ಲಿ ಈಗಿರುವ ಬಜಾರ್‌ನಲ್ಲಿ ಕಡಿಮೆ ಬಾಡಿಗೆ ಮತ್ತಿತರ ವೆಚ್ಚದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು ಹೊಸ ಆಧುನಿಕ ಕಚೇರಿಗೆ ಸ್ಥಳಾಂತರಿಸಲು ಹಿಂಜರಿಯುತ್ತಾರೆ. ಮುಂಬೈನ ಭಾರತ್ ಡೈಮಂಡ್ ಬೋರ್ಸ್‌ಗೂ ಆರಂಭಿಕ ವರ್ಷಗಳಲ್ಲಿ ಹೀಗೇ ಆಗಿತ್ತು. ಮುಂಬಯಿಯ ಹಳೆಯ ಡೈಮಂಡ್ ಡಿಸ್ಟ್ರಿಕ್ಟ್ ಬಳಿ 2011ರ ಭಯೋತ್ಪಾದಕ ಬಾಂಬ್ ಸ್ಫೋಟಗಳು ನಡೆಯುವವರೆಗೆ ಮತ್ತು ಕಸ್ಟಮ್ಸ್ ಸೇವೆಗಳು ಕಟ್ಟಡವನ್ನು ಮುಚ್ಚುವವರೆಗೆ ಅದು ಬೆಳೆಯಲಿಲ್ಲ. ಇಂದು ಉಪನಗರ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಹೊಸ ಕಚೇರಿಗಳಿಗೆ ವ್ಯವಹಾರಗಳು ಸ್ಥಳಾಂತರಗೊಂಡಿವೆ.
ಮುಂಬಯಿ ಮೂಲದ ಕೆಲವು ವಜ್ರದ ವ್ಯವಹಾರಗಳು ಸೂರತ್‌ಗೆ ಸ್ಥಳಾಂತರಗೊಳ್ಳಲೂ ಸ್ವಲ್ಪ ಕಷ್ಟವಾಗಬಹುದು. ಸೂರತ್‌ನ ಕಡಿಮೆ ಜೀವನವೆಚ್ಚ, ಹೊಸ ಬೋರ್ಸ್‌ನಲ್ಲಿ ವ್ಯಾಪಾರಗಳ ಕೇಂದ್ರೀಕರಣದಿಂದ ಲಾಭವಾಗಬಹುದು. ಸೂರತ್‌ನ ಹೊರವಲಯದಲ್ಲಿ ಬೋರ್ಸ್ ಇರುವುದರಿಂದ ಮೂಲಸೌಕರ್ಯಗಳು ಅಥವಾ ಮನರಂಜನೆ ವ್ಯವಸ್ಥೆ ಕಡಿಮೆ. ಸೂರತ್‌ಗೆ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಅತಿ ಕಡಿಮೆ ಇದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾಕ್ಕೆ ಕೇವಲ ಒಂದೇ ಅಂತಾರಾಷ್ಟ್ರೀಯ ವಿಮಾನ ಸೌಲಭ್ಯವಿದೆ.
ಸೂರತ್‌ನಲ್ಲಿ ಸಂಸ್ಕರಿಸುವ ಹಲವು ವಜ್ರಗಳು ಸೈಬೀರಿಯಾದಿಂದ ಬರುತ್ತವೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ರಷ್ಯಾದ ವಜ್ರ ಗಣಿಗಾರರ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ. ಇದರಿಂದ ಉದ್ಯಮ ನಷ್ಟ ಅನುಭವಿಸಿದೆ. ರಷ್ಯಾದ ವಜ್ರ ಆಮದುಗಳ ಮೇಲೆ ಏಳು ರಾಷ್ಟ್ರಗಳ ಗುಂಪಿನ ನಿಷೇಧ ಕೂಡ ಜನವರಿ 1ರಂದು ಜಾರಿಗೆ ಬರಲಿದೆ. ಅದೂ ಇನ್ನೊಂದು ಸಂಕಷ್ಟ.
ಇದನ್ನೂ ಓದಿ: Virat kohli : ವಿರಾಟ್ ಕೊಹ್ಲಿಗೆ ಡೈಮಂಡ್ ಬ್ಯಾಟ್ ಉಡುಗೊರೆ ಕೊಟ್ಟ ಸೂರತ್ ಉದ್ಯಮಿ