ಹೊಸದಿಲ್ಲಿ: 2019ರ ಫೆಬ್ರವರಿಯ ಒಂದು ಮಧ್ಯರಾತ್ರಿ; ಭಯಬೀತರಾಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Pakistan PM Imran Khan) ಅತ್ತಲಿಂದ ಒಂದೇ ಸಮನೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸುತ್ತಲೇ ಇದ್ದರು. ಆದರೆ ಮೋದಿ ಆ ಕರೆಯನ್ನು ಸ್ವೀಕರಿಸಲೇ ಇಲ್ಲ. ಭಾರತದ 9 ಕ್ಷಿಪಣಿಗಳು ಯಾವುದೇ ಕ್ಷಣದಲ್ಲಿ ಪಾಕಿಸ್ತಾನದ ಮೇಲೆ ಹಾರಲು ಸಜ್ಜಾಗಿ ನಿಂತಿದ್ದವು!
ಇಂಥದೊಂದು ಕುತೂಹಲಕಾರಿ ಘಟನೆಯನ್ನು ಮಾಜಿ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ತಮ್ಮ ಹೊಸ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ‘ಆ್ಯಂಗರ್ ಮ್ಯಾನೇಜ್ಮೆಂಟ್: ದ ಟ್ರಬಲ್ಡ್ ಡಿಪ್ಲೊಮ್ಯಾಟಿಕ್ ರಿಲೇಷನ್ ಶಿಪ್ ಬಿಟ್ವೀನ್ ಇಂಡಿಯಾ ಆ್ಯಂಡ್ ಪಾಕಿಸ್ತಾನ್’ನಲ್ಲಿ ಅಜಯ್ ಬಿಸಾರಿಯಾ ಈ ಸನ್ನಿವೇಶವನ್ನು ವರ್ಣಿಸಿದ್ದಾರೆ.
2019ರ ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ವಾಹನವೊಂದರ ಮೇಲೆ ಪಾಕ್ ಮೂಲದ ಉಗ್ರರ ದಾಳಿ (pulwama attack) ನಡೆದು ಅದರಲ್ಲಿದ್ದ 40 ಯೋಧರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಭಾರತ, ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾದ ಬಾಲಾಕೋಟ್‌ನಲ್ಲಿದ್ದ ಉಗ್ರರ ತರಬೇತಿ ಕೇಂದ್ರದ ಮೇಲೆ ಕ್ಷಿಪಣಿ ದಾಳಿ ನಡೆಸಿ, ತರಬೇತಿ ಕೇಂದ್ರವನ್ನು ಹಾಗೂ ಅದರೊಳಗಿದ್ದ ಉಗ್ರರನ್ನು ನಾಶ ಮಾಡಿತು. ಆ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವೇಷದ ವಾತಾವರಣ ಮತ್ತಷ್ಟು ಹೆಚ್ಚಾಯಿತು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಛಿದ್ರಗೊಂಡು, ಕೆಳಗೆ ಬಿದ್ದ ಅವರನ್ನು ಪಾಕ್ ಸೈನ್ಯ ಸೆರೆಹಿಡಿದಿತ್ತು.
ಅಭನಂದನ್ ಸಿಕ್ಕಿಬಿದ್ದ ಕೂಡಲೇ ಆತನನ್ನು ಹಿಡಿದಿದ್ದ ಸ್ಥಳೀಯರು ಹೊಡೆದು ಬಡಿದು ಮೂಗಿನಲ್ಲಿ ಬಾಯಲ್ಲಿ ರಕ್ತ ಬರುವಂತೆ ಮಾಡಿದ್ದರು. ಅದರ ದೃಶ್ಯಗಳು ಭಾರತೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಭಾರತೀಯರು ರೊಚ್ಚಿಗೆದ್ದರು. ಆ ಪ್ರಕರಣ ದೊಡ್ಡ ಸದ್ದು ಮಾಡಿತು. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಒಪ್ಪಿಸದೇ ಇದ್ದಲ್ಲಿ ಖಂಡಿತವಾಗಿಯೂ ಪಾಕ್ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಭಾರತ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿತು. ಭಾರತದ ಬೆಂಬಲಕ್ಕೆ ಹಲವಾರು ದೇಶಗಳು ನಿಂತವು. ಭಾರತ -ಪಾಕ್ ನಡುವೆ ಯುದ್ಧದ ಭೀತಿ ಆವರಿಸಿತು.
ಮುನ್ನೆಚ್ಚರಿಕೆ ಕ್ರಮವಾಗಿ ಭಾರತದ 9 ಕ್ಷಿಪಣಿಗಳನ್ನು ಪಾಕಿಸ್ತಾನದತ್ತ ಗುರಿ ಮಾಡಿ ಇರಿಸಲಾಯಿತು. ಪ್ರಧಾನಿ ಮೋದಿ ಅವರ ಒಂದು ಸನ್ನೆಗಾಗಿ ಅವು ಕಾಯುತ್ತಿದ್ದವು. ಇದರ ಮಾಹಿತಿ ಪಾಕ್‌ಗೆ ದೊರೆಯಿತು. ಭಾರತ ಖಂಡಿತ ಸೇಡು ತೀರಿಸಿಕೊಳ್ಳಲಿದೆ ಎಂದು ಪ್ರಧಾನಿ ಇಮ್ರಾನ್ ಭಯಭೀತರಾದರು. ಕೂಡಲೇ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ, ನರೇಂದ್ರ ಮೋದಿಯವರ ಜೊತೆಗೆ ಮಾತನಾದಲು ಮುಂದಾದರು. ಭಾರತದ ಕಡೆಯಿಂದ ಆಗಬಹುದಾಗಿದ್ದ ಸಂಭಾವ್ಯ ದಾಳಿಯನ್ನು ತಪ್ಪಿಸಿಕೊಳ್ಳುವುದೇ ಅವರ ಉದ್ದೇಶವಾಗಿತ್ತು. ಭಾರತದಲ್ಲಿ ಪಾಕಿಸ್ತಾನದ ಹೈಕಮೀಷನರ್ ಆಗಿದ್ದ ಸೊಹೈಲ್ ಮಹಮೂದ್ (ಆಗ ಅವರು ಪಾಕಿಸ್ತಾನದಲ್ಲಿದ್ದರು), ಅಜಯ್ ಬಿಸಾರಿಯಾ ಅವರಿಗೆ ಫೋನಾಯಿಸಿ, ಇಮ್ರಾನ್- ಮೋದಿ ಮಾತುಕತೆಗೆ ಕೂಡಲೇ ಸಂಪರ್ಕ ಕಲ್ಪಿಸಿಕೊಡಬೇಕೆಂದು ಕೋರಿದರು.
ಅಜಯ್ ಅವರು ಭಾರತದ ಪ್ರಧಾನಿ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಮೋದಿಯವರು ಇಮ್ರಾನ್ ಜೊತೆಗೆ ಮಾತನಾಡಲು ಸುತರಾಂ ಸಿದ್ಧರಿಲ್ಲ ಎಂಬುದು ತಿಳಿಯಿತು. ಸೊಹೈಲ್ ಮೆಹಮೂದ್ ಅವರು ಪುನಃ ಅಜಯ್ ಅವರಿಗೆ ಫೋನ್ ಮಾಡಿ, ಸಂಪರ್ಕ ಸಾಧ್ಯವೇ ಎಂದು ಕೇಳಿದರು. ಆಗ ಅಜಯ್, “ಸಾಧ್ಯವಿಲ್ಲ. ಪ್ರಧಾನಿ ಈಗ ಬ್ಯುಸಿ ಇದ್ದಾರೆ. ನೀವು ಪ್ರಧಾನಿಗೆ ಹೇಳಬೇಕಿರುವ ವಿಚಾರವನ್ನು ನನ್ನ ಬಳಿ ತಿಳಿಸುವಂತೆ ಹೇಳಿದ್ದಾರೆ. ನಾನು ಪ್ರಧಾನಿಯವರಿಗೆ ಸಂದೇಶ ತಲುಪಿಸುತ್ತೇನೆ’’ ಎಂದರು. ಆನಂತರ ಫೋನ್ ಮಾಡುವೆ ಎಂದು ಹೇಳಿ ಫೋನಿಟ್ಟ ಸೊಹೈಲ್ ಪುನಃ ಅಜಯ್ ಅವರಿಗೆ ಕರೆ ಮಾಡಲಿಲ್ಲ.
ಆದರೆ ಅದರ ಮರುದಿನವೇ ಅಂದರೆ ಫೆ.28ರಂದು ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಸಂಸತ್ತಿನಲ್ಲಿ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಕಠಿಣ ನಿಲುವು ಇಮ್ರಾನ್ ಅವರ ಮೇಲೆ, ಪಾಕ್ ಮೇಲೆ ಎಂಥ ಒತ್ತಡ ಸೃಷ್ಟಿಸಿತ್ತು ಎಂಬುದು ಇದರಿಂದ ತಿಳಿಯಬಹುದು.
ಇದನ್ನೂ ಓದಿ: Pulwama Attack: ಇನ್ನೊಂದು ಪುಲ್ವಾಮಾ ದಾಳಿ ಬೆದರಿಕೆ ಹಾಕಿದ ಮದ್ರಸ ವಿದ್ಯಾರ್ಥಿ ಜೈಲಿಗೆ