Site icon Vistara News

Vocal For Local: ಮೋದಿ ‘ವೋಕಲ್‌ ಫಾರ್‌ ಲೋಕಲ್’‌ ಕರೆಗೆ ಗಣ್ಯರ ಬಲ; ಅಕ್ಷಯ್‌, ಪೆಡ್ನೇಕರ್‌ ಸಾಥ್

Narendra Modi And Akshay Kumar

PM Narendra Modi's Vocal for Local campaign becomes a massive hit, Bollywood And Others Support

ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬದ (Deepavali 2023) ಸಂಭ್ರಮ ಮನೆಮಾಡಿದೆ. ನಾಗರಿಕರು ಪಟಾಕಿ, ಹಣತೆ, ದೇವರ ಫೋಟೊ, ಮೂರ್ತಿ ಸೇರಿ ಹಲವು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಬೆನ್ನಲ್ಲೇ, “ದೇಶದ ಜನರು ದೇಶೀಯ ವಸ್ತುಗಳನ್ನೇ ಖರೀದಿಸಿ. ವೋಕಲ್‌ ಫಾರ್‌ ಲೋಕಲ್‌ (Vocal For Local) ಎಂಬ ಅಭಿಯಾನಕ್ಕೆ ಬೆಂಬಲ ನೀಡಿ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರೆ ನೀಡಿದ್ದು, ದೇಶದ ನಾಗರಿಕರು, ಬಾಲಿವುಡ್‌ ನಟ-ನಟಿಯರು, ಉದ್ಯಮಿಗಳು ಸೇರಿ ಹತ್ತಾರು ಗಣ್ಯರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಕಿರಣ್‌ ಮಜುಂದಾರ್‌ ಷಾ

ಬಯೋಕಾನ್‌ ಸಂಸ್ಥೆ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ ಅವರು ವೋಕಲ್‌ ಫಾರ್‌ ಲೋಕಲ್‌ ಅಭಿಯಾನಕ್ಕೆ ಬೆಂಬಲ ಘೋಷಿಸಿದ್ದಾರೆ. “ವೋಕಲ್‌ ಫಾರ್‌ ಲೋಕಲ್‌ ಅಭಿಯಾನದಿಂದಾಗಿ ಸೃಜನಶೀಲ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇಂತಹ ಅಭಿಯಾನ ಆರಂಭಿಸಿದ ಮೋದಿ ಅವರಿಗೆ ಧನ್ಯವಾದಗಳು. ದೇಶೀಯ ಉದ್ಯಮಿಗಳು, ವ್ಯಾಪಾರಿಗಳು ಲಕ್ಷ್ಮೀ ಕೃಪಾಕಟಾಕ್ಷದಿಂದ ಉತ್ತಮ ಲಾಭ ಗಳಿಸಲಿ” ಎಂದು ಪೋಸ್ಟ್‌ ಮಾಡಿದ್ದಾರೆ.

ಅಕ್ಷಯ್‌ ಕುಮಾರ್‌ ಪೋಸ್ಟ್‌

“ವಿದೇಶದಲ್ಲಿ ಶೂಟಿಂಗ್‌ನಲ್ಲಿರುವ ಕಾರಣ ನಮ್ಮ ಕಚೇರಿಯಲ್ಲಿ ನಡೆಯುವ ಧನತ್ರಯೋದಶಿ ಪೂಜೆಯಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ, ನಮ್ಮ ತಂಡದ ಸದಸ್ಯರು ದೇಶೀಯ ಕಲಾವಿದರ ಮೂಸೆಯಿಂದ ಹೊರಬಂದಿರುವ ಅದ್ಭುತ ಕಲಾಕೃತಿಗಳು, ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು” ಎಂದು ಅಕ್ಷಯ್‌ ಕುಮಾರ್‌ ಪೋಸ್ಟ್‌ ಮಾಡಿದ್ದಾರೆ.

ಭೂಮಿ ಪೆಡ್ನೇಕರ್‌ ಸಾಥ್‌

ವೋಕಲ್‌ ಫಾರ್‌ ಲೋಕಲ್‌ ಅಭಿಯಾನಕ್ಕೆ ಬಾಲಿವುಡ್‌ ನಟಿ ಭೂಮಿ ಪೆಡ್ನೇಕರ್‌ ಅವರು ಕೂಡ ಸಾಥ್‌ ನೀಡಿದ್ದಾರೆ. ಅಭಿಯಾನಕ್ಕೆ ಬೆಂಬಲಿಸಿ ವಿಡಿಯೊ ಹಂಚಿಕೊಂಡಿರುವ ಅವರು, “ಭಾರತದ ಕರಕುಶಲ ಕಲೆಯು ಜಗತ್ತಿನಲ್ಲೇ ಅದ್ಭುತವಾಗಿದೆ. ನಾವು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸೋಣ, ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಹಾಗೂ ನರೇಂದ್ರ ಮೋದಿ ಅವರ ಕರೆಗೆ ಬೆಂಬಲ ನೀಡೋಣ. ಅವರು ದೇಶಾದ್ಯಂತ ಖುಷಿ ಹಂಚುತ್ತಿದ್ದು, ನಾವು ಕೂಡ ಭಾಗಿಯಾಗೋಣ” ಎಂದು ಹೇಳಿದ್ದಾರೆ.

ಮತ್ಯಾವ ಗಣ್ಯರಿಂದ ಅಭಿಯಾನಕ್ಕೆ ಬೆಂಬಲ?

ಬಾಲಿವುಡ್‌ ನಟರಾದ ಜಾಕಿ ಶ್ರಾಫ್‌, ಅನುಪಮ್‌ ಖೇರ್‌, ವರುಣ್‌ ಶರ್ಮಾ, ರೂಪಾಲಿ ಗಂಗೂಲಿ, ಗೌರವ್‌ ಖನ್ನಾ, ಉದ್ಯಮಿ ಗೌರವ್‌ ಚೌಧರಿ ಇನ್ನೂ ಹಲವು ಗಣ್ಯರು ದೇಶೀಯ ಉತ್ಪನ್ನಗಳ ಖರೀದಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ದೇಶದ ವ್ಯಾಪಾರಿಗಳು ಕೂಡ ನರೇಂದ್ರ ಮೋದಿ ಅವರ ಕರೆಗೆ ಬೆಂಬಲ ಸೂಚಿಸಿದ್ದಾರೆ. “ನರೇಂದ್ರ ಮೋದಿ ಅವರು ನೀಡಿದ ವೋಕಲ್‌ ಫಾರ್‌ ಲೋಕಲ್‌ ಕರೆಗೆ ನಮ್ಮ ಬೆಂಬಲವಿದೆ. ದೇಶಾದ್ಯಂತ ಹೆಣ್ಣುಮಕ್ಕಳು ಹಣತೆ ತಯಾರಿ ಸೇರಿ ಹಲವು ವಸ್ತುಗಳ ತಯಾರಿಕೆಗೆ ಅವಕಾಶ ನೀಡಲಾಗಿದೆ. ಜನರು ಕೂಡ ಸ್ಥಳೀಯ ಮಹಿಳೆಯರಿಂದ ಉತ್ಪನ್ನಗಳನ್ನು ಖರೀದಿಸಬೇಕು” ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ಖಂಡೇಲ್‌ವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಕರೆಗೆ ಓಗೊಟ್ಟು ದೇಶೀಯ ಉತ್ಪನ್ನ ಖರೀದಿ; ಹಬ್ಬದ ವೇಳೆ ಚೀನಾಗೆ ಲಕ್ಷ ಕೋಟಿ ರೂ. ನಷ್ಟ!

ಚೀನಾಗೆ ಒಂದು ಲಕ್ಷ ಕೋಟಿ ರೂ. ನಷ್ಟ

ವೋಕಲ್‌ ಫಾರ್‌ ಲೋಕಲ್‌ ಅಭಿಯಾನದಿಂದಾಗಿ ಈ ಬಾರಿಯ ದೀಪಾವಳಿ ವೇಳೆ ಒಂದು ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ತಿಳಿದುಬಂದಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ, ಬಟ್ಟೆ, ಹಣತೆ, ದೇವರ ಫೋಟೊಗಳು ಸೇರಿ ಹಲವು ಚೀನಾ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಅದರಲ್ಲೂ, ಗೃಹೋಪಯೋಗಿ ವಸ್ತುಗಳು, ಮೊಬೈಲ್‌ ಸೇರಿ ಹಲವು ಎಲೆಕ್ಟ್ರಾನಿಕ್‌ ಉತ್ಪನ್ನಗಳಲ್ಲಂತೂ ಚೀನಾ ಪ್ರಾಬಲ್ಯವಿದೆ. ಆದರೆ, ಈ ಬಾರಿ ದೇಶದ ಜನ ಹೆಚ್ಚಿನ ಪ್ರಮಾಣದಲ್ಲಿ ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಚೀನಾಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version