Site icon Vistara News

ವಿಸ್ತಾರ Explainer | Population | ಮೊದಲ ಬಾರಿಗೆ ಚೀನಾದ ಜನಸಂಖ್ಯೆ ಕುಸಿತ | ಭಾರತದ ಜನಸಂಖ್ಯೆ ಚೀನಾಕ್ಕಿಂತಲೂ ಹೆಚ್ಚು?

population china

ಬೀಜಿಂಗ್‌: ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಪ್ರಕಾರ, ಅಲ್ಲಿನ ಜನಸಂಖ್ಯೆ ಕಳೆದ ವರ್ಷಕ್ಕಿಂತ ಕುಸಿತ ಕಂಡಿದೆ. ಹಿಂದಿನ ವರ್ಷ 1,41.26 ಕೋಟಿ ಇದ್ದ ಜನಸಂಖ್ಯೆ 2022ರಲ್ಲಿ 1,41.18 ಕೋಟಿಗೆ ಇಳಿದಿದೆ.

ಇದೇ ಮೊದಲ ಬಾರಿಗೆ ಹೀಗಾಗುತ್ತಿದೆ. ಚೀನಾ ಹಾಗೂ ಭಾರತಕ್ಕೂ ಇದು ಮಹತ್ವದ ಬೆಳವಣಿಗೆಯಾಗಿದೆ. ಭಾರತ ಶೀಘ್ರದಲ್ಲೇ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲು ಸಿದ್ಧವಾಗಿದೆ ಎಂದು ನಂಬಲಾಗಿತ್ತು. ಈಗಾಗಲೇ ಅದು ಮೀರಿರಬಹುದು ಎಂದು ಕೂಡ ಹೇಳಲಾಗುತ್ತಿದೆ.

ಯಾಕೆಂದರೆ 2011ರ ನಂತರ ಭಾರತ ಅಧಿಕೃತ ಜನಗಣತಿ ನಡೆಸಿಲ್ಲ. ಆದರೆ ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ, 2022ರಲ್ಲಿ ಭಾರತದ ಜನಸಂಖ್ಯೆ 1,41.72 ಕೋಟಿ ಆಗಿದೆ. ಇದು ಚೀನಾಕ್ಕಿಂತ ಹೆಚ್ಚು. ಮತ್ತು 2023ರಲ್ಲಿ ಇದು 1,42.86 ಕೋಟಿ ತಲುಪುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಚೀನಾದ ಕುಗ್ಗುತ್ತಿರುವ ಜನಸಂಖ್ಯೆ ಮತ್ತು ಭಾರತದಲ್ಲಿ ಏರುತ್ತಿರುವಿಕೆಯ ಸಂಭಾವ್ಯ ಪರಿಣಾಮಗಳು ಆರ್ಥಿಕವಾಗಿ ಮಹತ್ವದ್ದಾಗಿರಲಿವೆ.

ಚೀನಾದ ಈ ಬದಲಾವಣೆಯ ಹಿಂದೆ ಏನಿದೆ? ಇದಕ್ಕೆ ಎರಡು ಪ್ರಾಥಮಿಕ ಚಾಲಕ ಸಂಗತಿಗಳು ಇವೆ. ಅವು ಮರಣ ದರ ಮತ್ತು ಫಲವತ್ತತೆ ದರ. ಮರಣ ಅಥವಾ ಸಾವಿನ ಪ್ರಮಾಣದ ಕಡಿತದೊಂದಿಗೆ ದೇಶದ ಜನಸಂಖ್ಯೆ ಹೆಚ್ಚಾಗುತ್ತದೆ. ಜನಸಂಖ್ಯೆಯ ಬೆಳವಣಿಗೆ ನಿಧಾನವಾಗುತ್ತದೆ. ಹೆಚ್ಚಿದ ಶಿಕ್ಷಣ ಮಟ್ಟ, ಸಾರ್ವಜನಿಕ ಆರೋಗ್ಯ ಮತ್ತು ಲಸಿಕೆ ಕಾರ್ಯಕ್ರಮಗಳು, ಆಹಾರ ಮತ್ತು ವೈದ್ಯಕೀಯ ಸೇವೆಯೊಂದಿಗೆ ಮರಣ ಪ್ರಮಾಣ ಕಡಿಮೆಯಾಗಿದೆ.

ಸಾವಿನ ಪ್ರಮಾಣ(CDR)ವನ್ನು ಒಂದು ವರ್ಷದಲ್ಲಿ ಪ್ರತಿ 1,000 ಜನಸಂಖ್ಯೆಗೆ ಸಾಯುತ್ತಿರುವ ವ್ಯಕ್ತಿಗಳ ಸಂಖ್ಯೆ ಎಷ್ಟು ಎಂದು ಲೆಕ್ಕ ಹಾಕಲಾಗುತ್ತದೆ. 1950ರಲ್ಲಿ ಚೀನಾದಲ್ಲಿ ಇದು 23.2 ಹಾಗೂ ಭಾರತದಲ್ಲಿ 22.2 ಇತ್ತು. ಇದು ಸಿಂಗಲ್‌ ಡಿಜಿಟ್‌ಗೆ 1974ರಲ್ಲಿ ಚೀನಾದಲ್ಲಿ (9.5) ಮತ್ತು 1994ರಲ್ಲಿ ಭಾರತದಲ್ಲಿ (9.8) ಇಳಿಯಿತು. 2020ರಲ್ಲಿ ಎರಡೂ ದೇಶಗಳಲ್ಲಿ ಇದು ಕ್ರಮವಾಗಿ 7.3 ಹಾಗೂ 7.4ಕ್ಕೆ ಕುಸಿಯಿತು. ಮತ್ತೊಂದು ಸೂಚಕವೆಂದರೆ ಸರಾಸರಿ ಜೀವಿತಾವಧಿ. 1950 ಮತ್ತು 2020ರ ನಡುವೆ, ಇದು ಚೀನಾಕ್ಕೆ 43.7ರಿಂದ 78.1 ವರ್ಷಗಳಿಗೆ ಏರಿತು; ಭಾರತದಲ್ಲಿ ಇದು 41.7ರಿಂದ 70.1ಕ್ಕೆ ಏರಿತು.

ಇನ್ನೊಂದು ಒಟ್ಟು ಫಲವತ್ತತೆ ದರ (TFR). ಇದು ಸರಾಸರಿ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೊಂದುವ ಶಿಶುಗಳ ಸಂಖ್ಯೆ. ಇದು 1950ರಲ್ಲಿ ಚೀನಾಕ್ಕೆ 5.8 ಮತ್ತು ಭಾರತಕ್ಕೆ 5.7 ಆಗಿತ್ತು. ಕಳೆದ ಮೂರು ದಶಕಗಳಲ್ಲಿ ಭಾರತದ TFR ತೀವ್ರವಾಗಿ ಕುಸಿದಿದೆ. 1992-93 ಮತ್ತು 2019-21ರ ನಡುವೆ, ಇದು 3.4ರಿಂದ 2ಕ್ಕೆ ಇಳಿದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಸಿದಿದೆ. ಇದ್ದ ಜನಸಂಖ್ಯೆಯೇ ಮುಂದುವರಿಯಬೇಕಾದರೆ 2.1ರ TFR ಇರಬೇಕು. ಇದನ್ನು ʼಬದಲಿ ಮಟ್ಟದ ಫಲವತ್ತತೆ’ ಎಂದು ಪರಿಗಣಿಸಲಾಗುತ್ತದೆ. ಅಂದರೆ ಒಬ್ಬ ಮಹಿಳೆ ಇಬ್ಬರನ್ನು ಹೆತ್ತರೆ ಜನಸಂಖ್ಯೆ ಯಥಾವತ್ತು ಮುಂದುವರಿಯುತ್ತದೆ. ಆದರೆ ಎಲ್ಲಾ ಶಿಶುಗಳು ಬದುಕಲು ಸಾಧ್ಯವಿಲ್ಲದ ಕಾರಣ ಬದಲಿ TFR ಅನ್ನು 2.1 ಎಂದು ತುಸು ಹೆಚ್ಚಿಸಲಾಗಿದೆ.

ಚೀನಾದ ಸಮಸ್ಯೆಯೇನು?

ಮುಂದಿನ ಪ್ರಶ್ನೆಯೆಂದರೆ ಭಾರತದ TFR ಈಗಾಗಲೇ ಬದಲಿ ದರಕ್ಕಿಂತ ಕೆಳಗಿದ್ದರೆ, ನಮ್ಮ ಜನಸಂಖ್ಯೆಯು ಇನ್ನೂ ಏಕೆ ಹೆಚ್ಚುತ್ತಿದೆ? ಮತ್ತು ಚೀನಾದ್ದು ಹೇಗೆ ಕುಗ್ಗಿತು?

TFR ಎನ್ನುವುದು ಒಂದು ನಿರ್ದಿಷ್ಟ ಅವಧಿ/ವರ್ಷದ ಸಮೀಕ್ಷೆಗಳ ಆಧಾರದ ಮೇಲೆ ಲೆಕ್ಕ ಹಾಕಲಾದ 15-49 ವರ್ಷ ವಯಸ್ಸಿನ ಮಹಿಳೆಯರ ಸರಾಸರಿ ಜನನಗಳ ಸಂಖ್ಯೆ. TFRಗಳ ಕುಸಿತದೊಂದಿಗೆ ಸಹ ಜನಸಂಖ್ಯೆ ಬೆಳೆಯುತ್ತಲೇ ಇರಬಹುದು. ಆದರೆ ಈ ಕುಸಿತದ ಪರಿಣಾಮ ಒಂದೆರಡು ತಲೆಮಾರುಗಳ ನಂತರ ಮಾತ್ರ ಪ್ರತಿಫಲಿಸಬಹುದು. ಚೀನಾದ TFR 1991ರಲ್ಲಿಯೇ ಬದಲಿ ದರಕ್ಕಿಂತ ಕಡಿಮೆಯಾಗಿದೆ. ಅಂದರೆ ಇದು ಭಾರತಕ್ಕಿಂತ ಸುಮಾರು 30 ವರ್ಷಗಳ ಮೊದಲೇ ಆಗಿದೆ. ಆದರೆ ಆಗಲೇ CDR ಕೂಡ 10ಕ್ಕಿಂತ ಕಡಿಮೆಯಾಗಿತ್ತು. ಚೀನಾದ ಜನಸಂಖ್ಯೆ 1950ರಲ್ಲಿ 54.4 ಕೋಟಿಯಿಂದ 1987ರಲ್ಲಿ 110 ಕೋಟಿಗೆ ದ್ವಿಗುಣಗೊಂಡಿತು. ನಂತರ ಬದಲಿ ಫಲವತ್ತತೆ ದರವು ಋಣಾತ್ಮಕ ಜನಸಂಖ್ಯೆಯ ಬೆಳವಣಿಗೆ ಸೃಷ್ಟಿಸಲು 30 ವರ್ಷ ತೆಗೆದುಕೊಂಡಿತು.

2020ರ ಜನಗಣತಿಯ ಪ್ರಕಾರ ಚೀನಾದ TFR 1.3 ಇದೆ. 2010 ಮತ್ತು 2000ರ ಜನಗಣತಿಯಲ್ಲಿದ್ದ 1.2ಕ್ಕಿಂತ ಸ್ವಲ್ಪ ಹೆಚ್ಚಾಗಿದೆ, ಆದರೂ ಇದು ತುಂಬ ಕಡಿಮೆ. 1980ರಲ್ಲಿ ಪರಿಚಯಿಸಲಾದ ತನ್ನ ʼಒಂದು ಮಗುʼ ನೀತಿಯನ್ನು 2016ರಲ್ಲಿ ಚೀನಾ ಕೊನೆಗೊಳಿಸಿತು. ಆದರೆ ಇದು ಇಳಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಚೀನಾದ ಜನಸಂಖ್ಯೆ 2050ರಲ್ಲಿ 1,31.26 ಕೋಟಿ ಇರಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಇದು 2021ರ ಗರಿಷ್ಠಕ್ಕಿಂತ 10 ಕೋಟಿ ಕುಸಿತವಾಗಿದೆ.

ಚೀನಾದ ನಿಜವಾದ ಬಿಕ್ಕಟ್ಟು ಅದರ ಜನಸಂಖ್ಯೆಯಲ್ಲಿನ ಕುಸಿತ. ಅಂದರೆ ಅದರ ದುಡಿಯುವ ವಯಸ್ಸಿನ ಜನಸಂಖ್ಯೆಯ ಕುಸಿತ. ದೊಡ್ಡ ಜನಸಂಖ್ಯೆ ಇದ್ದಷ್ಟೂ ದುಡಿಯುವ ವಯಸ್ಸಿನವರ ಸಂಖ್ಯೆ ಹೆಚ್ಚಿರುತ್ತದೆ. ಕಡಿಮೆ ಇದ್ದಷ್ಟೂ ದುಡಿಯುವವರು ಕಡಿಮೆ ಇರುತ್ತಾರೆ- ತುಂಬಾ ವಯಸ್ಸಾದವರು ಅಥವಾ ತುಂಬಾ ಚಿಕ್ಕವರಿರುತ್ತಾರೆ. ಅಂದರೆ ಉತ್ಪಾದನೆ, ತೆರಿಗೆ ಆದಾಯ, ಉಳಿತಾಯ ಕಡಿಮೆಯಾಗುತ್ತದೆ. ಹೂಡಿಕೆಗಳಿಗೆ ಹಣಕಾಸು ಕಡಿಮೆಯಾಗುತ್ತದೆ. ಬೆಳವಣಿಗೆಯ ಒಂದು ಚಕ್ರವನ್ನು ಸಡಿಲಾಗುತ್ತದೆ. ಚೀನಾದ ದುಡಿಯುವ ವಯಸ್ಸಿನ ಜನಸಂಖ್ಯೆಯ ಪಾಲು 2045ರ ವೇಳೆಗೆ 50%ಕ್ಕಿಂತ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಭಾರತಕ್ಕೇನು ಅವಕಾಶ?

ಭಾರತದಲ್ಲಿಯೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಫಲವತ್ತತೆಯ ದರಗಳು ಬದಲಿ ಮಟ್ಟಕ್ಕೆ ಇಳಿಯುತ್ತಿವೆ. ಶಿಕ್ಷಣಮಟ್ಟದ ಹೆಚ್ಚಳ, ಕೃಷಿ ಯಾಂತ್ರೀಕರಣ, ಭೂ ಹಿಡುವಳಿಗಳ ವಿಘಟನೆ, ವಿಘಟಿತ ಕುಟುಂಬಗಳು ಇದಕ್ಕೆ ಕೊಡುಗೆ ನೀಡಿವೆ. ಹಿಡುವಳಿ ಸಣ್ಣದಾದಂತೆ, ಯಾಂತ್ರೀಕರಣ ಹೆಚ್ಚಾದಂತೆ ಸಣ್ಣ ಕುಟುಂಬಗಳು ಸಾಕಾಗುತ್ತವೆ.

ಇದನ್ನೂ ಓದಿ | UK Population | ಇಂಗ್ಲೆಂಡ್‌ನಲ್ಲಿ ಕ್ರೈಸ್ತರ ಸಂಖ್ಯೆಯೇ ಕ್ಷೀಣ! ಹಿಂದೂ-ಮುಸ್ಲಿಮರು ಎಷ್ಟಿದ್ದಾರೆ?

ಈಗ ಫಲವತ್ತತೆ ದರ ಕುಸಿಯುತ್ತಿದೆ. ಆದರೆ ಇದರ ಪರಿಣಾಮ ಕಾಣಲಿರುವುದು ಇನ್ನು 40 ವರ್ಷಗಳ ನಂತರ. ಅಂದರೆ ಭಾರತದ ಜನಸಂಖ್ಯೆ ಸುಮಾರು 170 ಕೋಟಿಯನ್ನು ಮುಟ್ಟಿದ ನಂತರ. ಆದರೆ ದುಡಿಯುವ ವಯಸ್ಸಿನ ಜನಸಂಖ್ಯೆಯು ಹೆಚ್ಚು ಮುಖ್ಯವಾದುದು. ಒಟ್ಟಾರೆ ಜನಸಂಖ್ಯೆಯಲ್ಲಿ ಇದರ ಪಾಲು 2007ರಲ್ಲಿ 50% ದಾಟಿತು ಮತ್ತು 2030ರ ದಶಕದ ಮಧ್ಯಭಾಗದಲ್ಲಿ 57%ಕ್ಕೆ ತಲುಪುತ್ತಿದೆ.

ಒಟ್ಟಾರೆಯಾಗಿ, 1980ರ ದಶಕದ ಉತ್ತರಾರ್ಧದಿಂದ ಈವರೆಗಿನ ಚೀನಾದಂತೆಯೇ ಭಾರತವು ತನ್ನ ʻಜನಸಂಖ್ಯಾ ಲಾಭಾಂಶ’ವನ್ನು ಕೊಯ್ಯಲು 2040ರ ದಶಕದಲ್ಲಿ ಸಾಕಷ್ಟು ಅವಕಾಶವನ್ನು ಹೊಂದಿದೆ. ಆದರೆ ಯುವ ಜನಸಂಖ್ಯೆಗೆ ಅರ್ಥಪೂರ್ಣ ಉದ್ಯೋಗಾವಕಾಶಗಳ ಸೃಷ್ಟಿ ಅತ್ಯಂತ ಮುಖ್ಯವಾದುದು. ಇಲ್ಲವಾದರೆ ಈ ಜನಸಂಖ್ಯೆಯೇ ದುಃಸ್ವಪ್ನವಾಗಿ ಬದಲಾಗಬಹುದು.

ಇದನ್ನೂ ಓದಿ | China population | 60 ವರ್ಷಗಳ ನಂತರ ಕುಸಿದ ಚೀನಾ ಜನಸಂಖ್ಯೆ; ಮೊದಲ ಸ್ಥಾನಕ್ಕೇರುತ್ತಾ ಭಾರತ?

Exit mobile version