ನವ ದೆಹಲಿ: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ತಡೆಯಬೇಕು ಎಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ಅಮೆರಿಕ, ಈ ಎರಡೂ ರಾಷ್ಟ್ರಗಳ ಮಧ್ಯೆಯ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ಸಾಧ್ಯ ಮಾಡಲು ಭಾರತದ ಪ್ರಧಾನಿ ನರೇಂದ್ರ ಮೋದಿ(PM Modi)ಯವರಿಂದ ಸಾಧ್ಯ ಎಂಬ ಮಾತನ್ನೂ ಆಗಾಗ ಹೇಳುತ್ತಿದೆ. ಈಗ ವೈಟ್ಹೌಸ್ ವಕ್ತಾರ ಜಾನ್ ಕಿರ್ಬಿ ಅವರು ಮತ್ತೊಮ್ಮೆ ಅದೇ ಮಾತುಗಳನ್ನಾಡಿದ್ದಾರೆ.
ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಾನ್ ಕಿರ್ಬಿ, ‘ಉಕ್ರೇನ್ ವಿರುದ್ಧ ರಷ್ಯಾ ಸಾರಿರುವ ಯುದ್ಧ ನಿಲ್ಲಿಸುವಂತೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮನವೊಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವುದೇ ಪ್ರಯತ್ನ ಮಾಡಿದರೂ ನಾವು ಅದನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ. ‘ಇನ್ನೂ ಸಮಯವಿದೆ..ಕಾಲ ಮಿಂಚಿಹೋಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಈಗಲೂ ರಷ್ಯಾ ಅಧ್ಯಕ್ಷ ಪುಟಿನ್ಗೆ ಮನವರಿಕೆ ಮಾಡಿಕೊಡಬಹುದು. ನಾವು ಕಾಯುತ್ತೇವೆ ಮತ್ತು ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸಲು ನರೇಂದ್ರ ಮೋದಿ ಯಾವುದೇ ಉಪಕ್ರಮ ತೆಗೆದುಕೊಂಡರೂ ನಾವು ಸ್ವಾಗತಿಸುತ್ತೇವೆ ಎಂದು ಜಾನ್ ಕಿರ್ಬಿ ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಕ್ಕೆ ತೆರಳಿ, ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಭೇಟಿಯಾದ ಬೆನ್ನಲ್ಲೇ ಅಮೆರಿಕದಿಂದ ಇಂಥದ್ದೊಂದು ಹೇಳಿಕೆ ಹೊರಗೆ ಬಿದ್ದಿದೆ. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧ ಕೊನೆಗಾಣಲೇಬೇಕು ಎಂದು ಯುಎಸ್ ಬಲವಾಗಿ ಆಗ್ರಹಿಸುತ್ತಿದೆ. ಈ ಹಿಂದೆಯೂ ಹಲವು ಬಾರಿ ಅಮೆರಿಕ ಪ್ರಧಾನಿ ನರೇಂದ್ರ ಮೋದಿಯವರತ್ತಲೇ ಆಶಾಭಾವನೆಯಿಂದ ನೋಡಿತ್ತು. ಪುಟಿನ್ ಮೇಲೆ ಮೋದಿಯವರ ಮಾತೊಂದೇ ಪ್ರಭಾವ ಬೀರಲು ಸಾಧ್ಯ ಎಂದಿತ್ತು.
ಇದನ್ನೂ ಓದಿ: Russia: ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ವರದಿ ಮಾಡುತ್ತಿದ್ದ ಅತಿ ದೊಡ್ಡ ಮಾಧ್ಯಮ ಸಂಸ್ಥೆಯನ್ನೇ ನಿಷೇಧಿಸಿದ ರಷ್ಯಾ!