Site icon Vistara News

ಪತಂಜಲಿ ತಪ್ಪು ಮಾಡಿದ್ರೆ 1000 ಕೋಟಿ ದಂಡ ಹಾಕಿ; ಆದ್ರೆ ವೈದ್ಯರಿಗೆ ಯಾವ ಶಿಕ್ಷೆ? ಬಾಬಾ ರಾಮದೇವ ಕೆಂಡ

Patanjali case

ಹರಿದ್ವಾರ: ಆಧುನಿಕ ಔಷಧಗಳ (modern medicines) ವಿರುದ್ಧ ತಪ್ಪು ದಾರಿಗೆಳೆಯುವ ಜಾಹೀರಾತುಗಳು (misleading advertisements) ಮತ್ತು ಟೀಕೆಗಳ ಕುರಿತು ಸುಪ್ರೀಂ ಕೋರ್ಟ್‌ನ (Supreme Court) ವಾಗ್ದಂಡನೆಗೆ ಪ್ರತಿಕ್ರಿಯಿಸಿರುವ ಯೋಗ ಗುರು ಬಾಬಾ ರಾಮ್‌ದೇವ್(baba Ramdev), ವೈದ್ಯರ ಗುಂಪೊಂದು ಭಾರತದ ಯೋಗ(Yoga), ಆಯುರ್ವೇದದ (Ayurveda) ವಿರುದ್ಧ “ಅಪ್ರಚಾರ” ನಡೆಸುತ್ತಿದೆ ಎಂದು ಹೇಳಿದ್ದಾರೆ. ಅವರ ಕಂಪನಿ ಪತಂಜಲಿ (Patanjali company) ಆಯುರ್ವೇದ ಸುಳ್ಳುಗಳನ್ನು ಹರಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ತಮ್ಮ ಔಷಧ ಉತ್ಪನ್ನಗಳು ಹೊಂದಿವೆ ಎಂಬು ಸುಳ್ಳು ಪ್ರಚಾರ ನಿಲ್ಲಿಸದಿದ್ದರೆ, ಪತಂಜಲಿಯ ಪ್ರತಿ ಉತ್ಪನ್ನ ಮೇಲೆ ಒಂದೊಂದು ಕೋಟಿ ರೂ. ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು.

ನಿನ್ನೆಯಿಂದ ಬೇರೆ ಬೇರೆ ಮಾಧ್ಯಮಗಳಲ್ಲಿ ಪತಂಜಲಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ಸುಳ್ಳು ಪ್ರಚಾರ ಮಾಡಿದರೆ ದಂಡ ವಿಧಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಅನ್ನು ಗೌರವಿಸುತ್ತೇವೆ. ಆದರೆ ನಾವು ಯಾವುದೇ ಸುಳ್ಳು ಪ್ರಚಾರ ಮಾಡುತ್ತಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ಅವರು ಹರಿದ್ವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಒಂದೊಮ್ಮೆ ಅಪಪ್ರಚಾರದ ತಪ್ಪು ಸಾಬೀತಾದರೆ ಯಾವುದೇ ಶಿಕ್ಷೆಯನ್ನು ಎದುರಿಸಲು ತಾವು ಸಿದ್ಧ ಎಂದು ಅವರು ಹೇಳಿದರು.

ಕೆಲವು ವೈದ್ಯರು ಗುಂಪು ರಚಿಸಿಕೊಂಡಿದ್ದಾರೆ ಮತ್ತು ನಿರಂತರವಾಗಿ ಯೋಗ, ಆರ್ಯುವೇದ ಇತ್ಯಾದಿ ಭಾರತೀಯ ವೈದ್ಯ ಪದ್ಧತಿಗಳ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ನಾವು ಸುಳ್ಳು ಹೇಳಿದ್ದರೆ 1000 ಕೋಟಿ ರೂಪಾಯಿ ದಂಡ ವಿಧಿಸಿ. ಅಷ್ಟೇ ಅಲ್ಲ ನಾವು ನೇಣಿಗೇರಲೂ ಕೂಡ ಸಿದ್ಧ. ಆದರೆ, ಒಂದು ವೇಳೆ ನಾವು ಹೇಳುವುದು ಸುಳ್ಳು ಅಲ್ಲ ಅನ್ನುವುದಾದರೆ, ನಿಜವಾಗಿಯೂ ಅಪಪ್ರಚಾರ ಮಾಡುತ್ತಿರುವವರನ್ನು ಶಿಕ್ಷೆಗೊಳಪಡಿಸಿ. ಕಳೆದ ಐದು ವರ್ಷಗಳಿಂದ ರಾಮದೇವ್ ಮತ್ತು ಪತಂಜಲಿಯನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪತಂಜಲಿ ವಿರುದ್ಧ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದೇನು?

ಎಲ್ಲ ರೋಗಗಳಿಗೆ ಔಷಧಗಳಿವೆ ಎಂದು ಹೇಳುವ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನಿಲ್ಲಿಸಲು ಕಾರ್ಯವಿಧಾನವನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರಕ್ಕೆ ಆದೇಶಿಸಿದೆ. ಆಧುನಿಕ ವೈದ್ಯಶಾಸ್ತ್ರದ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಬಾಬಾ ರಾಮ್‌ದೇವ್ ಮತ್ತು ಅವರ ಕಂಪನಿಯ ವಿರುದ್ಧ ಛೀಮಾರಿ ಹಾಕಿತು.

ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ಪೀಠವು, ನೀವು(ಪತಂಜಲಿ) ಕಾನೂನು ಉಲ್ಲಂಘನೆ ಮಾಡುತ್ತಿದ್ದೀರಿ. ಈ ಉಲ್ಲಂಘನಯೆನ್ನು ಹೀಗೆಯೇ ಮುಂದುವರಿಸಿದರೆ ಪತಂಜಲಿಯ ಪ್ರತಿ ಉತ್ಪನ್ನದ ಮೇಲೆ ಒಂದು ಕೋಟಿ ರೂ. ದಂಡವನ್ನ ವಿಧಿಸುವ ಕುರಿತು ನಾವು ಗಂಭೀರವಾಗಿ ಯೋಚಿಸಬೇಕಾಗುತ್ತದೆ ಎಂದು ಛೀಮಾರಿ ಹಾಕಿತ್ತು.

ಪತಂಜಲಿಯ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿರ್ಬಂಧಿಸುವಂತೆ ಕೋರಿ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಅಲ್ಲದೇ, ಪತಂಜಲಿಯು ಅಲೋಪಥಿಕ್ ಔಷಧಗಳ ವಿರುದ್ಧವೂ ಮಾಡುತ್ತಿರುವ ಅಪ್ರಚಾರವನ್ನು ವೈದ್ಯರ ಸಂಘವು ಪ್ರಶ್ನಿಸಿತ್ತು.

ಈ ಸುದ್ದಿಯನ್ನೂ ಓದಿ: Baba Ramdev | ಉತ್ತರಾಖಂಡದಲ್ಲಿ ಪತಂಜಲಿಯ 5 ಔಷಧಗಳ ಮೇಲಿನ ನಿಷೇಧ ಹಿಂಪಡೆದ ಸರ್ಕಾರ

Exit mobile version