ನವದೆಹಲಿ: QUAD Summit 2022: ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಆಂತೊನಿ ಅಲ್ಬನೆಸ್ ಮತ್ತಿತರರು ಹಿಂದೆ ನಡೆದು ಬರುತ್ತಿದ್ದಾರೆ. ಅವರೆಲ್ಲರ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾರೆ! ಈ ಫೋಟೊ ಈಗ ವೈರಲ್ ಆಗಿದೆ. ಮೋದಿ ಅಭಿಮಾನಿಗಳನ್ನು ಪುಳಕಗೊಳಿಸಿದೆ!!
ಕ್ವಾಡ್(QUAD) ಸಮಾವೇಶದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜಪಾನ್‌ಗೆ ಭೇಟಿ ನೀಡಿದ್ದರು. ಈ ವೇಳೆ ವಿವಿಧ ದೇಶಗಳ ಮುಖ್ಯಸ್ಥರು ಮೆಟ್ಟಿಲು ಇಳಿದು ಬರುವಾಗ ಒಂದು ವಿಶಿಷ್ಟ ಚಿತ್ರ ಗಮನ ಸೆಳೆಯುತ್ತಿದೆ. ʼʼಇದು ಭಾರತೀಯರು ಹೆಮ್ಮೆ ಪಡುವ ದೃಶ್ಯ. ವಿಶ್ವದ ಅನೇಕ ದೇಶಗಳ ನಾಯಕರು ಒಟ್ಟಿಗೆ ಮೆಟ್ಟಿಲು ಇಳಿದು ಬರುತ್ತಿದ್ದಾರೆ. ಆದರೆ, ಅವರೆಲ್ಲರ ಮುಂದೆ ನಮ್ಮ ದೇಶದ ಪ್ರಧಾನಿ ಮೋದಿ ನಡೆದು ಬರುತ್ತಿದ್ದಾರೆʼʼ ಎಂಬ ಧಾಟಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳು ಮೂಡಿ ಬರುತ್ತಿವೆ.
ಈ ಚಿತ್ರ ನೋಡಿದರೆ ವಿಶ್ವದ ಎಲ್ಲ ದೇಶಗಳ ಪ್ರಮುಖರಿಗೆ ಮೋದಿಯೇ ಮುಂದಾಳು ಎಂಬಂತೆ ಭಾಸವಾಗುತ್ತದೆ ಎಂದು ಮೋದಿ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಹರಿದು ಬಂದಿದೆ. ಈ ಚಿತ್ರಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಶ್ಣವ್ ʼಲೀಡಿಂಗ್ ಫ್ರಮ್ ಫ್ರಂಟ್…ಅವರ್ ಪಿಎಂ (ಮುಂದಾಳತ್ವ ವಹಿಸಿರುವ ನಮ್ಮ ಪ್ರಧಾನಿ)ʼ ಎಂಬ ಕ್ಯಾಪ್ಷನ್ ನೀಡಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ʼಪ್ರಧಾನ ಸೇವಕ- ದಾರಿ ತಿಳಿದಿರುತ್ತಾರೆ, ದಾರಿಯಲ್ಲಿ ಸಾಗುತ್ತಾರೆ, ದಾರಿ ತೋರುತ್ತಾರೆʼ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Quad Summit 2022: ಪ್ರಧಾನಿ ಮೋದಿಯನ್ನು ಹೊಗಳಿ, ಚೀನಾವನ್ನು ಟೀಕಿಸಿದ ಅಮೆರಿಕ ಅಧ್ಯಕ್ಷ