ನವದೆಹಲಿ: ಏಷ್ಯಾದ ನೊಬೆಲ್ (Nobel Prize of Asia) ಎಂದೇ ಕರೆಯಿಸಿಕೊಳ್ಳುವ, 2023ನೇ ಸಾಲಿನ ರಾಮನ್ ಮ್ಯಾಗ್ಸೆಸೆ (Ramon Magsaysay Award:) ಪ್ರಶಸ್ತಿಗೆ ಕ್ಯಾನ್ಸರ್ ರೋಗ ತಜ್ಞ, ಡಾ. ರವಿ ಕಣ್ಣನ್ (Oncologist Ravi Kannan) ಅವರು ಪಾತ್ರರಾಗಿದ್ದಾರೆ. ಅಸ್ಸಾಮ್‌ನ ಕ್ಯಾಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (CCHRC) ನಿರ್ದೇಶಕರಾಗಿರುವ ಕಣ್ಣನ್ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಕೂಡ ದೊರೆತಿದೆ. ಪ್ರಸಕ್ತ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾದ ನಾಲ್ವರಲ್ಲಿ ಕಣ್ಣನ್ ಕೂಡ ಒಬ್ಬರಾಗಿದ್ದಾರೆ.
ತಮಗೆ ದೊರೆತ ಪ್ರಶಸ್ತಿಯು ತಾವು ಕಾರ್ಯ ನಿರ್ವಹಿಸುತ್ತಿರುವ ಕ್ಯಾನ್ಸರ್ ಆಸ್ಪತ್ರೆಗೆ ದೊರೆತ ಗೌರವವಾಗಿದೆ ಎಂದು ಕಣ್ಣನ್ ಅವರು ಹೇಳಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥರಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಪ್ರಾಜೆಕ್ಟ್ ಯಶಸ್ಸಿಗಾಗಿ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ನಾವೆಲ್ಲರೂ ಒಂದು ಟೀಂ ಆಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಕೆಲಸ ಮಾಡುತ್ತಿರುವವುರ ಮಾತ್ರವಲ್ಲದೇ ಹೊರಗಿನಿಂದಲೂ ನಮೆಗ ಬೆಂಬಲ ನೀಡುತ್ತಿರುವವರೂ ಕೂಡ ವಿನ್ನರ್ಸ್ ಎಂದು ಕಣ್ಣನ್ ಅವರು ಚೆನ್ನೈನಲ್ಲಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: KK Shailaja | ಏಷ್ಯಾದ ನೊಬೆಲ್ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಕೇರಳ ಮಾಜಿ ಸಚಿವೆ ಕೆ.ಕೆ.ಶೈಲಜಾ, ಕಾರಣ ಏನು?
ಈ ಮೊದಲು ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದ ಕಣ್ಣನ್ ಅವರು ತಮ್ಮ ಪತ್ನಿ ಸೀತಾ ಅವರೊಂದಿಗೆ 2007ರಲ್ಲಿ ಅಸ್ಸಾಮ್‌ನ ಸಿಲ್ಚಾರ್‌ಗೆ ಆಗಮಿಸಿದರು ಮತ್ತು ಸಿಸಿಎಚ್ಆರ್‌ಸಿ ಉಸ್ತುವಾರಿಯನ್ನು ವಹಿಸಿಕೊಂಡರು. ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಅನನ್ಯ ಕೊಡುಗೆ ಪರಿಗಣಿಸಿ ಭಾರತ ಸರ್ಕಾರವು ಕಣ್ಣನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆಗೆ ಪ್ರಶಸ್ತಿಗೆ ಪಾತ್ರರಾದ ಕಣ್ಣನ್ ಅವರನ್ನು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಭಿನಂದಿಸಿದ್ದಾರೆ. ಅಸ್ಸಾಮ್‌ನಲ್ಲಿ ಕ್ಯಾನ್ಸರ್ ಕಾಳಜಿ ಕುರಿತು ಕಣ್ಣನ್ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿನ ಅವರ ಸೇವೆ ಅನನ್ಯ ಎಂದು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.