ನವ ದೆಹಲಿ: ರಾಜೀವ್ ಗಾಂಧಿ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿರುವುದರಿಂದ, ನನ್ನನ್ನೂ ಜೈಲಿನಿಂದ ಬಿಡುಗಡೆ ಮಾಡಿ ಎಂದು ಜೈಲಿನಲ್ಲಿರುವ ಕೊಲೆಪಾತಕಿ ಸ್ವಾಮಿ ಶ್ರದ್ದಾನಂದ ಸುಪ್ರೀಂ ಕೋರ್ಟ್ ಮುಂದೆ ಬೇಡಿಕೆ ಮಂಡಿಸಿದ್ದಾನೆ.
ಈತ ತನ್ನ ಪತ್ನಿ ಶಾಖರಾ ಖಲೀಲಿ ಎಂಬಾಕೆಯನ್ನು ಆಕೆಯ ಆಸ್ತಿಯ ಲೋಭದಿಂದ ಕೊಲೆ ಮಾಡಿದ್ದಕ್ಕಾಗಿ ಶಿಕ್ಷೆಯಾಗಿ ಜೈಲಿನಲ್ಲಿದ್ದಾನೆ. ಈತನಿಗೆ ಮೊದಲು ಗಲ್ಲು ಶಿಕ್ಷೆ ಘೋಷಿಸಲಾಗಿತ್ತು. ನಂತರ ಅದನ್ನು ಜೀವಿತಾವಧಿ ಪೂರ್ತಿ ಜೈಲುವಾಸಕ್ಕೆ ಇಳಿಸಲಾಗಿದೆ.
ʼʼʼನನ್ನ ಕಕ್ಷಿದಾರರಾದ ಸ್ವಾಮಿ ಶ್ರದ್ಧಾನಂದ ಒಂದು ಕೊಲೆಗಾಗಿ ಜೈಲಿನಲ್ಲಿದ್ದು, ಈಗಾಗಲೇ 29 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾನೆ. ಆತನಿಗೆ ಒಂದು ದಿನವೂ ಪರೋಲ್ ಕೂಡ ನೀಡಲಾಗಿಲ್ಲ. ಆದರೆ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರನ್ನು ಕೊಂದವರೇ ಜೈಲಿನಿಂದ ಮುಕ್ತಿ ಪಡೆದಿದ್ದಾರೆ. ಆ ಘಟನೆಯಲ್ಲಿ ರಾಜೀವ್ ಗಾಂಧಿ ಸೇರಿದಂತೆ 16 ಮಂದಿ ಮೃತಪಟ್ಟಿದ್ದರು. 43 ಮಂದಿ ಗಾಯಗೊಂಡಿದ್ದರು. 30 ವರ್ಷಗಳ ಜೈಲುವಾಸದ ಬಳಿಕ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಅದಕ್ಕೂ ಮುನ್ನ ಅವರಿಗೆ ಪರೋಲ್ ಸೌಲಭ್ಯ ಕೂಡ ಸಿಕ್ಕಿತ್ತು. ಇವುಗಳನ್ನು ಹೋಲಿಸಿದಾಗ, ಸಮಾನತೆಯ ಹಕ್ಕನ್ನು ಇಲ್ಲಿ ಉಲ್ಲಂಘಿಸಲಾಗಿದೆʼʼ ಎಂದು ಶ್ರದ್ಧಾನಂದನ ವಕೀಲರಾದ ವರುಣ್ ಠಾಕೂರ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹಾಗೂ ನ್ಯಾ. ಹಿಮಾ ಕೋಹ್ಲಿ ಅವರ ಪೀಠದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಿದ್ದಾರೆ.
1986ರಲ್ಲಿ ಮೈಸೂರು ಸಂಸ್ಥಾನದ ಮಾಜಿ ದಿವಾನರಾದ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು ಶಾಖರಾ ಅವರನ್ನು ಶ್ರದ್ಧಾನಂದ ಮದುವೆಯಾಗಿದ್ದ. ಇದಕ್ಕೂ ಮುನ್ನ ಮೊದಲಿನ ಪತಿ ಅಕ್ಬರ್ ಖಲೀಲಿಗೆ 21 ವರ್ಷಗಳ ದಾಂಪತ್ಯದ ಬಳಿಕ ಶಾಖರಾ ವಿಚ್ಛೇದನ ನೀಡಿದ್ದರು. 1991ರಲ್ಲಿ ಶಾಖರಾಗೆ ಮತ್ತು ಬರುವ ಔಷಧಿ ಕುಡಿಸಿ, ಆಕೆಯನ್ನು ಶ್ರದ್ಧಾನಂದ ಸಜೀವವಾಗಿ ಹೂತು ಹಾಕಿದ್ದ. 1994ರಲ್ಲಿ ಶ್ರದ್ಧಾನಂದನ ಬಂಧನವಾಗಿ, 2000ದಲ್ಲಿ ಆತನಿಗೆ ಗಲ್ಲು ಶಿಕ್ಷೆಯಾಗಿತ್ತು. 2008ರಲ್ಲಿ ಅದನ್ನು ಸುಪ್ರೀಂ ಕೋರ್ಟ್ ಜೀವಿತಾವಧಿ ಶಿಕಷೆಯಾಗಿ ಪರಿವರ್ತಿಸಿತ್ತು.
ಈಗ ಶ್ರದ್ಧಾನಂದನಿಗೆ 80ಕ್ಕೂ ಹೆಚ್ಚು ವಯಸ್ಸಾಗಿದೆ. 1994ರಿಂದ ಜೈಲಿನಲ್ಲಿದ್ದಾನೆ. ಗಲ್ಲು ಶಿಕ್ಷೆಗೊಳಗಾಗಿದ್ದಾಗ ಮೂರು ವರ್ಷ ಏಕಾಂತವಾಸದಲ್ಲೂ ಇದ್ದ. ಹಲವು ಕಾಯಿಲೆಗಳೂ ಆತನನ್ನು ಬಾಧಿಸುತ್ತಿವೆ.
ಇದನ್ನೂ ಓದಿ | Nalini Sriharan | ರಾಜೀವ್ ಗಾಂಧಿ ಹತ್ಯೆ ಕೇಸ್‌ನಲ್ಲಿ ಜೈಲಿನಿಂದ ಹೊರಬಂದ ನಳಿನಿ ಶ್ರೀಹರನ್ ಹೇಳಿದ್ದೇನು?