ವಾಷಿಂಗ್ಟನ್ ಡಿಸಿ, ಅಮೆರಿಕ: ಭಾರತ ಮತ್ತು ಅಮೆರಿಕಗಳೆರಡೂ ಸೇರಿ 21ನೇ ಶತಮಾನವನ್ನು ರೂಪಿಸಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (President Joe Biden) ಅವರು ಗುರುವಾರ ಹೇಳಿದರು. ಶ್ವೇತಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬಳಿಕ ಮಾತನಾಡಿದ ಬೈಡೆನ್ ಅವರು, ಎರಡು ಮಹಾನ್ ರಾಷ್ಟ್ರಗಳು, ಎರಡು ಮಹಾನ್ ಶಕ್ತಿಗಳು, ಇಬ್ಬರು ಮಹಾನ್ ಸ್ನೇಹಿತರು 21 ನೇ ಶತಮಾನದ ಹಾದಿಯನ್ನು ವ್ಯಾಖ್ಯಾನಿಸಬಹುದು ಎಂದು ಪುನುರುಚ್ಚರಿಸಿದರು. ಇದೇ ವೇಳೆ, ಬೈಡೆನ್ ಅವರು ಧಾರ್ಮಿಕ ಸ್ವಾತಂತ್ರ್ಯದ (Religious Pluralism) ಪ್ರಾಮುಖ್ಯತೆಯು ಉಭಯ ರಾಷ್ಟ್ರಗಳ ಪ್ರಮುಖ ತತ್ವವಾಗಿದೆ ಎಂದು ಅಭಿಪ್ರಾಯಪಟ್ಟರು(PM Modi Visit US).
ಉಭಯ ರಾಷ್ಟ್ರಗಳು ಈಗ ತೆಗೆದುಕೊಳ್ಳುವ ನಿರ್ಧಾರಗಳು ಮಹತ್ವದ್ದಾಗಿವೆ. ಭವಿಷ್ಯದ ಪೀಳಿಗೆಯ ಮೇಲೆ ಅವುಗಳ ಪ್ರಭಾವ ಬೀರಲಿದೆ. ಆರೋಗ್ಯ ರಕ್ಷಣೆ, ಹವಾಮಾನ ಬದಲಾವಣೆ ಮತ್ತು ಉಕ್ರೇನ್-ರಷ್ಯಾ ಸಂಘರ್ಷದಿಂದ ಉದ್ಭವಿಸುವ ಸವಾಲುಗಳು ಸೇರಿದಂತೆ ಹಲವಾರು ನಿರ್ಣಾಯಕ ವಿಷಯಗಳ ಕುರಿತು ಅಮೆರಿಕ ಮತ್ತು ಭಾರತ ಜತೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದರು.
ಇದೇ ವೇಳೆ, ಬೈಡೆನ್ ಅವರು ಧಾರ್ಮಿಕ ಸ್ವಾತಂತ್ರ್ಯದ ಪ್ರಾಮುಖ್ಯತೆಯು ಉಭಯ ರಾಷ್ಟ್ರಗಳ ಪ್ರಮುಖ ತತ್ವವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾನೂನಿನಡಿಯಲ್ಲಿ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಬಹುತ್ವ ಮತ್ತು ನಮ್ಮ ಜನರ ವೈವಿಧ್ಯತೆ… ಈ ಮೂಲ ತತ್ವಗಳು ನಮ್ಮ ಪ್ರತಿಯೊಂದು ರಾಷ್ಟ್ರಗಳ ಇತಿಹಾಸದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ವಿಕಸನಗೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: PM Modi US Visit: ಶ್ವೇತಭವನದಲ್ಲಿ ಮೋದಿಗೆ ಭವ್ಯ ಸ್ವಾಗತ; ವಿಶ್ವ ಶಾಂತಿಗೆ ಅಮೆರಿಕ-ಭಾರತ ಜತೆಗೂಡಿ ಕಾರ್ಯ ಅಂದ್ರು ಪಿಎಂ
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಶಾಂತಿಗಾಗಿ ಅಮೆರಿಕ ಹಾಗೂ ಭಾರತಗಳೆರಡೂ ಜತೆಯಾಗಿ ಕೆಲಸ ಮಾಡಲಿವೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿದೆ. ಎರಡೂ ದೇಶಗಳ ಸಂವಿಧಾನಗಳು ‘ನಾವು ಜನರು’ ಎಂಬ ಪದಗುಚ್ಛದಿಂದ ಪ್ರಾರಂಭವಾಗುತ್ತವೆ. ಎರಡೂ ದೇಶಗಳು ತಮ್ಮ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡುತ್ತವೆ. ಕರೋನಾ ನಂತರದ ಯುಗದಲ್ಲಿ ಜಗತ್ತು ಹೊಸ ರೂಪ ಪಡೆಯುತ್ತಿದೆ. ಜಾಗತಿಕ ಕಲ್ಯಾಣ, ವಿಶ್ವ ಶಾಂತಿ ಮತ್ತು ಸ್ಥಿರತೆಗಾಗಿ ಒಟ್ಟಾಗಿ ಕೆಲಸ ಮಾಡಲು ನಾವು ಒಗ್ಗಟ್ಟಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಹೇಳಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.