ಮುಂಬೈ: ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ (Mumbai-Pune Expressway)ಯಲ್ಲಿ ಭೀಕರ ರಸ್ತೆ ಅಪಘಾತ ಸಂಭಿಸಿದ್ದು, ಐವರು ಭಕ್ತರು ಮೃತಪಟ್ಟಿದ್ದಾರೆ. ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ (Road Accident). ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರು ಆಷಾಢ ಏಕಾದಶಿ ಆಚರಣೆಗಾಗಿ ಮುಂಬೈ ಬಳಿಯ ತಮ್ಮ ಊರಾದ ಡೊಂಬಿವ್ಲಿಯಿಂದ ಪಂಢರಪುರಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಕಮರಿಗೆ ಬಿದ್ದಿದೆ. ʼʼಡೊಂಬಿವ್ಲಿಯಿಂದ ಒಟ್ಟು 42 ಪ್ರಯಾಣಿಕರು ಪಂಢರಪುರಕ್ಕೆ ತೆರಳುತ್ತಿದ್ದಾಗ ಅಡ್ನೆ ಗ್ರಾಮದ ಬಳಿ ಈ ಅಪಘಾತ ನಡೆದಿದೆʼʼ ಎಂದು ಡಿಸಿಪಿ ವಿವೇಕ್ ಪನ್ಸಾರೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
#WATCH | The bus was retrieved with the help of a crane. Vehicle movement resumes after 3 hours on the Mumbai- Lonavala lane of the Mumbai Express Highway. https://t.co/nIaIt4kOhk pic.twitter.com/5V3YjnZDSh
— ANI (@ANI) July 15, 2024
“ಆಷಾಢ ಏಕಾದಶಿ ಹಿನ್ನಲೆಯಲ್ಲಿ ಭಕ್ತರು ಖಾಸಗಿ ಬಸ್ ಮೂಲಕ ಪಂಢರಪುರಕ್ಕೆ ಹೋಗುತ್ತಿದ್ದರು. ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದೆ. ಗಾಯಗೊಂಡ 42 ಜನರನ್ನು ಎಂಜಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮೂವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 5 ಜನರು ಪ್ರಾಣ ಕಳೆದುಕೊಂಡಿರುವುದನ್ನು ವೈದ್ಯರು ದೃಢಪಡಿಸಿದ್ದಾರೆʼʼ ಎಂದು ವಿವೇಕ್ ಪನ್ಸಾರೆ ಮಾಹಿತಿ ನೀಡಿದ್ದಾರೆ.
ಗುಜರಾತ್‌ನಲ್ಲಿ ಭೀಕರ ರಸ್ತೆ ಅಪಘತಾಕ್ಕೆ 6 ಮಂದಿ ಬಲಿ
ಗಾಂಧಿನಗರ: ಇತ್ತ ಗುಜರಾತ್‌ನಲ್ಲಿಯೂ ಭೀಕರ ರಸ್ತೆ ಅಪಘಾತ ಸಂಭವಿಸಿ 6 ಮಂದಿ ಮೃತಪಟ್ಟಿದ್ದಾರೆ. ಗುಜರಾತ್‌ನ ಆನಂದ್ ಪಟ್ಟಣದ ಬಳಿ ಅಹಮದಾಬಾದ್-ವಡೋದರಾ ಎಕ್ಸ್‌ಪ್ರೆಸ್ ವೇಯಲ್ಲಿ ಸೋಮವಾರ ಬೆಳಿಗ್ಗೆ ವೇಗವಾಗಿ ಚಲಿಸುತ್ತಿದ್ದ ಟ್ರಕ್ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟು ಮತ್ತು ಆರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 4.30ರ ಸುಮಾರಿಗೆ ಆನಂದ್ ಜಿಲ್ಲೆಯ ಚಿಖೋದ್ರಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಟೈರ್ ಬದಲಾಯಿಸಲು ಅಹಮದಾಬಾದ್ ಕಡೆಗೆ ತೆರಳುತ್ತಿದ್ದ ಖಾಸಗಿ ಐಷಾರಾಮಿ ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಲಾಗಿತ್ತು. ಬಸ್‌ನಿಂದ ಕೆಳಗೆ ಇಳಿದಿದ್ದ ಪ್ರಯಾಣಿಕರು ಅಲ್ಲೇ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪೊಲೀಸರ ಪ್ರಕಾರ, ಮೃತರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Road Accident : ಲಾಂಗ್ ಡ್ರೈವ್ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ
ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಿತ್ರದುರ್ಗದ ತಳಕು ಹೈವೆ ಬ್ರೀಡ್ಜ್ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಬಳ್ಳಾರಿ ಮೂಲದ ಗೋಪಿನಾಥ್ (52), ಲಲಿತಮ್ಮ (47) ಮೃತ ದುರ್ದೈವಿಗಳು. ಬೆಂಗಳೂರಿನಲ್ಲಿ ಉಪನಯನ ಕಾರ್ಯಕ್ರಮ ಮುಗಿಸಿ, ಬಳ್ಳಾರಿಗೆ ತೆರಳುವ ವೇಳೆ ಅಪಘಾತ ನಡೆದಿದೆ. ನಿದ್ರೆಯ ಮಂಪರಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ.