Site icon Vistara News

Russia asks help | ಕಾರು, ವಿಮಾನ, ರೈಲು ಬಿಡಿಭಾಗಗಳನ್ನು ಕಳುಹಿಸಿ: ಭಾರತದ ಸಹಾಯ ಕೋರಿದ ರಷ್ಯಾ!

Russia and India

ನವದೆಹಲಿ: ಉಕ್ರೇನ್‌ ಜತೆಗಿನ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾ (Russia asks Help) ಸಹಾಯಕ್ಕಾಗಿ ಭಾರತದತ್ತ ಕೈ ಚಾಚಿದೆ. ಕಾರು, ವಿಮಾನ, ರೈಲು ಬಿಡಿಭಾಗಗಳು ಸೇರಿದಂತೆ ತನಗೆ ಅಗತ್ಯವಿರುವ 500 ಉತ್ಪನ್ನಗಳ ಪಟ್ಟಿಯನ್ನು ರಷ್ಯಾ ಭಾರತಕ್ಕೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ. ನಿರ್ಬಂಧ ಪರಿಣಾಮದ ಬಿಸಿ ಈಗ ರಷ್ಯಾಗೆ ಅನುಭವವಾಗುತ್ತಿದೆ. ತನ್ನ ದೇಶದ ಕೈಗಾರಿಕೆಗಳನ್ನು ಚಾಲನೆಯಲ್ಲಿಡಲು ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಪೂರೈಸುವಂತೆ ರಷ್ಯಾ ಭಾರತವನ್ನು ಕೇಳಿಕೊಂಡಿದೆ.

ರಷ್ಯಾ ಬೇಡಿಕೆ ಇಟ್ಟಿರವ 500 ಉತ್ಪನ್ನಗಳ ಪಟ್ಟಿಯ ಪೈಕಿ ಯಾವೆಲ್ಲ ಬೇಡಿಕೆಗಳನ್ನು ಭಾರತವು ಪೂರೈಸಲಿದೆ, ಯಾವೆಲ್ಲ ಉತ್ಪನ್ನಗಳನ್ನು ರಫ್ತು ಮಾಡಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಸಂದರ್ಭದಲ್ಲಿ ಭಾರತವು ರಷ್ಯಾ ಜತೆಗಿನ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಹೆಚ್ಚು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಿದ್ದೂ, ಕೆಲವು ಕಂಪನಿಗಳು ತಮ್ಮ ಆತಂಕಗಳನ್ನು ತೋಡಿಕೊಂಡಿವೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ರಷ್ಯಾದಲ್ಲಿನ ಮೂಲಗಳ ಪ್ರಕಾರ, ರಷ್ಯಾದ ಕೈಗಾರಿಕಾ ಮತ್ತು ವ್ಯಾಪಾರ ಸಚಿವಾಲಯವು ಕೇಳಲಾದ ಕಚ್ಚಾ ವಸ್ತುಗಳು ಮತ್ತು ಅಗತ್ಯ ಉಪಕರಣಗಳನ್ನು ಪೊರೈಸುವಂತೆ ಬೃಹತ್ ಕಂಪನಿಗಳಿಗೆ ಕೇಳಿಕೊಂಡಿದೆ.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನವೆಂಬರ್ 7ರಂದು ಒಂದು ವಾರಕಾಲ ರಷ್ಯಾ ಪ್ರವಾಸ ಕೈಗೊಂಡಿದ್ದರು. ಇದಕ್ಕೂ ಒಂದು ವಾರ ಮುಂಚೆಯೇ ರಷ್ಯಾ ತನ್ನ ಬೇಡಿಕೆ ಪಟ್ಟಿಯನ್ನು ಸಲ್ಲಿಸಿತ್ತು ಎಂದು ತಿಳಿದು ಬಂದಿದೆ. ರಷ್ಯಾದ ಮೇಲೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ನಾನಾ ವಿಧದ ನಿರ್ಬಂಧನಗಳನ್ನು ಹೇರಿವೆ. ಆದರೆ, ಈ ರಾಷ್ಟ್ರಗಳಿಗೆ ಭಾರತವು ಸೇರಿಲ್ಲ. ಹಾಗಾಗಿ, ರಷ್ಯಾ ಜತೆಗಿನ ತನ್ನ ವ್ಯಾಪಾರ ವಹಿವಾಟನ್ನು ಮುಂದುವರಿಸಿಕೊಂಡು ಬರುತ್ತಿದೆ. ಅಲ್ಲದೇ, ರಷ್ಯಾ ಮೊದಲಿನಿಂದಲೂ ಭಾರತದ ಮಿತ್ರ ರಾಷ್ಟ್ರವಾಗಿದೆ.

ಇದನ್ನೂ ಓದಿ | Russian crude oil | ರಷ್ಯಾದ ಮೂರನೇ ಎರಡರಷ್ಟು ತೈಲ ಖರೀದಿಸುತ್ತಿರುವ ಚೀನಾ, ಭಾರತ

Exit mobile version